ಬೆಂಗಳೂರು: ಸಾರಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕಿಳಿದಿದ್ದಾರೆ. ಬಸ್ ಬಂದ್ ಗೆ ಸಾರಿಗೆ ಒಕ್ಕೂಟಗಳು ಕರೆ ನೀಡಿದ ನಂತರವೂ ಸರ್ಕಾರ ಮಾತುಕತೆಗೆ ಮುಂದಾಗದೇ ಇದ್ದಿದ್ದರಿಂದಲೇ ಇವತ್ತು ಜನಸಾಮಾನ್ಯರು ಬಸ್ ಗಳಿಲ್ಲದೇ ಪರದಾಡುತ್ತಿದ್ದಾರೆ. ಸಾರಿಗೆ ನೌಕರರ ಒಕ್ಕೂಟದ ಜತೆಗೆ @BSYBJP & @LaxmanSavadi ಮಾತುಕತೆ ನಡೆಸಲಿಲ್ಲ ಯಾಕೆ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರಶ್ನಿಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಬಂದ್ ಗೆ ಮಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಹಾಗೂ ವ್ಯಪಾರ, ಕೂಲಿಗಾಗಿ ಜನ ತೆರಳಲು ಬಸ್ ಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ ಮತ್ತು ರಾಜ್ಯದಾದ್ಯಂತ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮುಷ್ಕರದಿಂದಾಗಿ ಜನ ಪರದಾಡುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಬಸ್, ಆಟೋ ಮತ್ತು ಇತರ ವಾಹನಗಳಲ್ಲಿ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪಗಳೂ ಕೇಳಿಬಂದಿವೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಎಸ್.ಆರ್.ಪಾಟೀಲ್, ಸಾರಿಗೆ ನೌಕರರ ಮುಷ್ಕರ ದಿಡೀರ್ ನಡೆಯುತ್ತಿಲ್ಲ. ನೌಕರರ ಒಕ್ಕೂಟಗಳು ಒಂದು ವಾರದ ಮೊದಲೇ ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದ್ದವು. ಜನಸಾಮಾನ್ಯರ ಬಗ್ಗೆ @BJP4Karnataka ಸರ್ಕಾರಕ್ಕೆ ಕಾಳಜಿ ಇದ್ದಿದ್ದರೆ ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳನ್ನು ಕರೆದು ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸೋ ಪ್ರಯತ್ನ ನಡೆಸಬೇಕಿತ್ತು ಎಂದಿದ್ದಾರೆ.
ಸಾರಿಗೆ ನೌಕರರ ಜತೆ ಕನಿಷ್ಠ ಸೌಜನ್ಯಕ್ಕಾದರೂ ಮಾತುಕತೆಗೆ ಮುಂದಾಗದ ಸರ್ಕಾರ ಏಕಾಏಕಿ ಖಾಸಗಿಯವರಿಂದ ಬಸ್ ಓಡಿಸುತ್ತೇವೆ ಎಂದು ಸಾರಿಗೆ ಒಕ್ಕೂಟಕ್ಕೆ ಸೆಡ್ಡು ಹೊಡೆದಿರೋದು ಹಠಮಾರಿ ಧೋರಣೆಯಲ್ಲದೇ ಮತ್ತೇನು? ಎಷ್ಟು ದಿನ ಖಾಸಗಿಯವರನ್ನ ನಂಬಿ ಬಸ್ ಓಡಿಸಲು ಸಾಧ್ಯ? ಇದರಿಂದ ತೊಂದರೆ ಅನುಭವಿಸುವವರು ಜನ ಸಾಮಾನ್ಯರಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ನೌಕರರು 6ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದಿದ್ದಾರೆ. ಈಗಿನ ಆರ್ಥಿಕ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಅನ್ನುವುದಾದರೆ ಮಾತುಕತೆಗೆ ಕರೆದು ಸರ್ಕಾರ ಸಾಧ್ಯವಾಗುವ ಪರಿಹಾರವನ್ನು ಒಕ್ಕೂಟದ ಮುಂದಿಡಬೇಕಿತ್ತು. ಮಾತುಕತೆಯನ್ನೇ ಮಾಡುವುದಿಲ್ಲ ಬೇಕಿದ್ದರೆ ಎಸ್ಮಾ ಅಸ್ತ್ರ ಪ್ರಯೋಗಿಸುತ್ತೇವೆ ಅನ್ನೊ ಸರ್ಕಾರದ ವಾದ ಸರ್ವಾಧಿಕಾರಿ ಧೋರಣೆ ಎಂದು ಕಿಡಿಕಾರಿದ್ದಾರೆ.
ಸರ್ಕಾರ ಈ ಕೂಡಲೇ ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳನ್ನು ಮಾತುಕತೆಗೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎಂದು ಆಗ್ರಹಿಸುತ್ತೇನೆ. ಮಾತುಕತೆ ನಡೆದರೆ ಅಲ್ಲವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗೋದು. @BSYBJP @LaxmanSavadi ಅವರೇ ಹಠ ಬಿಟ್ಟು ಮೊದಲು ಒಕ್ಕೂಟದ ಪ್ರತಿನಿಧಿಗಳ ಜತೆ ಮಾತುಕತೆ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ.

