ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಗುಲಾಮರಾದವರನ್ನು ದೇಶಭಕ್ತ ಎಂದು ಪೂಜಿಸಲಾಗುತ್ತಿದೆ: ಡಿ.ಕೆ.ಶಿವಕುಮಾರ್

3 years ago

#Enslaved #people #wrote #apology #letters #British #worshiped #patriots #DKShivakumar #sorryworker

ಬೆಂಗಳೂರು: ಕೋಮುವಾದಿ ಹಾಗೂ ಸರ್ವಾಧಿಕಾರ ಮನಸ್ಥಿತಿಯ ಶಕ್ತಿಗಳು ದೇಶದ ಅಧಿಕಾರದ ಗದ್ದುಗೆಯಲ್ಲಿದ್ದಾರೆ. ಈ ದುಷ್ಟ ಶಕ್ತಿಗಳು ಸಂವಿಧಾನ ಬದಲಿಸಲು ಪ್ರಯತ್ನಸಿಸುತ್ತಿಲ್ಲ, ಇತಿಹಾಸವನ್ನೇ ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪಾದಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸ್ವತಂತ್ರ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಹಿಂಸೆ, ಶಾಂತಿ, ಸೌಹಾರ್ದತೆ, ಭಾತೃತ್ವದ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿರುವ ಈ ದೇಶದಲ್ಲಿ ಧರ್ಮ, ಜಾತಿ, ವರ್ಣದ ವಿಷ ಬೀಜ ಬಿತ್ತಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ ಎಂದರು.

ಅಂದಿನ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ವಿರುದ್ಧ ನಡೆದಿತ್ತು, ಇಂದಿನ ಸಂಗ್ರಾಮ ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯಬೇಕು, ಅಂದು ಕಾಂಗ್ರೆಸ್ ನೇತೃತ್ವದಲ್ಲಿ ದೇಶವೇ ಒಂದಾಗಿತ್ತು, ಇಂದು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಂದಾಗಿದೆ ಎಂದು ಹೇಳಿದರು.

ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮೊದಲು ಕ್ರಾಂತಿಯ ಕಿಚ್ಚು ಹಚ್ಚಿದ್ದೇ ಕರ್ನಾಟಕ. ಹಾಗೆಯೇ ಈಗ ಹೊಸ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಕೂಡ ಕರ್ನಾಟಕದಲ್ಲೇ ಉದಯವಾಗಿದೆ. ಈ ಇಂಡಿಯಾಗೆ ಶಕ್ತಿ ತುಂಬಿ ದೇಶವನ್ನು ರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ ಅದು ಬದುಕಿನ ಉಸಿರು. ಹೀಗಾಗಿ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಸ್ವಾತಂತ್ರ್ಯದ ಬೆಲೆ ಗೊತ್ತಾಗುವುದು ಅದಕ್ಕಾಗಿ ಹೋರಾಡಿದವರಿಗೆ, ಪ್ರಾಣ ತೆತ್ತವರಿಗೆ, ರಕ್ತ ಸುರಿಸಿದವರಿಗೆ ಮಾತ್ರ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಪಕ್ಷ ಎನ್ನುವುದೇ ನಮ್ಮ ಹೆಮ್ಮೆ ಎಂದು ತಿಳಿಸಿದರು

ಈ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು, ದೇಶ ಕಟ್ಟಿದ್ದು. ಅಭಿವೃದ್ಧಿಯ ಪಥದಲ್ಲಿ ದೇಶವನ್ನು ನಿಲ್ಲಿಸಿದ್ದು ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯ ದಿನ ಎಂದರೆ ನಮ್ಮ ಸಾಧನೆಯ ಇತಿಹಾಸ ನೆನಪಿಸಿಕೊಳ್ಳುವ ದಿನ, ವರ್ತಮಾನದಲ್ಲಿ ನಾವು ಹೇಗಿದ್ದೇವೆ ಎಂಬುದು ಅವಲೋಕನ ಮಾಡಿಕೊಳ್ಳುವ ದಿನ ಎಂದು ಹೇಳಿದರು.

ಇಂದು ನಾವು ಬರೀ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದರೆ ಸಾಲದು ನಮ್ಮ ದೇಶದ ಸ್ವಾತಂತ್ರ್ಯ ಏನಾಗಿದೆ ಎಂದು ಅರಿಯಬೇಕಿದೆ. ಮಣಿಪುರದಲ್ಲಿ ಮಾರಣಹೋಮ, ಹರಿಯಾಣದ ಗಲಭೆ, ಉತ್ತರ ಪ್ರದೇಶದ ಗುಂಪು ಹತ್ಯೆಗಳನ್ನು ನೋಡಿದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕೇನಾಗಿದೆ, ಅದು ಯಾರ ಕೈಯಲ್ಲಿ ನಲುಗುತ್ತಿದೆ ಎಂಬುದು ತಿಳಿಯುತ್ತದೆ. ಸ್ವಾತಂತ್ರ್ಯದ ಮೂಲ ಗುರಿಯಾದ ಐಕ್ಯತೆ, ಸಮಗ್ರತೆ, ಸಹಬಾಳ್ವೆ, ಕೋಮು ಸೌಹಾರ್ದತೆ ಇಂದು ದಿಕ್ಕಾಪಾಲಾಗಿದೆ ಎಂದು ವಿಷಾದಿಸಿದರು.

ಬಿಜೆಪಿಯವರಿಗೆ ಸ್ವಾತಂತ್ರ್ಯದ ಮಹತ್ವ ಗೊತ್ತಿಲ್ಲ, ಏಕೆಂದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇತಿಹಾಸ ಬಿಜೆಪಿಗೆ ಇಲ್ಲ ಎಂದರು.

ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ನಮ್ಮ ಯುವ ಪೀಳಿಗೆಗೆ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ನಾವು ಎಡವಿದ ಪರಿಣಾಮ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಗುಲಾಮರಾದವರನ್ನು ದೇಶಭಕ್ತ ಎಂದು ಪೂಜಿಸಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಿಟ್ಟ ಗಾಂಧೀಜಿ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಮಾಜಿ ಸಚಿವ ಹೆಚ್.ಎಂ ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply