ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ತಾತ್ಕಾಲಿಕವಾಗಿ ಸ್ಥಗಿತ

3 years ago

#Election #Hullenahalli #Milk #Producers #CooperativeSociety #suspended #ramnagar

ರಾಮನಗರ: ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ಕಾರಿನಲ್ಲಿ ಮಾಗಡಿ ಕುಣಿಗಲ್ ರಸ್ತೆಯಲ್ಲಿ ತೆರಳುತ್ತಿದ್ದ ಚುನಾವಣಾಧಿಕಾರಿಗಳನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು  ಮಾರಕಾಸ್ತ್ರ ತೋರಿಸಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದರೋಡೆ ಮಾಡಿದ್ದಾರೆ.

ಮಾಗಡಿ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ತೆರಳುತ್ತಿದ್ದ ಚುನಾವಣಾಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಅವರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಚುನಾವಣಾ ಪರಿಕರಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬೊಲೇರೊ ಕಾರಿನಲ್ಲಿ ತೆರಳುತ್ತಿದ್ದ ಚುನಾವಣಾಧಿಕಾರಿ ಉಮೇಶ್ ಹಾಗೂ ಉಷಾ ಸೇರಿದಂತೆ ಐವರು ಚುನಾವಣಾ ಸಿಬ್ಬಂದಿಯನ್ನು ಸ್ಯಾಂಟ್ರೋ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳ ತಂಡವು ಅಡ್ಡಗಟ್ಟಿದೆ.

ನಂತರ, ನೀವು ಯಾರೆಂದು ಕೇಳಿದಾಗ ಚುನಾವಣಾ ಸಿಬ್ಬಂದಿಯು ಗುರುತಿನ ಚೀಟಿಯನ್ನು ತೋರಿಸಿ ಅಡ್ಡಗಟ್ಟಿರುವುದನ್ನು ಬಿಡುವಂತೆ ತಿಳಿಸಿದ್ದಾರೆ.

ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ ತಡೆಯುವ ಉದ್ದೇಶಕ್ಕೆಂದೇ ಬಂದಿರುವಂತೆ ಕಾಣಿಸುತ್ತಿದ್ದ ದುಷ್ಕರ್ಮಿಗಳು ಚುನಾವಣಾ ಸಿಬ್ಬಂದಿ ಇವರೇ ಎಂಬುದು ಖಚಿತವಾಗುತ್ತಿದ್ದಂತೆ ಐದು ಜನರಲ್ಲಿ ಇಬ್ಬರು ಕಾರನ್ನು ಇಳಿದು ಅವರ ಬಳಿಯಿದ್ದ ಎಲ್ಲ ಚುನಾವಣಾ ಸಂಬಂಧಿತ ಪರಿಕರಗಳನ್ನು ದೋಚಿ ಪರಾರಿಯಾಗಿದ್ದಾರೆ.

ಆಗ ಪರಿಕರಗಳನ್ನು ಕಿತ್ತುಕೊಳ್ಳಲು ಮುಂದಾದ ದುಷ್ಕರ್ಮಿಗಳನ್ನು ತಡೆಯಲು ಬಂದವರಿಗೆ ಹಲ್ಲೆ ಮಾಡಿದ್ದಾರೆ. ನಂತರ, ಸ್ಯಾಂಟ್ರೋ ಕಾರಿನಲ್ಲಿ ಹತ್ತಿಕೊಂಡು ಕಾರನ್ನು ಪರಾರಿಯಾಗಿದ್ದಾರೆ.

ಈ ಆತಂಕದ ನಡುವೆಯೂ ಚುನಾವಣಾ ಸಿಬ್ಬಂದಿಯೊಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡುವ ದೃಶ್ಯ ಹಾಗೂ ಆರೋಪಿಗಳ ಕಾರು ಆಕ್ಸಿಡೆಂಟ್‌ ಮಾಡಲು ಮುಂದಾದ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.

ಈ ಘಟನೆಯಿಂದ ಇಂದು ಬೆಳಗ್ಗೆ ನಡೆಯಬೇಕಿದ್ದ ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಈ ಘಟನೆಯು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಚುನಾವಣಾ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಪೊಲಿಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply