ಮಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ಮೈತ್ರಿಯ ಭಾವನೆ ಅಗತ್ಯ ಎಂದು ಸಾಹಿತಿ, ವಿಮರ್ಶಕ ಕೆ. ಫಣಿರಾಜ್ ಪ್ರತಿಪಾದಿಸಿದರು.
ನಗರದ ಪುರಭವನದಲ್ಲಿ ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು ಎಂಬ ತತ್ವದಡಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದ್ವೇಷ ಎನ್ನುವುದು ಬಹಳ ಸರಳವಾದ ವಿಷಯ, ಪ್ರೀತಿಯೆಂಬುವುದು ಸರಳವಲ್ಲ. ಅಧಿಕಾರಕ್ಕಾಗಿ, ಹಣಕ್ಕಾಗಿ ವೇಷ ಮಾಡುವುದು ಸುಲಭ, ಅದಕ್ಕೆ ಪ್ರಚೋದನೆ ನೀಡಲು ಹಲವರಿದ್ದಾರೆ. ಅಂತಹ ಸಂದರ್ಭಲ್ಲಿ ಪ್ರೀತಿಸುವ ಗುಣವು ನಿಜವಾದ ಒಂದು ಆಧ್ಯಾತ್ಮವಾಗಿದೆ. ಭಾರತ ಬಹಳ ದೊಡ್ಡ ಕೋಮು ಹಿಂಸೆಯನ್ನು ಅನುಭವಿಸಿದೆ, ಮತೀಯ ದ್ವೇಷದಿಂದ ಒಬ್ಬರನ್ನು ಒಬ್ಬರು ಕೊಂದಿದ್ದಾರೆ, ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ಸಹೋದರತ್ವ ಎನ್ನುವ ಭಾವನೆ ದಿನನಿತ್ಯ ಮಾಡುವ ಊಟ, ನಿದ್ದೆಯ, ಉಸಿರಾಡುವ ಗಾಳಿಯ ಹಾಗೇ ದಿನನಿತ್ಯದ ಮೌಲ್ಯವಾಗದೆ ಹೋದರೆ ಸಾಮಾಜಿಕ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ. ಕಾನೂನಿನ ಆಸರೆಯಲ್ಲಿ ಸಮಾನತೆಯನ್ನು ರಕ್ಷಿಸಲು ಸಾಧ್ಯವಿಲ್ಲ ಮತ್ತು ಬಹಳ ದಿವಸ ಉಳಿಯುವುದಿಲ್ಲ. ಸಮಾನತೆ, ಭ್ರಾತೃತ್ವ ಬಹಳ ದಿನ ಉಳಿಯಬೇಕಾದರೆ ಸಮಾನ ಸಂಪನ್ಮೂಲ ಹಂಚಿಕೆಯಾಗುವ ಕ್ರಮವಾಗಬೇಕು. ಸ್ನೇಹದ ಭಾವನೆ ಅಂದರೆ ಮೈತ್ರಿಯ ಭಾವವನ್ನು ಕೆಡಿಸುವವರಿಂದ ಸಂಘರ್ಷ ಉಂಟಾಗುತ್ತಿದೆ ಎಂದು ಹೇಳಿದರು.



