ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ಹೊಸಪೇಟೆ, ಕಾರವಾರ ಸೇರಿದಂತೆ ಹಲವು ಕಡೆ ಗಣಿ ಉದ್ಯಮಿಗಳು ಮತ್ತು ಜನಪ್ರತಿನಿಧಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
- ರೌಡಿಗಳ ಜೊತೆ ಸೆಲ್ಫಿ, ಡ್ರಗ್ಸ್ ದಂಧೆಗೆ ಬ್ರೇಕ್
- ಅಥಣಿಯಲ್ಲಿ ಭೀಕರ ಅಪಘಾತ: ಟಿಪ್ಪರ್ ಹರಿದು ವೃದ್ಧ ಸ್ಥಳದಲ್ಲೇ ಸಾವು
ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ಕಾರವಾರ ನಿವಾಸ, ಬಳ್ಳಾರಿಯ ಗಣಿ ಉದ್ಯಮಿಗಳಾದ ಕಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಮನೆಗಳು, ಕಚೇರಿಗಳ ಮೇಲೆ ಮುಂಜಾನೆಯೇ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದರು.
ಕಾರವಾರಕ್ಕೆ 6 ಕಾರುಗಳಲ್ಲಿ ಬಂದಿರುವ 24ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಸತೀಶ್ ಸೈಲ್ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಿದರು. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಕಾರಣ ಶಾಸಕ ಸೈಲ್ ಬೆಂಗಳೂರಿನಲ್ಲಿದ್ದಾರೆ. ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿದ್ದ ಸೈಲ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಹೈಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡಿದ್ದರು.
ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ದೋಷಿ ಎಂದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.
ನಂತರ ಬೇಲೆಕೇರಿ ಅದಿರು ಸಾಗಾಟ ಪ್ರಕರಣ ಸಂಬಂಧಿತ 6 ಪ್ರಕರಣಗಳಲ್ಲಿ ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 44 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು.
ಇದರಿಂದ ಜೈಲು ಪಾಲಾಗಿದ್ದ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ ಎದುರಿಸುತ್ತಿದ್ದರು. ನಂತರ ಈ ತೀರ್ಪಿನ ವಿರುದ್ಧ ಸೈಲ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನವೆಂಬರ್ ನಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ಸೈಲ್ ಅವರಿಗೆ ವಿಧಿಸಿರುವ ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿಡಲು ಸೂಚಿಸಿತ್ತು. ದಂಡ ಮೊತ್ತದ ಶೇ 25 ರಷ್ಟನ್ನು ಠೇವಣಿ ಇಡುವಂತೆ ಸೂಚನೆ ನೀಡಿದ್ದ ಹೈಕೋರ್ಟ್ ಸೈಲ್ಗೆ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿಯಿಂದ ಬಚಾವಾಗಿದ್ದರು.
ಹೊಸಪೇಟೆಯಲ್ಲಿ ದಾಳಿ: ಮತ್ತೊಂದೆಡೆ ಕಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಮನೆಗಳು, ಕಚೇರಿಗಳ ಮೇಲೆ ಬೆಳಿಗ್ಗೆ 5.30ರಿಂದ ಪರಿಶೀಲನೆ ನಡೆಸಲಾಯಿತು.
ಕಾರದಪುಡಿ ಮಹೇಶ್ ಅವರು ನಗರಸಭಾ ಸದಸ್ಯರೂ ಆಗಿದ್ದು, ಜೆ.ಪಿ.ನಗರದಲ್ಲಿ ಅವರ ಮನೆ ಇದೆ. ಬಳ್ಳಾರಿ ಸರ್ಕಲ್‌ನಲ್ಲಿ ‘ಸರ್ವ ಜನ ಸುಖಿನೋ ಭವಂತು’ ಎಂಬ ಉಚಿತ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವರು ಹೊಂದಿದ್ದು, ಅಲ್ಲಿ ಅವರಿಗೆ ಸಂಬಂಧಿಸಿದ ಕಚೇರಿ, ಸ್ಟೀಲ್ ಅಂಗಡಿಯೂ ಇದೆ. ಈ ಮೂರೂ ಕಡೆ ಇ.ಡಿ ಯಿಂದ ಪರಿಶೀಲನೆ ನಡೆಸಿದೆ.
ಸ್ವಸ್ತಿಕ್ ನಾಗರಾಜ್ ಅವರ ಮನೆ ರಾಜೀವ್ ನಗರದಲ್ಲಿದ್ದು, ಎಪಿಎಂಸಿ ಬಳಿ ಅವರ ಕಚೇರಿ ಮತ್ತು ಸ್ಟೀಲ್ ಅಂಗಡಿ ಇದೆ. ಈ ಮೂರು ಕಡೆಗಳಲ್ಲಿ ಸಹ ಅಧಿಕಾರಿಗಳಿಂದ ತಪಾಸಣೆ ನಡೆದಿದೆ.


