ಬೆಂಗಳೂರು: ಕಾಂಗ್ರೆಸ್ ಸರ್ಕಾರ ಶತದಿನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಈವರೆಗೂ ಸಾಧಿಸಿದ ಅಭಿವೃದ್ಧಿಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಪರಿಶೀಲನೆಗೆ ಮುಂದಾಗಿದ್ದಾರೆ.
ನಾಳೆ ಲೋಕೋಪಯೋಗಿ, ನಗರಾಭಿವೃದ್ಧಿ ನಗರ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಹಾಗೂ ಸಣ್ಣ ನೀರಾವರಿ ಇಲಾಖೆ ಸೇರಿ 8 ಇಲಾಖೆಗಳಲ್ಲಿ ಈವರೆಗೂ ನಡೆದಿರುವ ಭೌತಿಕ ಮತ್ತು ಆರ್ಥಿಕ ಪ್ರಗತಿಗಳನ್ನು ಪರಿಶೀಲನೆ ನಡೆಸಲಿದ್ದಾರೆ.
ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸಂಪುಟ ಸೇರ್ಪಡೆಯಾದ ಸಚಿವರಿಗೆ ಪ್ರತಿ ತಿಂಗಳ ಪ್ರಗತಿಯ ಮಾಸಿಕ ವರದಿಯನ್ನು ಬಹಿರಂಗಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಅದರ ಪ್ರಕಾರ ಈವರೆಗೂ ಕೆಲವು ಇಲಾಖೆಗಳ ಸಚಿವರು ಮಾತ್ರ ನಡೆದುಕೊಳ್ಳುತ್ತಿದ್ದು, ಬಹುತೇಕರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.
ಮುಖ್ಯಮಂತ್ರಿ ಕಚೇರಿ ಕೂಡ ಪ್ರತಿ ತಿಂಗಳ ಮಾಸಿಕ ವರದಿಯನ್ನು ಬಹಿರಂಗಪಡಿಸುತ್ತಿದೆ. ನಾಳೆ ಈ ಕುರಿತು ಸಭೆ ನಡೆಸುವ ಮೂಲಕ ಪ್ರತಿ ಇಲಾಖೆಯಲ್ಲಿ ನಡೆಸಿರುವ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಮುಖ್ಯಮಂತ್ರಿ ಪರಿಶೀಲನೆ ನಡೆಸಲಿದ್ದಾರೆ.
ಒಂದೆಡೆ ಪಂಚಖಾತ್ರಿ ಯೋಜನೆಗಳಿಂದಾಗಿ ಇತರೆ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನದ ಕೊರತೆಯಾಗಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ. ಅದರ ನಡುವೆಯೂ ಚಾಲ್ತಿಯಲ್ಲಿರುವ ಯೋಜನೆಗಳ ಪ್ರಗತಿಯನ್ನು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ.
ಸರ್ಕಾರ ರಚನೆಯಾಗಿ ನೂರು ದಿನಗಳಾದ ಹಿನ್ನೆಲೆಯಲ್ಲಿ ದಿನಕ್ಕೊಂದು ಆರೋಪದಂತೆ ನೂರು ಟೀಕೆಗಳ ದೋಷಾರೋಪ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಆದರೆ ಎಲ್ಲಿಯೂ ಈವರೆಗೂ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಆರೋಪಗಳು ಕೇಳಿಬಂದಿಲ್ಲ. ಆದರೂ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಗಳ ಮೇಲೆ ನಿಗಾ ವಹಿಸಲು ಮುಂದಾಗಿದ್ದಾರೆ.




