ಶೋಷಿತರಿಗೆ ನ್ಯಾಯ ಒದಗಿಸಲು ದೇಶದಲ್ಲೇ ಮೊದಲ ಬಾರಿ 33 ಹೊಸ ಠಾಣೆಗಳ ಸ್ಥಾಪನೆ: ಡಾ.ಜಿ.ಪರಮೇಶ್ವರ್

6 months ago

ಬೆಂಗಳೂರು: ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ದೇಶದಲ್ಲೇ ಮೊದಲ ಬಾರಿಗೆ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್ ಇ)ದ 33 ಹೊಸ ಠಾಣೆಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ ಎಂದು  ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಪ್ರಗತಿಯ ಸ್ತಂಭಗಳು ಕಿರುಹೊತ್ತಿಗೆ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಡಿಸಿಆರ್ ಇ ಠಾಣೆಗಳಲ್ಲಿ ನೊಂದವರು ದೂರು ನೀಡಬಹುದು ಎಂದು ಹೇಳಿದರು.

ಇದಲ್ಲದೇ ಶೋಷಿತರು ಡಿಸಿಆರ್ ಇ ಗೆ ಸಂಬಂಧಿಸಿದ ದೂರುಗಳನ್ನು ಹತ್ತಿರದ ಠಾಣೆಗೆ ನೀಡಿದರೂ ಅವು ಡಿಸಿಆರ್ ಇ ವರ್ಗಾವಣೆಗೊಂಡು ನ್ಯಾಯ ದೊರೆಯಲಿದೆ ಇಂತಹ ವ್ಯವಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ಅರಂಭಗೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹೊಸದಾಗಿ 12 ಸಂಚಾರ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ, ಕೆಜಿಎಫ್ ಹಾಗೂ ದೇವನಹಳ್ಳಿಯ ಅವನತಿ ಬಳಿ ರಾಜ್ಯ ಮೀಸಲುಪಡೆಯ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ಪೊಲೀಸರು ತಂತ್ರಜ್ಞಾನ ಬಳಕೆ ಮಾಡಿಕೊಂಡು ಅಪರಾಧ ಪತ್ತೆಗೆ ತ್ವರಿತ ಕ್ರಮ ಕೈಗೊಳ್ಳುವುದು, ಯಾವುದೇ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನಾಗರೀಕ ಕೇಂದ್ರಿತವಾಗಿ ಕೆಲಸ ಮಾಡುವಲ್ಲಿ ರಾಜ್ಯ ಪೊಲೀಸರು ಶ್ರಮಿಸುತ್ತಿದ್ದಾರೆ ಎಂದರು.

ಕರ್ನಾಟಕ ಪೊಲೀಸ್ ನೊಂದವರಿಗೆ ನ್ಯಾಯನೀಡಿಕೆಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಹೊಸ ಆವಿಷ್ಕಾರ ಬದಲಾವಣೆಜೊತೆಗೆ ಅನೇಕ ಸವಾಲು ಎದುರಿಸಿ ಪೊಲೀಸರು ಕೆಲಸ ಮಾಡಲಿದ್ದಾರೆ ಎಂದರು.

ಪೊಲೀಸ್ ಇಲಾಖೆಯಿಂದ ಯಾರಿಗೂ ತೊಂದರೆ ಆಗಬಾರದು. ಜನ ಸ್ನೇಹದಿಂದ ಕೆಲಸಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದೇಶದಲ್ಲೇ ರಾಜ್ಯದ ಪೊಲೀಸರು ಮುಂಚೂಣಿಯಲ್ಲಿದ್ದಾರೆ ಎಂದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಎಂ.ಎ.ಸಲೀಂ, ಡಿಜಿಪಿಗಳಾದ ಪ್ರಶಾಂತ್ ಕುಮಾರ್ ಠಾಕೂರ್, ಪ್ರಣಬ್ ಮೊಹಾಂತಿ, ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಎಡಿಜಿಪಿಗಳಾದ  ದಯಾನಂದ, ಹರಿಶೇಖರನ್, ಸೌಮೇಂದು ಮುಖರ್ಜಿ, ಹಿತೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Leave a Reply