ಡಿ ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ಸಿನ ಎಲ್ಲ 136 ಶಾಸಕರ ಬೆಂಬಲ ಇದೆ: ಜಮೀರ್ ಅಹ್ಮದ್ ಖಾನ್

5 months ago

ಬೆಂಗಳೂರು: ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ಸಿನ ಎಲ್ಲ 136 ಶಾಸಕರ ಬೆಂಬಲ ಇದೆ. ಆದರೆ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು ತಮ್ಮ ಅಧಿಕಾರ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಯಕತ್ವ ಬದಲಾವಣೆ ವಿಚಾರ ಸದ್ಯಕ್ಕೆ ಇಲ್ಲ ಈಗ ಸಂಪುಟ ಪುನಾರಚನೆ ಸಾಧ್ಯತೆ ಇದೆ. ಹಾಗಾಗಿ ಶಾಸಕರಿಗೆ ಮಂತ್ರಿಯಾಗಬೇಕೆಂಬ ಆಸೆಯಿದೆ. ಎಲ್ಲರಿಗೂ ಒಂದು ಅವಕಾಶ ಬೇಕು ಅಂತ ಇದೆ. ನಾನು ಮೊದಲ ಬಾರಿ ಶಾಸಕನಾದಗಲೇ ನಾನು ಸಚಿವನಾಗಿದ್ದೆ. ಮೊದಲ ಬಾರಿ ಶಾಸಕರಾದವರು ಸಚಿವ ಆಗಬಾರದು ಅಂತ ಏನಿಲ್ಲ ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರು ಇರ್ತಾರೆ. 2028 ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರ್ತಾರೆ. ನಾವೆಲ್ಲರೂ ಹೈಕಮಾಂಡ್ ಮಾತು ಕೇಳೋರು. ಶೀಘ್ರದಲ್ಲೇ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಆಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಅವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರ್ ಅಶೋಕ್ ಕುದುರೆ ವ್ಯಾಪಾರ ಅಂದಿದ್ದಾರೆ. ಡಿಕೆಶಿ ಜೊತೆ 70 ಶಾಸಕರ ಸಂಖ್ಯೆ ಹೇಗಾಯ್ತು ಎಂದು ಕೇಳಿದರು.

ಕುದುರೆ ವ್ಯಾಪಾರ ಯಾರು ಮಾಡ್ತಿರೋದು? 2008 ರಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಅಂದು ಅವರು ಆಪರೇಷನ್ ಕಮಲ ಮಾಡಿಯೇ ಅಧಿಕಾರಕ್ಕೆ ಬಂದಿದ್ದರು ಎಂದು ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್ ಅವರು ಶಾಸಕರ ಸಹಿ ಸಂಗ್ರಹ ಮಾಡಿದ್ದಾರೆ ಎಂಬ ಮಾಹಿತಿ ಇದ್ದರೆ ತಿಳಿಸಿ. ನಾನು ಈ ಬಗ್ಗೆ ಶಾಸಕರ ಬಳಿ ಕೇಳಿದ್ದೇನೆ. ಮಂತ್ರಿಯಾಗೋಕೆ ಹೋಗಿದ್ದು ಅಂದಿದ್ದಾರೆ. ಆದರೆ 140 ಜನ ಡಿ ಕೆ ಶಿವಕುಮಾರ್ ಜೊತೆಗೂ, ಸಿದ್ದರಾಮಯ್ಯ ಜೊತೆಗೂ ಹಾಗೂ ಹೈಕಮಾಂಡ್ ಜೊತೆಗೂ ಇದ್ದಾರೆ ಎಂದು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.

ಅಧಿಕಾರ ಹಂಚಿಕೆ ವಿಚಾರವನ್ನು ಡಿ ಕೆ ಶಿವಕುಮಾರ್ ಎಲ್ಲಿ ಹೇಳಿದ್ದಾರೆ? ಆ ರೀತಿ ಎಲ್ಲಿಯೂ ಒಪ್ಪಂದ ಆಗಿಲ್ಲ. ಸಿದ್ದರಾಮಯ್ಯ ಅವರು 2028 ರವರೆಗೆ ಸಿಎಂ ಆಗಿ ಇರುತ್ತಾರೆ. ಅವರೇ ನಮ್ಮ ನಾಯಕರು ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ವಿಚಾರ ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.

Leave a Reply