ಗುಲಾಂ ನಬಿ ಆಜಾದ್ ಆರೋಪ ಶೋಭೆ ತರುವುದಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು: ನಮಗೆಲ್ಲಾ ಮಾರ್ಗದರ್ಶಕರಾಗಬೇಕಿದ್ದ ಹಿರಿಯ ನಾಯಕರಾದ #GhulamNabiAzad ಅವರ ರಾಜೀನಾಮೆ ನಿರ್ಧಾರ ಬೇಸರ, ನೋವು ತಂದಿದೆ. ಇದನ್ನು ಹೆತ್ತ ತಾಯಿಗೆ ಮಾಡಿದ ಅನ್ಯಾಯ ಎಂದು ನಾನು ಹೇಳಬಲ್ಲೆ. ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಕಾರಣವೇ ಕಾಂಗ್ರೆಸ್ ಪಕ್ಷ ಆದರೆ ಇಂದು ಅವರು ಮಾಡಿರುವ ಆರೋಪಗಳು ಅವರ ಘನತೆಗೆ ಶೋಭೆ ತರುವಂತದ್ದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆ, ಸ್ಥಾನಮಾನಗಳಿಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆಜಾದ್ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲಾ ಹುದ್ದೆ ನೀಡಿ, ಸ್ಥಾನಮಾನವನ್ನು ನೀಡಿ ಗೌರವಿಸಿದೆ. ಮುಖ್ಯಮಂತ್ರಿ, ಕೇಂದ್ರ ಸಚಿವ, ಲೋಕಸಭೆ, ರಾಜ್ಯಸಭೆಗೆ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಎಂಬುದನ್ನು ಅವರು ಮರೆತು ಆರೋಪ ಮಾಡುತ್ತಿರುವುದು ದುರಾದೃಷ್ಟಕರ ಸಂಗತಿ. ಏನೇ ಅಸಮಾನಧಾನವಿದ್ದರೂ ಕುಳಿತು ಚರ್ಚಿಸಬಹುದಿತ್ತು. ಅವರ ಈ ನಡೆ ಖಂಡನೀಯ ಎಂದರು.
ಕಾಂಗ್ರೆಸ್ ಯಾವಾಗಲೂ ಒಗ್ಗಟ್ಟಾಗೇ ಇರುತ್ತದೆ. ಪಕ್ಷಕ್ಕೆ ಯಾರೇ ಬರಲಿ, ಯಾರೇ ಹೋಗಲಿ ಕಾಂಗ್ರೆಸ್‌ನ ಯಾರೂ ಎಂದಿಗೂ ಮಟ್ಟ ಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಪ್ರಮುಖ ಶಕ್ತಿಯೇ ಗಾಂಧಿ ಕುಟುಂಬ. ಪಕ್ಷದ ಕಡೆಗೆ ನಮ್ಮ ನಿಷ್ಠೆ ಹೀಗೆ ಮುಂದುವರೆಯುತ್ತದೆ. ನಮ್ಮ ಜನಸೇವೆ ಹೀಗೆ ನಡೆಯುತ್ತಲೇ ಇರುತ್ತದೆ ಎಂದರು.




