ಬೆಂಗಳೂರು: ಬಿಜೆಪಿಗರು ಸೃಷ್ಟಿಸಿರುವ critical social discourse ನ ಬಗ್ಗೆ ಅರಿವಿದ್ದೂ ಕೂಡಾ ಗುಲಾಮ್ ನಬಿ ಆಜಾದ್ ಅಂತಹ ಹಿರಿಯ ನಾಯಕರು ತಾವು ಹಂತ ಹಂತವಾಗಿ ಬೆಳೆದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಬೇಸರದ ಸಂಗತಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಇವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಿಂದ ಪಕ್ಷಕ್ಕೆ ಲಾಭ ಆಗುತ್ತದೋ ಇಲ್ಲವೇ ನಷ್ಟವಾಗುತ್ತದೋ ಎಂಬ ಚರ್ಚೆ ಬೇರೆ. ಆದರೆ ಸಮಾಜದ ತಿಳುವಳಿಕೆಯ ಜೊತೆಗೆ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಕೋಮುವಾದಿಗಳ ಹಾವಳಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹೋರಾಟದ ನೊಗ ಹೊರಬೇಕಿದ್ದ ಗುಲಾಮ್ ನಬಿ ಆಜಾದ್ ಅವರು ಹೋರಾಟದಿಂದ ಹಿಂದೆ ಸರಿದಿದ್ದು ರಾಹುಲ್ ಅವರನ್ನೇ ಅನಗತ್ಯವಾಗಿ ಟೀಕಿಸುವ ಕೋಮುವಾದಿಗಳ ಪರಿಪಾಠವನ್ನು ಬೆಳೆಸಿಕೊಂಡಿರುವುದು ತರವಲ್ಲ. ಈ ಸಂದರ್ಭವು ಚುನಾವಣಾ ಸೋಲು ಗೆಲವು ಮತ್ತು ಅಧಿಕಾರದ ವಿಚಾರವನ್ನು ಮೀರಿ, ಪ್ರಜಾಪ್ರಭುತ್ವದ ಉಳಿವು ಎಂಬ ಸಂದರ್ಭಕ್ಕೆ ಬಂದು ನಿಂತಿದೆ ಎಂದು ವಿಶ್ಲೇಷಿಸಿದ್ದಾರೆ.
ಚುನಾವಣಾ ಗೆಲುವುಗಳೇ criteria ಆಗಿದ್ದರೆ ಮಧ್ಯ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಛತ್ತೀಸ್ ಗಡ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಬಿಜೆಪಿಗರ ಅಕ್ರಮ ಮಾರ್ಗಕ್ಕೆ ಸಿಲುಕಿ ಸರ್ಕಾರ ಕಳೆದುಕೊಳ್ಳುವ ಸಂದರ್ಭ ಎದುರಿಸಿದೆ. ಈ ಎಲ್ಲಾ ಗೆಲುವುಗಳ ಸಂದರ್ಭದಲ್ಲೂ ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿದ್ದರು. ಇಂತಹ ಸರಳ ಸಂಗತಿಗಳನ್ನು ಆಜಾದ್ ಅವರು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ನೆನಪಿಸಿದ್ದಾರೆ.
ಕೊನೆಯದಾಗಿ ಹೇಳುವುದಾದರೆ, ಪ್ರಬಲವಾದ ಜನಪರ ಸಿದ್ಧಾಂತ ಇಲ್ಲದ ಯಾವುದೇ ವ್ಯಕ್ತಿಗಳಿಂದ ಒಂದು ರಾಜಕೀಯ ಪಕ್ಷವಾಗಲೀ ಇಲ್ಲವೇ ಸಂವಿಧಾನಾತ್ಮಕ ಪ್ರಜಾಪ್ರಭುತ್ವವಾಗಲೀ ಉಳಿಯುವುದಿಲ್ಲ. ಅದು ಆಜಾದ ಆದರೂ ಅಷ್ಟೇ ಇನ್ಯಾರೇ ಆದರೂ ಅಷ್ಟೇ! ಎಂದಿದ್ದಾರೆ.




