ಬರ ಪರಿಹಾರ ಹಣವನ್ನು ಸಾಲದ ಖಾತೆಗೆ ಜಮಾ ಮಾಡದಂತೆ ದಿವ್ಯ ಪ್ರಭು ಸೂಚನೆ

2 years ago

ಧಾರವಾಡ: ಸರಕಾರ ಯಾವುದೇ ಪ್ರೋತ್ಸಾಹ ಧನ ಅಥವಾ ಸಹಾಯ ಧನವನ್ನು ರೈತರ ಹಾಗೂ ಸಾರ್ವಜನಿಕರ ಜೀವನೋಪಾಯಕ್ಕಾಗಿ ಬಿಡುಗಡೆ ಮಾಡುತ್ತದೆ. ಆದ್ದರಿಂದ ಬರ ಪರಿಹಾರದ ಹಣ ಸೇರಿದಂತೆ ವೃದ್ಯಾಪ್ಯ ವೇತನ, ಅಂಗವಿಕಲರ ಮಾಶಾಸನ, ನರೆಗಾ ಕೂಲಿ ಹಾಗೂ ಇತರೆ ಸರಕಾರದಿಂದ ಬಿಡುಗಡೆ ಆಗಿರುವಂತಹ ಪ್ರೋತ್ಸಾಹ ಧನ ನೇರವಾಗಿ ಫಲಾನುಭವಿಗಳ ಖಾತೆಗೆ (ಡಿಬಿಟಿ ಮೂಲಕ) ಸಂದಾಯವಾಗಿರುವಂತಹ ಹಣವನ್ನು ಯಾವುದೇ ಕಾರಣಕ್ಕೆ ಸಾಲದ ಖಾತೆಗೆ ಜಮಾ ಮಾಡಬಾರದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಸರಕಾರದಿಂದ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವು ಬ್ಯಾಂಕಿನಲ್ಲಿ ಸಾಲದ ಖಾತೆಗೆ ಜಮಾ ಆಗಿತ್ತಿರುವ ಕುರಿತು ರೈತರಿಂದ ದೂರುಗಳ ಕಾರಣ ಧಾರವಾಡ ರೂಡ್ ಸೆಟ್ ಆವರಣದ ಸಭಾಂಗಣದಲ್ಲಿ (RUDSETI) ಆವರಣದಲ್ಲಿ ಆರ್.ಬಿ.ಐ ಅಧಿಕಾರಿ ಮೋನಿ ರಾಜ ಬ್ರಹ್ಮ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್  ಜಿ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರುಗಳ ಜೊತೆ ತುರ್ತು ಸಭೆಯನ್ನು ಜರುಗಿಸಿ, ಮಾತನಾಡಿದರು.

ಸರಕಾರದಿಂದ ಬಿಡುಗಡೆಯಾದ ಯಾವುದೇ ತರಹದ ಪ್ರೋತ್ಸಾಹ ಧನವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡದೆ ಗ್ರಾಹಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಅವರ ಜೊತೆ ಸಂಯಮದಿಂದ ವರ್ತಿಸಬೇಕು. ತಾಂತ್ರಿಕ ಸಮಸ್ಯೆ ಇದ್ದರೆ ಗ್ರಾಹಕರಿಗೆ ಸರಿಯಾಗಿ ತಿಳುವಳಿಕೆ ನೀಡಿ ಮಾರ್ಗದರ್ಶನ ಮಾಡಬೇಕು ಮತ್ತು ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕು ಎಂದು ಸಲಹೆ ನೀಡಿದರು.

ಧಾರವಾಡ ಜಿಲ್ಲೆಯಲ್ಲಿ ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಯೋಜನೆಗಳ ಲಾಭವನ್ನು ತಲುಪಿಸುತ್ತಿವೆ. ಆದರೆ ಎಲ್ಲ ಬ್ಯಾಂಕ್ ಗಳು ಇದನ್ನು ಅನುಸರಿಸಬೇಕು. ಸರಿಯಾದ ಸಮಯಕ್ಕೆ ಉದ್ಯೋಗಿಗಳಿಗೆ ಸಾಲ, ಸಹಾಯಧನ ಸೌಲಭ್ಯ ದೊರೆಯಬೇಕು ಎಂದರು.

ರೈತರ ಸಹಮತವಿಲ್ಲದೆ ಬರಪರಿಹಾರ ಸೇರಿದಂತ ಯಾವ ಪ್ರೋತ್ಸಹಧನವನ್ನು ಸಾಲಕ್ಕೆ ಜಮೆ ಮಾಡಬಾರದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲ ಬ್ಯಾಂಕ್ ಶಾಖೆಗಳಿಗೆ ಮಾಹಿತಿ ನೀಡಿ, ರೈತರಿಗೆ ತೊಂದರೆ ಆಗದಂತೆ ನಿರಂತರ ನಿಗಾ ವಹಿಸಬೇಕೆಂದು ತಿಳಿಸಿದರು.

ಲೀಡ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್. ಜಿ. ಅವರು 2023-24 ಸಾಲಿನ ಪ್ರಗತಿಯನ್ನು  ವಿವರಿಸುತ್ತಾ,  ಜಿಲ್ಲೆಯ ಬ್ಯಾಂಕುಗಳಿಂದ 2,90,392 ಫಲಾನುಭವಿಗಳು ಕೃಷಿ ಸಾಲ ಪಡೆದಿದ್ದಾರೆ. ಗೊತ್ತುಪಡಿಸಿದ ಗುರಿಗೆ ಹೋಲಿಸಲಾಗಿ ಶೇ. 125 ಕೃಷಿ ಸಾಲ ಮತ್ತು ಶೇ.164 ಆಧ್ಯತಾ ವಲಯಕ್ಕೆ ಹೆಚ್ಚಿನ ಸಾಲವನ್ನು ವಿತರಿಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನೆ 2024-25ರ ಕುರಿತು ಮಾಹಿತಿ ನೀಡುತ್ತಾ ಆಧ್ಯತಾವಲಯಕ್ಕೆ 12,738.76 ಕೋಟಿ ರೂ.ಗಳ  ಗುರಿ ನಿಗದಿಪಡಿಸಲಾಗಿದ್ದು ಮಾರ್ಚ್ 2024ರ ಸಾಧನೆಗೆ ಹೋಲಿಸಲಾಗಿ ಆಧ್ಯತಾ ವಲಯಕ್ಕೆ ಸುಮಾರು ಶೇ. 14 ರಷ್ಟು ಹೆಚ್ಚಿನ ಗುರಿ ನಿಗದಿಪಡಿಸಲಾಗಿದೆ ಎಂದರು.

2024-25 ನೇ ಸಾಲಿನಲ್ಲಿ ಬೇಳೆ ಸಾಲ ವಲಯದಲ್ಲಿ 1,27,283 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 1,640.27 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 2291.25 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 140 ರಷ್ಟು ಶೇಕಡಾವಾರು ಸಾಧನೆ ಆಗಿದೆ.  ಕೃಷಿ ಅವಧಿ ಸಾಲ ವಲಯದಲ್ಲಿ 1,63,109 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 1,741.76 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 1,946.22 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 112 ಶೇಕಡಾವಾರು ಸಾಧನೆ ಆಗಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವಲಯದಲ್ಲಿ 47,160 ಫಲಾನುಭವಿಗಳು ಇದ್ದು ಮಾರ್ಚ್ 2024 ರ ಅಂತ್ಯಕ್ಕೆ 3,021 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 6,368.18 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 211 ಶೇಕಡಾವಾರು ಸಾಧನೆ ಆಗಿದೆ ಎಂದು ಮಾಹಿತಿ ನೀಡಿದರು.

ಇತರ ಆಧ್ಯತಾ ವಲಯದಲ್ಲಿ 68,824 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 471.87 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 658.24 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 139 ಶೇಕಡಾವಾರು ಸಾಧನೆ ಆಗಿದೆ. ಆಧ್ಯತಾ ರಹಿತ ವಲಯದಲ್ಲಿ 1,39,313 ಫಲಾನುಭವಿಗಳು ಇದ್ದು ಮಾರ್ಚ್ 2024 ರ ಅಂತ್ಯಕ್ಕೆ 7,705.56 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 8,293.84 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 108 ಶೇಕಡಾವಾರು ಸಾಧನೆ ಆಗಿದೆ. ಒಟ್ಟಾರೆಯಾಗಿ 5,45,689 ಫಲಾನುಭವಿಗಳು ಇದ್ದು ಮಾರ್ಚ್ 2024 ರ ಅಂತ್ಯಕ್ಕೆ 14,580.46 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 19,560.73ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 139 ಶೇಕಡಾವಾರು ಸಾಧನೆ ಆಗಿದೆ ಎಂದು ತಿಳಿಸಿದರು.

2024-25 ರಲ್ಲಿ ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನೆಯಲ್ಲಿ 2024-25 ರ ಅಂತ್ಯಕ್ಕೆ ಬೆಳೆ ಸಾಲ ವಲಯದಲ್ಲಿ 2,003.74, ಕೃಷಿ ಅವಧಿ ಸಾಲ ವಲಯದಲ್ಲಿ 1,223.11, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವಲಯದಲ್ಲಿ 8,096.24, ಶಿಕ್ಷಣ ಸಾಲ ವಲಯದಲ್ಲಿ 59.70, ಗೃಹ ಸಾಲ ವಲಯದಲ್ಲಿ 284.90, ಇತರೆ ಆಧ್ಯತಾ ವಲಯದಲ್ಲಿ 429.90 ಹಾಗೂ ಆಧ್ಯತಾ ರಹಿತ ವಲಯದಲ್ಲಿ 7,314.77 ಕೋಟಿ ರೂ.ಗಳ ಗುರಿಯನ್ನು ಹೊಂದಲಾಗಿದ್ದು, ಒಟ್ಟಾರೆಯಾಗಿ 19,412.36 ಕೋಟಿ ರೂ.ಗಳ ಗುರಿಯ ನಿರೀಕ್ಷೆ ಇದೆ ಎಂದು ತಿಳಿಸಿದರು.

ಆರ್‍.ಬಿ.ಐ ಅಧಿಕಾರಿ ಮೋನಿ ರಾಜ ಬ್ರಹ್ಮ ಅವರು ಮತನಾಡಿ, ಆರ್.ಬಿ.ಐ ನ ಮಾರ್ಗಸೂಚಿ ಮತ್ತು ನೀತಿಯನ್ನು ವಿವರಿಸಿದರು. ಗ್ರಾಹಕರಿಗೆ ಅನೌಪಚಾರಿಕ ಮೂಲಗಳಿಂದ ಪಡೆದಂತ ಸಾಲಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ವಿವರಿಸಿ ಔಪಚಾರಿಕ ಮೂಲಗಳಿಂದ ಸಾಲ ಪಡೆಯಲು ಪ್ರೋತ್ಸಾಹಿಸಬೇಕೆಂದು ಬ್ಯಾಂಕಿನ ಅಧಿಕಾರಿಗಳಿಗೆ ಸಲಹೆ ನೀಡಿದರು. ಸೈಬರ ವಂಚನೆ, ಸೈಬರ್ ಅಪರಾಧಗಳನ್ನು ವರದಿ ಮಾಡಲು ಸ್ಥಾಪಿಸಿರುವಂತ ಸಹಾಯವಾಣಿ 1930 ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಪ್ರಸಾರ ಮಾಡಲು ತಿಳಿಸಿದರು.

ಸಭೆಯಲ್ಲಿ ಎಸ್.ಬಿ. ಐ, ಕೆನರಾ, ಕೆವಿಜಿಬಿ, ಬ್ಯಾಂಕಾ ಬರೋಡಾ, ಯುನಿಯನ್ ಬ್ಯಾಂಕ್ ಆಪ್ ಇಂಡಿಯಾ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳು ಇದ್ದರು.

Leave a Reply