ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

1 year ago

ಸಂಡೂರು ವಿಧಾನಸಭೆ ಉಪಚುನಾವಣೆ-2024

ಬಳ್ಳಾರಿ: ಸಂಡೂರು ವಿಧಾನಸಭೆ ಉಪಚುನಾವಣೆಗೆ ನ.13 ರಂದು ಮತದಾನ ಜರುಗಲಿದ್ದು, ನ.11ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2,36,100 ಮತದಾರರು ಇದ್ದು, 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಸಂಡೂರು ಕ್ಷೇತ್ರದಲ್ಲಿ 1,215 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಸಂಡೂರು ವಿಧಾನಸಭೆ ಉಪಚುನಾವಣೆ ನಿಮಿತ್ತ ನ.13 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದೆ.  ಮತದಾನ ಅಂತ್ಯದ 48 ಗಂಟೆಗೂ ಮುನ್ನ ಅಂದರೆ ನ.11 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.  ಈ ಸಂದರ್ಭದಲ್ಲಿ ವಾಹನಗಳ ಮೂಲಕ ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು. ನ.11 ರ ಸಂಜೆ 06 ರಿಂದ ನ.14 ಸಂಜೆ 06 ಗಂಟೆಯವರೆಗೆ ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023ರ ಕಲಂ 163 ಅಡಿ ಪ್ರತಿಬಂಧಕಾಜ್ಞೆ ಜಾರಿಯಾಗಲಿದ್ದು, 05 ಕ್ಕಿಂತ ಹೆಚ್ಚು ಜನರು ಒಟ್ಟಾಗಿ ಓಡಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಡೂರು ಕ್ಷೇತ್ರದಲ್ಲಿ ಹಾಗೂ ಈ ಕ್ಷೇತ್ರಕ್ಕೆ ಹೊಂದಿಕೊಂಡ ಕಂಪ್ಲಿ, ಕುರುಗೋಡು ಮತ್ತು ಬಳ್ಳಾರಿ ತಾಲ್ಲೂಕಗಳ 05 ಕಿ.ಮೀ ವ್ಯಾಪ್ತಿಯಲ್ಲಿ ನ.11 ರ ಸಂಜೆ 06 ಗಂಟೆಯಿಂದ ನ.14 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಡ್ರೈ ಡೇ ಆಚರಿಸಲು ಸೂಚಿಸಿದ್ದಾರೆ.

ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ರ್ಯಾಂ ಡಮೈಜೇಶನ್ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರು, 253 ಮತಗಟ್ಟೆ: ಸಂಡೂರು ವಿಧಾನಸಭೆ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರಿದ್ದಾರೆ. 1,17,789 ಪುರುಷ ಮತದಾರರು, 1,18,282 ಮಹಿಳೆ ಮತದಾರರು ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ. ಒಟ್ಟು 253 ಮತಗಟ್ಟೆ ಮತಕೇಂದ್ರಗಳಿವೆ.

ಮತಗಟ್ಟೆಗಳಿಗೆ 1,215 ಸಿಬ್ಬಂದಿ ನೇಮಕ: ಸಂಡೂರು ವಿಧಾನಸಭೆ ಉಪಚುನಾವಣೆ ಅಂಗವಾಗಿ ಶಾಂತಿಯುತ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ಮತದಾನ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು  304 ಮತಗಟ್ಟೆ ಅಧಿಕಾರಿಗಳು, 304 ಸಹಾಯಕ ಅಧಿಕಾರಿಗಳು, 608 ಮತದಾನ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1,215 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply