ರೈತರ ಫ್ರೂಟ್ ಐಡಿ ಸೃಜಿಸಲು ಅಭಿಯಾನ ಮಾಡಿ: ಸಂತೋಷ ಲಾಡ್
ಧಾರವಾಡ: ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ವಿತರಿಸಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದ ಅವರು, ಸರಕಾರದಿಂದ ಕೃಷಿ ಸಂಬಂಧಿತ ಎಲ್ಲ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತ ಪ್ರೂಟ್ ಐಡಿ ಹೊಂದುವುದು ಕಡ್ಡಾಯವಾಗಿದ್ದು, ರೈತರಲ್ಲಿ ಜಾಗೃತಿ ಮೂಡಿಸಲು ಮತ್ತು ಫ್ರೂಟ್ ಐಡಿ ಹೊಂದಲು ಜಿಲ್ಲೆಯಾದ್ಯಂತ ಅಭಿಯಾನ ಹಮ್ಮಿಕೊಳ್ಳಬೇಕು ಎಂದರು.
ಮುಂಗಾರು ಪೂರ್ವಕಾಲದಲ್ಲಿ ಮಳೆ ಚನ್ನಾಗಿ ಆಗಿದ್ದರಿಂದ ನಮ್ಮ ಜಿಲ್ಲೆಯ ರೈತರು ಮುಂಗಾರು ಆರಂಭಕ್ಕೂ ಮೊದಲೇ ಬಿತ್ತನೆ ಆರಂಭಿಸಿದ್ದಾರೆ. ಈಗ ಸುಮಾರು ಶೇ. 36 ರಷ್ಟು ಕೃಷಿ ಭೂಮಿ ಬಿತ್ತನೆ ಆಗಿದೆ. ಉಳಿದ ರೈತರು ಬಿತ್ತನೆ ಮಾಡುತ್ತಿದ್ದಾರೆ. ಎಲ್ಲ ರೈತರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರಗಳನ್ನು ಪೂರೈಸಲು ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದರು.
ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತ ಪ್ರೂಟ್ ಐಡಿ ಹೊಂದುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 76 ರಷ್ಟು ರೈತರು ಪ್ರೂಟ್ ಐಡಿ ಹೊಂದಿದ್ದಾರೆ. ಉಳಿದ ರೈತರು ಪ್ರೂಟ್ ಐಡಿ ಹೊಂದುವಂತೆ ಜಾಗೃತಿ ಮೂಡಿಸಿ, ಪ್ರಗತಿ ಸಾಧಿಸಲು ರೈತರ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಾತನಾಡಿ, ರೈತರಿಗೆ ಬೀಜ ದರ ಹೆಚ್ಚಳ ಬಗ್ಗೆ ತಿಳುವಳಿಕೆ ನೀಡಬೇಕು ಮತ್ತು ಹೊಸ ತಳಿ ಬೀಜಗಳನ್ನು ರೈತರಿಗೆ ಪರಿಚಯಿಸಿ, ವಿತರಿಸಲು ಕ್ರಮಕೈಗೊಳ್ಳಬೇಕು. ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಿಗೆ ರೈತರ ಪ್ರೂಟ್ ಐಡಿ ಸೃಜಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಭಾಗ ಹಾಗೂ ನಗರ, ಪಟ್ಟಣಗಳಲ್ಲಿ ಎನ್.ಎ ಮಾಡುವಾಗ ಸರಕಾರಿ ರಸ್ತೆ ಪಕ್ಕದಲ್ಲಿ ಬಫರ್ ರಸ್ತೆ ಜಾಗ ಬಿಡುವಂತೆ ನಿಯಮ ರೂಪಿಸಬೇಕು ಎಂದು ತಿಳಿಸಿದರು.
ನವಲಗುಂದ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ನವಲಗುಂದ, ಅಣ್ಣಿಗೇರಿ ಪಟ್ಟಣಗಳ ನಗರೋತ್ಥಾನ ಯೋಜನೆಯ 4 ನೇ ಹಂತದ ಕಾಮಗಾರಿಗಳು, ನವಲಗುಂದ ಯುಜಿಡಿ ಕಾಮಗಾರಿ, ನವಲಗುಂದ ಮತ್ತು ಅಣ್ಣಿಗೇರಿ ಪಟ್ಟಣದಲ್ಲಿನ ನಿರಂತರ ನೀರು ಸರಬರಾಜು ಯೋಜನೆ, ಎರಡು ನಗರಗಳ ಮನೆ ಹಕ್ಕು ಪತ್ರ ವಿತರಣೆ ಮತ್ತು ಬೆಳೆ ಪರಿಹಾರದ ಕುರಿತು ವಿಷಯ ಪ್ರಸ್ತಾಪಿಸಿ, ಶಾಸಕರು ಚರ್ಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಹೆಚ್ಚುವರಿ ಕೇಂದ್ರಗಳನ್ನು ತೆರೆದು ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಪ್ರತಿ ರೈತರ ಆರ್.ಟಿ.ಸಿ ಗೆ ಆಧಾರ್ ಜೋಡಣೆ ಕಾರ್ಯ ನಡೆದಿದೆ. ಇದರೊಂದಿಗೆ ರೈತರು ಪ್ರೂಟ್ ಐಡಿ ಹೊಂದುವಂತೆ ತಿಳುವಳಿಕೆ ನೀಡಿ, ಕ್ರಮವಹಿಸಲಾಗುವುದು ಎಂದರು.
ಬರ ಪರಿಹಾರ ಬಿಡುಗಡೆ ಪ್ರಗತಿಯಲ್ಲಿದ್ದು, ಪಾಳು ಭೂಮಿ ಅಥವಾ ಇತರ ಕಾರಣಗಳಿಂದ ಬರ ಪರಿಹಾರ ಬಿಡುಗಡೆ ಆಗದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಮಾಹಿತಿಯೊಂದಿಗೆ ಪ್ರಸ್ತಾವನೆ ಪಡೆದು, ಸರಕಾರಕ್ಕೆ ವಿವರವಾದ ವರದಿ ಕಳುಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಬೀಜ, ಗೊಬ್ಬರದ ಕೊರತೆ ಇಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇದೆ. ಕೃಷಿ ಉತ್ಪಾದನೆಗಳ ಖಾಸಗಿ ಮಾರಾಟಗಾರರಿಗೆ ಸಭೆ ಜರುಗಿಸಿ, ರೈತರಿಗೆ ತೊಂದರೆ ಆಗದಂತೆ ಬೀಜ, ಗೊಬ್ಬರ ವಿತರಿಸಲು ಸೂಚಿಸಲಾಗಿದೆ. ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗದಂತೆ, ರೈತರಿಗೆ ಎಂ.ಆರ್.ಪಿ ದರ ಬಿಟ್ಟು ಹೆಚ್ಚಿನ ದರಕ್ಕೆ ರಸಗೊಬ್ಬರ, ಬೀಜ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.
ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ಉಪನಿರ್ದೇಶಕರಾದ ಜಯಶ್ರೀ ಹಿರೇಮಠ, ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರರಾದ ಡಾ.ಡಿ.ಎಚ್.ಹೂಗಾರ, ಪ್ರಕಾಶ ನಾಶಿ, ಮಲ್ಲಿಕಾರ್ಜುನ ಹೆಗ್ಗನ್ನವರ ಸೇರಿದಂತೆ ಭೂದಾಖಲೆಗಳ ಇಲಾಖೆ, ನಗರ ಯೋಜನಾ ಇಲಾಖೆ, ಪುರಸಭೆಗಳ ಮುಖ್ಯಾಧಿಕಾರಿಗಳು, ಇತರರು ಹಾಜರಿದ್ದರು.




