ಜಯನಗರ: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಎರಡನೇ ಬಾರಿ ಆಯ್ಕೆ ಬಯಸಿರುವ ಈ ಕ್ಷೇತ್ರದಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿದೆ. ತನ್ನ ಕೈಜಾರಿ ಕಾಂಗ್ರೆಸ್ ಪಾಲಾಗಿರುವ ಕ್ಷೇತ್ರವನ್ನು ಮರು ವಶಪಡಿಸಿಕೊಳ್ಳಬೇಕೆಂದು ರಣತಂತ್ರ ರೂಪಿಸಿರುವ ಬಿಜೆಪಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಾಹ್ಮಣ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿ ಕೆ ರಾಮಮೂರ್ತಿ ಅವರನ್ನು ಕಣಕ್ಕಿಳಿಸಿದೆ. ಬಿಬಿಎಂಪಿ ಸದಸ್ಯರಾಗಿ ರಾಮಮೂರ್ತಿ ಮಾಡಿರುವ ಕೆಲಸಗಳು ಮತ್ತು ಪ್ರಬಲ ಹಿಂದುತ್ವ ಪ್ರತಿಪಾದನೆಯೊಂದಿಗೆ ಬಿಜೆಪಿ ಸೌಮ್ಯ ರೆಡ್ಡಿ ಅವರಿಗೆ ಪ್ರಬಲ ಸ್ಪರ್ಧೆ ಕೊಟ್ಟಿದೆ.
ಕ್ಷೇತ್ರದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಮೆಚ್ಚಿಕೊಂಡಿರುವ ಸೌಮ್ಯ ರೆಡ್ಡಿ ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರ ಶ್ರೀರಕ್ಷೆಯೊಂದಿಗೆ ಚುನಾವಣೆ ಎದುರಿಸುತ್ತಿದ್ದು ಜೆಡಿಎಸ್ ಸ್ಪರ್ಧೆ ಕೇವಲ ನೆಪ ಮಾತ್ರ ಎಂಬಂತಾಗಿದೆ. ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ತಮ್ಮದೇ ಪಡೆಯೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾ ಗಮನ ಸೆಳೆದಿದ್ದಾರೆ.
ರಾಮಲಿಂಗಾರೆಡ್ಡಿ ನೆರೆಯ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು ಕೂಡ ತಮ್ಮ ಬಹುತೇಕ ಸಮಯವನ್ನು ತಮ್ಮ ಪುತ್ರಿಯ ಗೆಲುವಿಗಾಗಿ ಮೀಸಲಿಟ್ಟಿರುವುದು ಕುತೂಹಲ ಮೂಡಿಸಿದೆ.



