ಸವಿಂಧಾನತ್ಮಕವಾಗಿ ವಿದ್ಯಾರ್ಥಿ ‍ಜೀವನ ನಡೆಸಿ ಸಮಾಜಮುಖಿಗಳಾಗಬೇಕು: ಬಿ.ನಾರಾಯಣಪ್ಪ

4 years ago

ಬೆಂಗಳೂರು: ವಿದ್ಯಾರ್ಥಿ ಜೀವನ ಅತೀ ಮೌಲ್ಯಯುತವಾಗಿದ್ದು, ಅದನ್ನು ವ್ಯರ್ಥ ಮಾಡಬಾರದು, ಸವಿಂಧಾನತ್ಮಕವಾಗಿ ವಿದ್ಯಾರ್ಥಿ ‍ಜೀವನವನ್ನು ನಡೆಸುವ ಮೂಲಕ ಸಮಾಜಮುಖಿ ವ್ಯಕ್ತಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮೈಸೂರು ಜಿಲ್ಲೆ ಗ್ರಾಹಕರ ವೇದಿಕೆಯ ನ್ಯಾಯಾಧೀಶ ಬಿ. ನಾರಾಯಣಪ್ಪ ಕರೆ ನೀಡಿದರು.

ಬ್ಯಾಟರಾಯನಪುರದ ಶ್ರೀ ಶಾರದಾ ವಿದ್ಯಾಪೀಠದ ಶ್ರೀ ಶಾರದಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ 2021-22 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಪಾಲಕರು ಕಾಣುತ್ತಾರೆ. ಅದರಂತೆ ಪಾಠ ಕಲಿಯುವಾಗ ಮಕ್ಕಳು ಅಷ್ಟೇ ಜವಾಬ್ದಾರಿಯಿಂದ ಕಲಿಯುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಪಾಲಕರ ಕನಸುಗಳನ್ನು ನನಸು ಮಾಡುವ ಮೂಲಕ ದೇಶದ ಅಭ್ಯುದಯಕ್ಕೆ ಕಾರಣಿಕರ್ತರಾಗಬೇಕು, ಅದಕ್ಕೆ ನಮ್ಮ ದೇಶದ ಅನೇಕ ಮಹನೀಯರು, ಸಾಧಕರು ನಮಗೆ ಉದಾರಣೆಯಾಗಿದ್ದಾರೆ. ಅಂಥವರ ಜೀವನ ನಮಗೆ ಪ್ರೇರಣೆಯಾಗಬೇಕು ಹಾಗೂ ಅಂಥವರು ನಮ್ಮ ಆದರ್ಶವಾಗಬೇಕು  ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಣೆ ನಡೆಸಿದ ಕರ್ನಾಟಕ ಸರಕಾರದ ಮಾರುಕಟ್ಟೆ ಮತ್ತು ಜಾಹೀರಾತು ಸಲಹಾ ನಿಗಮದ ಅಧಿಕ ನಿರ್ದೇಶಕ ಸಿದ್ಧಲಿಂಗಪ್ಪ ಬಿ. ಪೂಜಾರಿ ಮಾತನಾಡಿ, ಇಂದಿನ ಸ್ಪರ್ಧಾತ್ಮದ ದಿನಗಳಲ್ಲಿ ಪ್ರತಿಯೋಬ್ಬರಿಗೂ ಉನ್ನತ ಗುರಿಯೇ ಇರಬೇಕು. ಅದು ನಮಗೆ ಸಾಧನೆಯ ಅಡಿಪಾಯವಾಗಬೇಕು. ಇಂದು ಅವಕಾಶಗಳ ವಿಪುಲವಾಗಿ ಇವೆ. ಅವುಗಳನ್ನು ಬಳಸಿಕೊಳ್ಳುವ ರೀತಿಯೂ ತೀರಾ ಸರಳವಾಗಿದೆ. ಅವಕಾಶಕ್ಕಾಗಿ ಕಾದುಕುಳಿತುಕೊಳ್ಳುವ ಬದಲು ಅದರ ಹುಡುಕಾಟವನ್ನು ವಿದ್ಯಾರ್ಥಿ ಜೀವನದಿಂದಲೇ ಮುಂದುವರೆಸಿಕೊಂಡು ಬರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶ್ರೀ ಶಾರದಾ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಮ್‍. ಪಟೇಲ್‍ ಪಾಂಡು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನ ಮರೆಯಲಾರದ ಕ್ಷಣಗಳನ್ನು ಸೃಷ್ಟಿಮಾಡುತ್ತವೆ. ಅವು ಕೊನೆಯವರೆಗೂ ಹಚ್ಚಹಸಿರಾಗಿ ಉಳಿದು ಬಿಡುತ್ತವೆ. ಅದಕ್ಕಾಗಿ  ಬಾಹ್ಯ ಪ್ರಪಂಚದಲ್ಲಿ ಇರುವ ಹತ್ತಾರು ವ್ಯಾಮೋಹಕ್ಕೆ ಮಕ್ಕಳು ಮರುಳಾಗದೆ ಶ್ರದ್ಧೆ ಮತ್ತು ಭಕ್ತಿಯಿಂದ ಅಧ್ಯಾಪಕರು ಹೇಳಿದಂತೆ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಪಾಠದೊಂದಿಗೆ ಆಟ, ಆಟದೊಂದಿಗೆ ಜೀವನದ ಮಟ್ಟ ಕಟ್ಟಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರಿ ಶಾರದಾ ವಿದ್ಯಾಪೀಠದ ಅಧ್ಯಕ್ಷ  ಪ್ರೊ. ಎನ್‍ ಕಾಮರಾಜ ಮಾತನಾಡಿ, ದೇಶದ ಭವಿಷ್ಯ ಮಕ್ಕಳ ಕೈಲಿದೆ. ಮಕ್ಕಳ ಭವಿಷ್ಯ ಶಾಲೆ ಕಾಲೇಜುಗಳ ಕೈಲಿದೆ. ಅದೇ ನಿಟ್ಟಿನಲ್ಲಿ ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತವೆ. ಅದಕ್ಕೆ ಪೂರಕವಾಗಿ ಪಾಲಕರು ವಿದ್ಯಾ ಸಂಸ್ಥೆಗಳನ್ನು ನಂಬಿ ಮಕ್ಕಳನ್ನು ಕಳಿಸುತ್ತಾರೆ. ಮಕ್ಕಳು ಪಾಲಕರ ಹಾಗೂ ಶಿಕ್ಷಕರ ನಂಬುಗೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಶ್ರದ್ಧೆಯ ಅಧ್ಯಯನ, ಹೆಮ್ಮೆಯ ಜೀವನ ನಡೆಸುವ ಕನಸು ಹೊಂದಿರಬೇಕು ಎಂದರು.

ಶ್ರೀ ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರರಾದ ಅನುಸೂಯಮ್ಮ ಸ್ವಾಗತಿಸಿದರು, ಉಪನ್ಯಾಸಕ ಮುನಿರಾಜು ವಂದಿಸಿದರು.

Leave a Reply