ಧರ್ಮಸ್ಥಳಫೈಲ್ಸ್: ಎಸ್ ಐ ಟಿ ಮೆಟ್ಟಿಲೇರಿದ ಪದ್ಮಲತಾ ಸಾವಿನ ಪ್ರಕರಣ

8 months ago

ಬೆಂಗಳೂರು: ಅಸಹಜ ಸಾವುಗಳ ಆರೋಪದ ಹಿನ್ನಲೆಯಲ್ಲಿ ಸುದ್ದಿಯಾಗಿರುವ ಧರ್ಮಸ್ಥಳ ಗ್ರಾಮದಲ್ಲಿ ಮೂರು ದಶಕಗಳಿಗೂ ಹಿಂದೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಪದ್ಮಲತಾ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ. ಪದ್ಮಲತಾ ಅವರ ಸಹೋದರಿ ಇಂದ್ರಾವತಿ ಅವರು ಪದ್ಮಲತಾ ಅಪಹರಣ ಮತ್ತು ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ಕೋರಿ ಎಸ್‌ಐಟಿಗೆ ದೂರು ನೀಡಿದ್ದಾರೆ. ಪದ್ಮಲತಾ ಮೃತದೇಹವನ್ನು ದಹಿಸಿಲ್ಲ, ಬದಲಾಗಿ ಹೂತಿದ್ದೇವೆ. ಈ ಕ್ಷಣ ಬೇಕಿದ್ದರೆ ಎಸ್‌ಐಟಿ ಅಗೆದು ಪದ್ಮಲತಾ ಸಾವಿನ ಕಾರಣ ಪತ್ತೆ ಹಚ್ಚಬೇಕು ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸಹೋದರಿ ಕಾಲೇಜಿಗೆ ಹೋಗಿದ್ದವಳು, ವಾಪಸ್ ಧರ್ಮಸ್ಥಳ ಬಸ್ ಸ್ಟಾಂಡ್ ವರೆಗೆ ಬಂದಿದ್ದಳು. ನಂತರ ಏನಾಗಿದೆ ಗೊತ್ತಿಲ್ಲ. ಅವಳು ಹಾಕಿದ ಬಟ್ಟೆ, ಕೈನಲ್ಲಿದ್ದ ವಾಚ್ ನೋಡಿದ ಆಧಾರದಲ್ಲಿ ಅವಳೆಂದು ಗುರುತಿಸಿದ್ದೆವು. ಅವಳ ಕೈಕಾಲನ್ನು ಕಟ್ಟಲಾಗಿತ್ತು. ದೇಹ ಕೊಳೆತುಹೋಗಿತ್ತು. ಅವಳನ್ನು ಯಾರೋ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಅನುಮಾನ ಇತ್ತು. ಆಗ ತನಿಖೆ ಮಾಡಿ, ಪತ್ತೆಯಾಗದ ಪ್ರಕರಣ ಅಂದಿದ್ರು. ಆದರೆ ಈಗ ಎಸ್ ಐಟಿಯವರು ತನಿಖೆ ಮಾಡಿದರೆ ಸತ್ಯ ಹೊರಬರಬಹುದು. ಅಗತ್ಯಬಿದ್ದರೆ ಮೃತದೇಹವನ್ನು ಹೂತಿದ್ದ ಜಾಗದಿಂದ ತೆಗೆದು ಬೇಕಾದರೆ ತನಿಖೆ ಮಾಡಲಿ. ನಾನೂ ಸಾಕ್ಷಿದಾರಳಾಗಿ ಬರುತ್ತೇನೆ ಎಂದರು.

ಈಗಿನ ಪ್ರಭಾವಿಗಳೇ ಆಗಿನ ತನಿಖೆಯ ದಿಕ್ಕುತಪ್ಪಿಸಿದ್ದಾರೆ. ಅವರ ಹಣ ಬಲದಲ್ಲಿ ಆಗ ಪತ್ತೆಯಾಗದ ಪ್ರಕರಣ ಎಂದು ತನಿಖೆಯನ್ನು ಮುಚ್ಚಿಹಾಕಲಾಗಿತ್ತು, ಈಗ ಎಸ್‌ಐಟಿ ತನಿಖೆಯಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದರು.

ಮತ್ತೊಂದು ದೂರು ದಾಖಲು: 15 ವರ್ಷ ಆಸುಪಾಸಿನ ಬಾಲಕಿಯ ಶವ ಕಾನೂನುಬಾಹಿರವಾಗಿ ಹೂತಿದ್ದಾಗಿ ಮೊದಲು ಎಸ್‌ಐಟಿಗೆ ದೂರು ಕೊಟ್ಟಿದ್ದ ವಕೀಲ ಜಯಂತ್‌ ಇದೀಗ “ಅಪಹರಣ ಹಾಗೂ ಕೊಲೆ” ಪ್ರಕರಣದ ಎರಡನೇ ದೂರು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಜಯಂತ್, ಪದ್ಮಲತಾ ಅಪಹರಣ ಆಗಿರುವುದು ಸತ್ಯ. ಈ ಬಗ್ಗೆ ಯಾರು ತನಿಖೆ ನಡೆಸಿದ್ದರು, ಯಾರು ಅಪಹರಣ ಮತ್ತು ಕೊಲೆ ಮಾಡಿದ್ದರು ಎಂಬುದನ್ನು ಎಸ್ಐಟಿ ತನಿಖೆ ನಡೆಸಬೇಕು. ನಾನು ಈ ಪ್ರಕರಣದ ಎರಡನೇ ದೂರುದಾರನಾಗಿದ್ದೇನೆ. ದೂರು ನೀಡಿದಾಗಿನಿಂದಲೂ ನನ್ನನ್ನು ಹಲವರು ಹಿಂಬಾಲಿಸುತ್ತಿದ್ದು, ನನಗೆ ಜೀವಭಯವಿದೆ. ಆದರೆ ನಾನು ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ ಎಂದರು.

ಸಿಐಡಿ ತನಿಖೆ ಸರಿಯಾಗಿ ನಡೆದಿಲ್ಲ: ಪದ್ಮಲತಾ ಅವರ ಪ್ರಕರಣ ಆಗ ಸರಿಯಾಗಿ ತನಿಖೆಯಾಗಿಲ್ಲ. ಸಿಐಡಿ ಸರಿಯಾಗಿ ತನಿಖೆ ನಡೆಸಿಲ್ಲ. ಪದ್ಮಲತಾ ನಮ್ಮ ಸಂಬಂಧಿಯೇ. ಈಗಾಗಲೇ ಪದ್ಮಾವತಿ ಅವರ ಅಕ್ಕ ಕೂಡ ಎಸ್ಐಟಿ ಗೆ ದೂರು ನೀಡಲಿದ್ದಾರೆ. ಎಸ್ಐಟಿ ಮೇಲೆ ನಮಗೆ ನಂಬಿಕೆ ಇದೆ ಮತ್ತು ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವೂ ಇದೆ ಎಂದರು.

ತಮ್ಮ ದೂರಿಗೆ ಸಂಬಂಧಿಸಿದಂತೆ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದ ಜಯಂತ್, ನನ್ನ ಬಳಿ ದೂರಿನ ಸಾಕ್ಷ್ಯ ಇವತ್ತಿಗೂ ಇದೆ. ಅದನ್ನು ನಾನು ಎಸ್ಐಟಿ ಗೆ ನೀಡುತ್ತೇನೆ. ಅವರು ಅದನ್ನು ಮಾಧ್ಯಮದವರಿಗೆ ಕೊಡಲಿ ಎಂದು ಅವರು ಹೇಳಿದರೆ ನಾನು ಕೊಡುತ್ತೇನೆ. ನನ್ನ ಆರೋಪ ಸುಳ್ಳು ಎಂದು ಯಾರಾದರೂ ಹೇಳಿದರೆ ನನ್ನ ಮೇಲೆ ಕೇಸ್ ಹಾಕಲಿ. ನಾನು ಯಾವುದೇ ಮುಖವಾಡ ಹಾಕುವುದಿಲ್ಲ, ಯಾವುದಕ್ಕೂ ಭಯಪಡುವುದಿಲ್ಲ ಎಂದರು.

ಹಿನ್ನೆಲೆ: ಡಿಸೆಂಬರ್ 22, 1986. ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪದ್ಮಲತಾ ಮರಳಿ ಮನೆಗೆ ಬರಲೇ ಇಲ್ಲ. ನಾಪತ್ತೆಯಾದ ಸುಮಾರು 56 ದಿನಗಳ ನಂತರ ನೇತ್ರಾವತಿ ನದಿ ದಡದಲ್ಲಿ ಕೊಳೆತುಹೋದ ಶವವಾಗಿ ಪತ್ತೆಯಾಗಿದ್ದಳು. ನಂತರ ಎಷ್ಟೇ ಹೋರಾಟ ನಡೆಸಿದರೂ, ಆಕೆಯ ಸಾವಿಗೆ ಕಾರಣ ಏನೆಂಬುದು “ಪತ್ತೆಯಾಗದ ಪ್ರಕರಣವಾಗಿ” ಸಿಐಡಿ ಪ್ರಕರಣವನ್ನು ಮುಕ್ತಾಯ ಮಾಡಿತ್ತು.

Leave a Reply