ನಿಮ್ಮ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೂ ಹುಸಿ ಮಾಡದಂತೆ ಎಚ್ಚರ ವಹಿಸಿದ್ದೇನೆ: ಗೋಲ್ಡನ್ ಸ್ಟಾರ್ ಗಣೇಶ್

4 years ago

ಬೆಂಗಳೂರು: ಅಕ್ಕರೆಯ ಅಭಿಮಾನಿಗಳಿಗೆ, ನಲ್ಮೆಯ ಮಾಧ್ಯಮ ಮಿತ್ರರಿಗೆ, ವಿತರಕರಿಗೆ, ಪ್ರದರ್ಶಕರಿಗೆ ಹಾಗೂ ಸಾಮಾಜಿಕ ಜಾಲತಾಣದ ನನ್ನ ಸ್ನೇಹಿತರಿಗೆ ಹೃತ್ಪೂರ್ವಕ ವಂದನೆಗಳು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.

ಗಾಳಿಪಟ 2 ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಸವನ್ನು ಹಂಚಿಕೊಂಡಿರುವ ಅವರು, ನಮ್ಮ ‘ಗಾಳಿಪಟ 2’ ಚಿತ್ರವನ್ನು ನೀವೆಲ್ಲರೂ ಪ್ರೀತಿಯಿಂದ ಸ್ವೀಕರಿಸಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದಿದ್ದಾರೆ.

ಅಭಿಮಾನಿಗಳು ಸಂಭ್ರಮಿಸುವ ಪ್ರತಿ ಕ್ಷಣವೂ ಕಲಾವಿದನನ್ನು ಆಶೀರ್ವದಿಸಿದಂತೆ. ಆ ನಿಟ್ಟಿನಲ್ಲಿ ನಿಜಕ್ಕೂ ನಾನು ಅದೃಷ್ಟವಂತ. ನನ್ನ ಮೊದಲನೇ ಸಿನಿಮಾದಿಂದ ಶುರುವಾಗಿ ಇಲ್ಲಿಯವರೆಗೂ ನನ್ನನ್ನು ಆಶೀರ್ವದಿಸುತ್ತಾ ತೋರುತ್ತಿರುವ ನಿಮ್ಮ ಈ ಅದಮ್ಯ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಎಂದಿಗೂ ಋಣಿ ಎಂದಿದ್ದಾರೆ.

ವಿಭಿನ್ನ ಬಗೆಯ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರಾದ ನಿಮ್ಮನ್ನು ರಂಜಿಸಿ ಖುಷಿಪಡಿಸುವ ಕಾರ್ಯವನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ. ಅವುಗಳಲ್ಲಿ ಅನೇಕ ಪಾತ್ರಗಳು ನಿಮಗೆ ಆಪ್ತವೆನಿಸಿದರೆ, ಒಂದಿಷ್ಟು ಪ್ರಯತ್ನಗಳು ನಿಮ್ಮನ್ನು ನಿರಾಶೆಗೊಳಿಸಿರಬಹುದು. ಹಾಗಾಗಿ ಸಿನಿಮಾ ಕುರಿತಾಗಿ ನೀವು ಕೊಟ್ಟ ಎಲ್ಲಾ ಬಗೆಯ ತೀರ್ಪುಗಳನ್ನು ಸಮಭಾವ ಮತ್ತು ಸಮಚಿತ್ತದಿಂದ ಸ್ವೀಕರಿಸಿದ್ದೇನೆ ಎಂದಿದ್ದಾರೆ.

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಎಂದಿಗೂ ಮುಳುಗದೆ, ಪ್ರತೀ ಚಿತ್ರದಲ್ಲೂ ನನ್ನಲ್ಲಿ ನಾನೇ ಒಬ್ಬ ಉತ್ತಮ ಕಲಾವಿದನಿಗಾಗಿ ಹುಡುಕಾಟ ನಡೆಸಿದ್ದೇನೆ. ನಿಮ್ಮ ನಂಬಿಕೆಯ ಗಣೇಶ ನಿಮ್ಮ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೂ ಹುಸಿ ಮಾಡದಂತೆ ಎಚ್ಚರ ವಹಿಸಿದ್ದೇನೆ. ಇದೆಲ್ಲವೂ ನೀವುಗಳು ನನ್ನ ಹಾಗು ನನ್ನ ಅಭಿನಯದ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾನು ಸಲ್ಲಿಸಬಹುದಾದ ಪುಟ್ಟ ಗೌರವ ಎಂದಷ್ಟೇ ನನ್ನ ಭಾವನೆ ಎಂದಿದ್ದಾರೆ.

‘ಗಾಳಿಪಟ 2’ ಚಿತ್ರದ ಮೂಲಕ ಮನೆಮನೆಗೆ ಖುಷಿಯನ್ನು ಹಂಚಿದ ನಿರ್ದೇಶಕರಾದ ನಲ್ಮೆಯ ಶ್ರೀ ಯೋಗರಾಜ್ ಭಟ್ ಅವರಿಗೆ, ಹೆಮ್ಮೆಯ ನಿರ್ಮಾಪಕರಾದ ಶ್ರೀ ರಮೇಶ್ ರೆಡ್ಡಿ ಅವರಿಗೆ, ವಿತರಿಸಿದ ಕೆ.ವಿ.ಎನ್ ಸಂಸ್ಥೆಗೆ ಹಾಗೂ ನಮ್ಮ ಗಾಳಿಪಟ 2 ಚಿತ್ರತಂಡದ ಪ್ರತಿಯೊಬ್ಬ ಸದಸ್ಯರಿಗೂ ಮನದಾಳದ ಧನ್ಯವಾದಗಳು ಹಾಗು ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಮನರಂಜಿಸುವ ಕಾಯಕ ನಿರಂತರವಾಗಿ ಸಾಗಲು ನಿಮ್ಮ ಪ್ರೀತಿ ಜೊತೆಗೆ ಅಕ್ಕರೆ ತುಂಬಿದ ಅಭಿಮಾನ ಸದಾ ಜೊತೆಗಿದ್ದರೆ ಸಾಕು ಎಂದು ಮನವಿ ಮಾಡಿದ್ದಾರೆ.

Leave a Reply