ಅಭ್ಯಾಸ ಬಲ…

2 years ago

ಕಾಲೇಜಲ್ಲಿದ್ದಾಗ ಮೊದಲ ಅವಧಿಯ ತರಗತಿ ಮುಗಿಸಿ ಬಂದಾದ ಮೇಲೆ, ಎರಡನೆ ಅವಧಿ ತರಗತಿ ಇಲ್ಲ ಎಂದಾಗ ಟೀ ಕುಡಿಯುತ್ತಿದ್ದೆವು.

ನಮ್ಮ ವಿಭಾಗದಲ್ಲೇ ಸ್ಟವ್ ಇಟ್ಟುಕೊಂಡಿದ್ದೆವು. ಶ್ರೀಮತಿ ಶೋಭಾ ಟೀ ಮಾಡಿಕೊಡುತ್ತಿದ್ದರು. ನಮ್ಮ ವಿಭಾಗವನ್ನು ಸ್ವಚ್ಛವಾಗಿಡುವಲ್ಲಿ ಅವರ ಪ್ರತಿದಿನದ ಶ್ರಮವಿರುತ್ತಿತ್ತು. ಅವರು ತುಂಬಾ ಚೆನ್ನಾಗಿ ಟೀ ಮಾಡುತ್ತಿದ್ದರು. ಅವರಿಲ್ಲದಾಗ ನಮ್ಮ ಕನ್ನಡ ವಿಭಾಗದ ಮಹಿಳಾ ಸಹೋದ್ಯೋಗಿಗಳು ಟೀ ಮಾಡಿದರೂ ಶೋಭಾ ಮಾಡಿಕೊಡುವ ಟೀ ರುಚಿ ಬರುತ್ತಿರಲಿಲ್ಲ.

ದಿನದಲ್ಲಿ ಒಮ್ಮೆ ಮಾತ್ರ ಈ ಅವಧಿಯಲ್ಲಿ ಟೀ ಕುಡಿಯುವುದು ತುಂಬಾ ವರ್ಷಗಳಿಂದ  ರೂಢಿಯಾಯ್ತು. ಈ ಅವಧಿಯಲ್ಲಿ ಟೀ ಕುಡಿಯದಿದ್ದರೆ ನನಗೆ ತಲೆನೋವು ಬರುತ್ತಿತ್ತು.

ಈಗ ಮನೆಯಲ್ಲೂ ಬೆಳಗ್ಗೆ 11.30 ರ ಸುಮಾರಿಗೆ ಟೀ ಬೇಕೆನಿಸುತ್ತದೆ. ಕುಡಿಯದಿದ್ದರೆ ತಲೆನೋವು ಬರುತ್ತದೆ. ನನಗೆ ಅಚ್ಚರಿಯಾಗಿದೆ, “ಟೀ ಈ ಅವಧಿಯಲ್ಲಿ ಬೇಕೆಂದು ಶರೀರ ಕೂಡ ಬಯಸುವ ಪರಿಗೆ.”

ಡಾ.ರಾಜ್ ಕುಮಾರ್ ಪದೇ ಪದೇ ಮಾತಾಡುವಾಗ ಹೇಳುತ್ತಾರೆ ನೋಡಿ, ‘ಅಭ್ಯಾಸ ಬಲ’… ಹಿರಿಯರಿಗೆ ಗೌರವಿಸುವುದು, ಊಟದ ತಟ್ಟೆಯಲ್ಲಿ ಒಂದಗುಳು ಕೂಡ ಉಳಿಯದಂತೆ ಊಟಮಾಡುವುದು, ಸಮಯ ಪರಿಪಾಲನೆ ಮಾಡುವುದು…ಇವೆಲ್ಲಾ ಅಭ್ಯಾಸದಿಂದಲೇ ಬರುವಂಥವುಗಳು. “ಯಾವುದಾದರೂ ವಿಷಯವನ್ನು ಸತತವಾಗಿ ಪುನರಾವರ್ತಿಸುವುದರ ಪ್ರಕ್ರಿಯೆಯೇ ಅಭ್ಯಾಸ.”

ಅಪ್ಪ, ಅವ್ವ ಮುಂಜಾನೆ ನಾಲ್ಕಕ್ಕೇ ಎದ್ದು ಬಿಡುತ್ತಿದ್ದರು. ಆಗ ನಾವು ಕೂಡ ಅವರೊಂದಿಗೆ ಎದ್ದು ಬಿಡುತ್ತಿದ್ದೆವು. ದನದ ಕೊಟ್ಟಿಗೆ ಸ್ಚಚ್ಛಮಾಡಬೇಕಿತ್ತು, ಬಾವಿಯಲ್ಲಿ ನೀರು ಸೇದಿ ತರಬೇಕಿತ್ತು. ತೋಟ, ಗದ್ದೆಗೆ ಹೋಗಿ ಬಂದು, ಶಾಲೆಗೆ ಹೋಗಬೇಕಿತ್ತು. ಹೀಗೆ ಬಾಲ್ಯ, ಯೌವನದ ಆ ಅವಧಿಯಲ್ಲಿ ಮುಂಜಾನೆ ನಾಲ್ಕಕ್ಕೆ ಏಳುವುದು ಅಭ್ಯಾಸವಾಯ್ತು. ಈಗಲೂ ಕೂಡ ನನಗೆ ಮುಂಜಾನೆ ನಾಲ್ಕಕ್ಕೆ ತಟ್ಟನೆ ಎಚ್ಚರವಾಗಿ ಬಿಡುತ್ತದೆ. ಆ ನಂತರ ನಿದ್ದೆ ಬರುವುದಿಲ್ಲ. ಅಭ್ಯಾಸವಾಗಿ ಬಿಟ್ಟರೆ ನಮ್ಮ ಶರೀರ ಕೂಡ ಅದಕ್ಕೆ ಸ್ಪಂದಿಸುತ್ತದೆ.

ಇನ್ನು ಅಣ್ಣನ ಯಜಮಾನಿಕೆಯ ಕಾಲದಲ್ಲಿ ಸದಾ ಮನೆ ಸ್ವಚ್ಛವಾಗಿರಬೇಕಿತ್ತು. ಎಲ್ಲೆಂದರಲ್ಲಿ ಮನೆಯ ಸಾಮಾಗ್ರಿಗಳನ್ನು ಇಡುವಂತಿರಲಿಲ್ಲ. ಒಪ್ಪವಾಗಿ ಜೋಡಿಸಿಡಬೇಕಿತ್ತು. ಇನ್ನು ನಾವು ಎಲ್ಲೆಂದರಲ್ಲಿ ಕೂರುವಂತಿರಲಿಲ್ಲ, ನಿಲ್ಲುವಂತಿರಲಿಲ್ಲ. ಆ ಶಿಸ್ತು ಬದ್ಧತೆಗೆ ಮನೆಮಂದಿಯೆಲ್ಲಾ ಒಗ್ಗಿಹೋಗಿ ಬಿಟ್ಟಿದ್ದೆವು. ಇದು ಹೇಗೆ ಅಭ್ಯಾಸವಾಗಿ ಬಿಡುತ್ತದೆಂದರೆ ಈಗಲೂ ನನಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ಸಮಾಧಾನವೇ ಇರುವುದಿಲ್ಲ. ಅದು ಯಾವ ಸಮಯವಾಗಿರಲಿ ಕಸಗುಡಿಸಿ, ನೆಲ ಒರೆಸಿ, ಮನೆ ಸ್ವಚ್ಛಮಾಡಿದ ಮೇಲೆಯೇ ನೆಮ್ಮದಿ.

ಇನ್ನು ನಮಗೆ ಪಾಠಕಲಿಸಿದ ಗುರುಗಳು ಎದುರಾದರೆ ತಲೆಬಗ್ಗಿಸಿ, ನಮಸ್ಕರಿಸಿ ಗೌರವಿಸುವುದನ್ನು ಕಲಿತದ್ದು; ಅವರು ಮನೆಗೆ ಬಂದರೆ ಅವರೆದುರು ಕೂರದೆ ನಿಂತೇ ಇರುವುದು, ಬಸ್ ನಲ್ಲಿ ಪ್ರಯಾಣಿಸುವಾಗ ಹಿರಿಯರು ನಿಂತಿದ್ದರೆ ಸೀಟು ಬಿಟ್ಟುಕೊಟ್ಟು ನಿಲ್ಲುವುದು… ಇವೆಲ್ಲಾ ಬಾಲ್ಯದಿಂದಲೂ ರೂಢಿಯಾಗಿಬಿಟ್ಟವು.

ಅಭ್ಯಾಸದಿಂದ ಮನಸ್ಸು ಮತ್ತು ಶರೀರವನ್ನು ಶುಭ್ರವಾಗಿಟ್ಟುಕೊಳ್ಳಬಹುದು. ಕೆಟ್ಟ ಆಲೋಚನೆಗಳು ಬರದಂತೆ ಎಚ್ಚರವಹಿಸಿ ಒಳ್ಳೆಯ ಚಿಂತನೆಗಳು ಹರಿದು ಬರುವಂತೆ ನೋಡಿಕೊಳ್ಳಬಹುದು. ಸತತವಾದ ಅಭ್ಯಾ ಸದಿಂದ ಇದು ಸಾಧ್ಯವಾಗಿ ಬಿಡುತ್ತದೆ. ಆಗ ಮನಸ್ಸು ಮತ್ತು  ಶರೀರ ಬೇರೆಯಾಗಿರುವುದಿಲ್ಲ.

ಮಕ್ಕಳು ಏಳು ವರ್ಷದ ಅವಧಿಯೊಳಗೆ ಸಾಕಷ್ಟು ಕಲಿತು ಬಿಡುತ್ತಾರೆ. ಆ ಅವಧಿಯಲ್ಲಿ ಒಳ್ಳೆಯ ಅಭ್ಯಾಸಗಳನ್ನು ಅವರು ರೂಢಿಸಿಕೊಂಡು ಬಿಟ್ಟರೆ  ಬದುಕಿನುದ್ದಕ್ಕೂ ಅವು ಅವರಲ್ಲಿ ಸಹಜವೆಂಬಂತೆ ಹರಿದುಬರುತ್ತವೆ. ‘ಮನೆಯೇ ಮೊದಲ ಪಾಠಶಾಲೆ’ ಎಂದಿರುವುದು ಈ ಹಿನ್ನೆಲೆಯಲ್ಲಿ.

ಎಂ.ಎಸ್.ಶಿವಕುಮಾರ್, ನಿವೃತ್ತ ಉಪನ್ಯಾಸಕರು

Leave a Reply