ಬೆಂಗಳೂರು: ಜನಸಂದಣಿ ವಿಪತ್ತಿಗೆ ಕಾರಣರಾಗುವ, ಆ ಸಂದರ್ಭದಲ್ಲಿ ದೈಹಿಕ ಗಾಯಗಳಿಗಾಗಿ ಕಾರಣವಾಗುವವರ ವಿರುದ್ಧ ಕನಿಷ್ಠ ಮೂರು ವರ್ಷಗಳು ಮತ್ತು ಏಳು ವರ್ಷಗಳವರೆಗಿನ ಕಾರಾಗೃಹವಾಸ ಹಾಗೂ ಪ್ರಾಣಹಾನಿ ಪ್ರಕರಣಗಳಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೆ ಗುರಿಪಡಿಸಲು ಅವಕಾಶ ನೀಡುವ 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ನಿರ್ವಹಣೆ) ವಿಧೇಯಕವನ್ನು ವಿಧಾನಸಭೆಯಲ್ಲಿಂದು ಸದನ ಸಮಿತಿಗೆ ವಹಿಸಲಾಯಿತು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಶಾಸನರಚನಾ ಕಲಾಪದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಡಿಸಿ, ಸುದೀರ್ಘ ವಿವರಣೆ ನೀಡಿದ ನಂತರ ಶಾಸಕರು ಪಕ್ಷಬೇಧ ಮರೆತು ಹಲವು ಸೂಚನೆಗಳನ್ನು ನೀಡಿದರು.
ಬಿಜೆಪಿ, ಜೆಡಿಎಸ್ ವಿಪಕ್ಷಗಳ ಶಾಸಕರು, ಇದೊಂದು ಗಂಭೀರವಾದ ವಿಧೇಯಕವಾಗಿದ್ದು, ಸುದೀರ್ಘ ಚರ್ಚೆ ಅಗತ್ಯವಿದೆ. ಇದನ್ನು ಸದನ ಸಮಿತಿಗೆ ವಹಿಸುವಂತೆ ಆಗ್ರಹಿಸಿದರು. ಇದಕ್ಕೆ ಗೃಹಸಚಿವ ಪರಮೇಶ್ವರ್ ಅವರು ಸದನಸಮಿತಿ ರಚನೆಗೆ ಒಪ್ಪಿಗೆ ಸೂಚಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಘಟನೆ, ದೇಶದ ಹಲವೆಡೆ ಸಂಭವಿಸಿರುವ ಕಾಲ್ತುಳಿತದ ದುರ್ಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಾಗೂ ಆಯೋಜಕರನ್ನು ಜವಾಬ್ದಾರರನ್ನಾಗಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ ಎಂದರು.
ಕಾನೂನುಬಾಹಿರವಾಗಿ ಗುಂಪುಗೂಡುವುದನ್ನು ಪ್ರತಿಬಂಧಿಸಲು ಮತ್ತು ಅಪರಾಧಗಳ ದಂಡನೆಗಾಗಿ ಉಪಬಂಧಗಳನ್ನು ಕಲ್ಪಿಸಲು ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಗುಂಪುಗೂಡಿಕೆಯನ್ನು ನಿರ್ವಹಿಸಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ ಎಂದರು.
ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆ ಪ್ರಾಧಿಕಾರದಿಂದ ಅನುಮತಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಲಿದೆ. 7 ಸಾವಿರ ಜನಸಂಖ್ಯೆಗಿಂತ ಕಡಿಮೆ ಇದ್ದರೆ ಆ ವ್ಯಾಪ್ತಿಯ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ 7 ಸಾವಿರಕ್ಕಿಂತ ಹೆಚ್ಚಿದ್ದರೆ ಡಿವೈಎಸ್ಪಿ, ಬೆಂಗಳೂರಿನಲ್ಲಿ ಎಸಿಪಿ, 50 ಸಾವಿರಕ್ಕಿಂತ ಹೆಚ್ಚಿದ್ದರೆ ಎಸ್‌ಪಿ ಹಾಗೂ ಆಯುಕ್ತರು ಅನುಮತಿ ಕೊಡಬೇಕಾಗುತ್ತದೆ. ಆಯೋಜಕರು ಕಾರ್ಯಕ್ರಮಕ್ಕೆ 10 ದಿನ ಮುಂಚೆ, ಪ್ರಾಧಿಕಾರಿಗೆ 10 ದಿನಗಳ ಮುಂಚೆ ಕಾರ್ಯಕ್ರಮದ ಸಿದ್ದತೆ, ಕಾರ್ಯಕ್ರಮದ ನಡೆಯುವ ಜಾಗ, ಅಲ್ಲಿ ಹೊರ-ಬರುವವರ ದ್ವಾರಗಳ ಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿಯನ್ನು ನಮೂದಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸ್ವತ್ತಿಗೆ ಹಾನಿಯಾಗದ ರೀತಿ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊರಬೇಕು ಎಂದರು.
ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತ, ತಮಗೆ ಸಂಬಂಧ ಇಲ್ಲ ಎಂದು ಹೇಳುತ್ತಿರುವ ಹಿನ್ನಲೆಯಲ್ಲಿ ಈ ವಿಧೇಯಕ ಅಗತ್ಯವಿದೆ ಎಂದರು.
ಅಲ್ಲದೆ 50 ಸಾವಿರ ಜನರಿಗಿಂತ ಹೆಚ್ಚಿದ್ದಾಗ 1 ಕೋಟಿ ರೂ. ಮೊತ್ತದ ನಷ್ಟಭರ್ತಿ ಬಾಂಡ್ ನೀಡಬೇಕು. ಪ್ರಾಧಿಕಾರದ ಅನುಮತಿ ನೀಡುವ ಮುನ್ನ ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆಯ ಅನುಮತಿ ಪಡೆಯಬೇಕು. ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿ ಅರ್ಜಿದಾರರ ಜೊತೆ ಸಮಾಲೋಚಿಸಿ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡಬೇಕಾಗುತ್ತದೆ ಎಂದರು.
ಆರ್‌ಸಿಬಿ ವಿಜಯೋತ್ಸವಕ್ಕೆ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಪೋಸ್ಟಿಂಗ್ ಆಗಿತ್ತು ಎಂಬುದು ಕೇಳಿಬಂದಿದೆ. ಹೆಚ್ಚು ಜನರು ಸೇರಿದ ಸಂದರ್ಭದಲ್ಲಿ ಸ್ವಾಭಾವಿಕವಾಗಿ ತೊಂದರೆಯಾಗುತ್ತದೆ. ಕೆಲವೊಮೆ ತೊಂದರೆಯೂ ಆಗುವುದಿಲ್ಲ ಎಂದರು.
ಜನಸಂದಣಿಯ ಸುರಕ್ಷತೆ ಮತ್ತು ಕಾನೂನು ಸುರಕ್ಷೆಯನ್ನು ಕಾಪಾಡಿಕೊಳ್ಳಲು ಇತರೆ ಪರಿಶೀಲನೆ ಮತ್ತು ತಪಾಸಣೆ ಕೂಡ ಮಾಡಲಾಗುತ್ತದೆ. ಕಾರ್ಯಕ್ರಮದ ದಿನಾಂಕದಂದು ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಬಂದೋಬಸ್ತ್ ಯೋಜನೆಯ ಅನುಸರಣೆಯನ್ನು ಪ್ರಾಧಿಕಾರಿ ಮತ್ತು ಆಯೋಜಕರು ಖಚಿತಪಡಿಸಬೇಕು. ತುರ್ತು ಪರಿಸ್ಥಿತಿ ಅಥವಾ ಅನಿರೀಕ್ಷಿತ ಬೆಳವಣಿಗೆ ಸಂದರ್ಭದಲ್ಲಿ ನೀಡಿದ ಅನುಮತಿಯನ್ನು ರದ್ದುಗೊಳಿಸುವ ತಡೆ ಹಿಡಿಯುವ ನಿರ್ಧಾರವನ್ನು ಪ್ರಾಧಿಕಾರ ಕೈಗೊಳ್ಳಬಹುದು ಎಂದರು.
ಅನುಮತಿ ಪಡೆಯದ ಕಾರ್ಯಕ್ರಮ ಅಥವಾ ಸಮಾರಂಭ ಆಯೋಜಿಸಿದರೆ, ಆಯೋಜಿಸಲು ಯತ್ನಿಸಿದರೆ ಕನಿಷ್ಟ ಮೂರು ವರ್ಷ , 7 ವರ್ಷಗಳ ಅವಧಿಗೆ ವಿಸ್ತರಿಸಬಹದಾದ ಕಾರಾವಾಸದಿಂದ 1 ಕೋಟಿ ರೂ.ಗಳವರೆಗೆ ಜುಲಾನೆ ಅಥವಾ ಇವೆರಡರಿಂದ ದಂಡನೆಯಾಗತಕ್ಕದ್ದು, ಸುಳ್ಳು ಹೇಳಿಕೆ ವದಂತಿಗಳ ಮೂಲಕ ಸಾಮೂಹಿಕ ಹಿಂಸಾಚಾರ, ಆಸ್ತಿ ನಷ್ಟ, ಶಾಂತಿಭಂಗ ಉಂಟು ಮಾಡುವ ದುಷ್ಪ್ರೇರಿಸುವ ಕೃತ್ಯಗಳಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಸೆರೆಮನೆ ವಾಸ, 50 ಸಾವಿರ ರೂ. ಜುಲಾನೆ ಅಥವಾ ಇವರೆಡರಿಂದಲೂ ದಂಡಿಸಲಾಗುತ್ತದೆ ಎಂದರು.
ಪೊಲೀಸರ ನಿರ್ದೇಶನವನ್ನು ಉಲ್ಲಂಘಿಸಿದರೆ ಒಂದು ತಿಂಗಳ ಶಿಕ್ಷೆ, 50 ಸಾವಿರ ದಂಡ ವಿಧಿಸಲಾಗುತ್ತದೆ. ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಉಂಟಾಗುವ ನಷ್ಟಗಳಿಗೆ ಪರಿಹಾರ ಕೊಡಬೇಕಾಗುತ್ತದೆ. ಖಾಸಗಿ ಅಥವಾ ಸಾರ್ವಜನಿಕ ಸ್ವತ್ತಿಗೆ ಉಂಟಾದ ನಷ್ಟವನ್ನು ಆಯೋಜಕರು ಭರಿಸಬೇಕು, ಜೀವಹಾನಿ ಜವಾಬ್ದಾರಿಯನ್ನು ಹೊರಬೇಕು ಎಂದರು.
2023ರ ಭಾರತೀಯ ನ್ಯಾಯಸಂಹಿತೆ ಕಾಯ್ದೆ , ಕರ್ನಾಟಕ ಪೊಲೀಸ್ ಅಧಿನಿಯಮ, ಕರ್ನಾಟಕ ಮಾಹಿತಿ ತಂತ್ರಜ್ಞಾನ, ಕೇಂದ್ರದ ಅಧಿನಿಯಮಗಳು ಅನ್ವಯವಾಗಲಿವೆ. ಜನಸಂದಣಿ ವಿಪ್ಪತ್ತಿಗೆ ಕಾರಣರಾಗುವ ಅಥವಾ ಕಾರಣರಾದರೂ ಜನಸಂದಣಿ ವಿಪ್ಪತ್ತಿನ ನಿಕಟಪೂರ್ವದಲ್ಲಿ ವ್ಯಕ್ತಿ ಅಥವಾ ವ್ಯಕ್ತಿಗಳ ಕೃತ್ಯ, ನಿರ್ಲಕ್ಷ್ಯ, ಅಜಾಗರೂಕತೆಯು ಸ್ವತ್ತು ಅಥವಾ ಜೀವಹಾನಿಗೆ ಕಾರಣವಾದರೆ ಆತನ ವಿರುದ್ದವಾಗಿ ಸಾಬೀತಾಗದ ಹೊರತು ಜನಸಂದಣಿ ವಿಪತ್ತನ್ನು ಮಾಡಿದ್ದಾನೆಂದು ಪರಿಗಣಿಸುವುದು, ದೈಹಿಕ ಗಾಯಗಳಿಗೆ ಕನಿಷ್ಟ ಮೂರು ವರ್ಷಗಳು ಮತ್ತು 7 ವರ್ಷಗಳವರೆಗಿನ ಸೆರೆವಾಸ, ಹಾನಿ ಪ್ರಕರಣಗಳಿಗೆ ಕನಿಷ್ಟ 10 ವರ್ಷಗಳಿಂದ ಜೀವಾವಧಿ ಶಿಕ್ಷೆಗೆ ಗುರಿಪಡಿಸುವುದನ್ನು ವಿಧೇಯಕ ಒಳಗೊಂಡಿದೆ ಎಂದರು.
ರಾಜ್ಯ ಸರ್ಕಾರ ಇದನ್ನು ಪೂರ್ವ ಪ್ರಕಟಣೆ ಮಾಡಿದ ತರುವಾಯ ನಿಯಮಗಳನ್ನು ತರಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಆವರಣದೊಳಗೆ ಆಚರಿಸುವ ಅಥವಾ ನಡೆಸುವ ಕೌಟುಂಬಿಕ ಸಮಾರಂಭ ಅಥವಾ ಕಾರ್ಯಕ್ರಮಗಳು ಮದುವೆ ಮನೆಗಳಿಗೆ ಇವು ಅನ್ವಯಿಸುವುದಿಲ್ಲ. ಖಾಸಗಿ ಆವರಣಗಳು ಎಂಬುದು ಭೋಗ್ಯಕ್ಕೆ ಪಡೆದ, ಬಾಡಿಗೆಗೆ ಪಡೆದ ಅಥವಾ ಗುತ್ತಿಗೆಗೆ ಪಡೆದ ಆವರಣಗಳು ಒಳಗೊಂಡಿರುತ್ತವೆ ಎಂದರು.
ದೊಡ್ಡ ದೊಡ್ಡ ಸಮಾರಂಭಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ನಿಯಂತ್ರಣ ಇಲ್ಲದೆ ನಡೆಯುತ್ತವೆ. ಅಹಿತಕರ ಘಟನೆ ನಡೆಯದಿದ್ದರೆ ಪರವಾಗಿಲ್ಲ. ನಡೆದಾಗ ಯಾರಾದರೂ ಜವಾಬ್ದಾರಿ ಹೊರಬೇಕು ಎಂಬುದು ಈ ವಿಧೇಯಕ ಉದ್ದೇಶ ಎಂದರು.
ಬಿಜೆಪಿ ಶಾಸಕ ಸುರೇಶ್‌ಕುಮಾರ್ ಮಾತನಾಡಿ, ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಹೈಕೋರ್ಟ್ ಹೇಳಿದ ಮೇಲೆ ಈ ವಿಧೇಯಕ ತರಲಾಗುತ್ತಿದೆ. ಜುಲೈ4ಕ್ಕೆ ಮುಂಚೆ ತಂದಿದ್ದರೆ ಆರ್‌ಸಿಬಿ ವಿಜಯೋತ್ಸವದ ದುರಂತದಲ್ಲಿ 11 ಮಂದಿ ಸಾವು ಆಗುತ್ತಿರಲಿಲ್ಲ. ಫ್ರೀಡಂಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಗಳಿಂದ ಸುತ್ತಲಿನ ಕಾಲೇಜುಗಳಿಗೆ ಪಾಠ ಕೇಳಲಾಗದಷ್ಟು ತೊಂದರೆಯಾಗುತ್ತಿದೆ. ಪರೀಕ್ಷೆಗೆ ಸಂದರ್ಶನಕ್ಕೆ, ಆ್ಯಂಬುಲೆನ್‌್ಸಗಳು ಹೋಗಲಾಗದಂತಹ ಪರಿಸ್ಥಿತಿ ಇದೆ. ಇಂಥವುಗಳನ್ನು ತಡೆಯಲು ನಿಯಮ ರೂಪಿಸಿ. ಕಾಲ್ತುಳಿತದ ದುರ್ಘಟನೆಯಿಂದ ಈ ವಿಧೇಯಕ ತರಲಾಗಿದೆ ಎಂದರು.
ಪೂರಿಜಗನ್ನಾಥ ರಥಯಾತ್ರೆ, ಕೊಟ್ಟೂರು ಜಾತ್ರೆ, ಬೆಂಗಳೂರು ಕರಗ ಇಂತಹ ಕಡೆಗಳಲ್ಲಿ ಲಕ್ಷಾಂತರ ಜನ ಸೇರಿದ್ದರೂ ಅಹಿತಕರ ಘಟನೆ ಆಗುವುದಿಲ್ಲ ಎಂದರು.
ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಹೈಕೋರ್ಟ್ 5 ಪ್ರಶ್ನೆಗಳನ್ನು ಕೇಳಿದೆ. ಸದನದಲ್ಲಿ ಆರ್‌ಸಿಬಿ ಕಾಲ್ತುಳಿತದ ವಿಚಾರ ಚರ್ಚೆಯಾಗಿದೆ. ಇದಕ್ಕೆ ಉತ್ತರ ಕೊಡಲು ವಿಧೇಯಕ ತಂದಿದ್ದಾರೆ. ಹಿಂದಿನಿಂದ ಅನ್ವಯವಾಗುವಂತೆ ತಂದರೆ ಒಳ್ಳೆಯದು. ಕಾಲ್ತುಳಿತಕ್ಕೆ ಕಾರಣರಾದವರಿಗೂ ಶಿಕ್ಷೆಯಾಗುತ್ತದೆ. ಒಂದು ಪಾಠವಾಗುತ್ತದೆ ಎಂದರು.
ಸದನ ಸಮಿತಿಗೆ ಆಗ್ರಹ: ಜಾತ್ರೆ, ಹಬ್ಬಗಳ ಬಗ್ಗೆ ವಿಧೇಯಕದಲ್ಲಿ ಸ್ಪಷ್ಟತೆ ಇಲ್ಲ. ಕಾರ್ಯಕ್ರಮಗಳನ್ನು ಹತ್ತಿಕ್ಕುವ ಉದ್ದೇಶವಿದೆ. ಈ ಬಗ್ಗೆ ಸಮಗ್ರ ಚರ್ಚೆಯಾಗಲು ಸದನ ಸಮಿತಿಗೆ ವಹಿಸಬೇಕೆಂದು ಬಿಜೆಪಿ ಶಾಸಕ ಸುನೀಲ್‌ಕುಮಾರ್ ಆಗ್ರಹಿಸಿದರು.
ಜೆಡಿಎಸ್‌ನ ಶರಣಗೌಡ ಕಂದಕೂರು, ಬಿಜೆಪಿ ಶಾಸಕ ಸುರೇಶ್ ಗೌಡ ಸೇರಿದಂತೆ ಹಲವು ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡು ವಿಧೇಯಕದ ಸಾಧಕಬಾಧಕಗಳ ಮೇಲೆ ಬೆಳಕು ಚೆಲ್ಲಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ವಿಧೇಯಕವನ್ನು ಸದನ ಸಮಿತಿಗೆ ವಹಿಸಲಾಗುವುದು ಎಂದು ಪ್ರಕಟಿಸಿದರು.




