ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಕುರಿತು ವಿಪಕ್ಷಗಳಲ್ಲೇ ಭಿನ್ನಾಭಿಪ್ರಾಯ

8 months ago

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಭಾರಿ ಜನಸಂಖ್ಯೆ ಸೇರುವ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ರೂಪಿಸಲಾದ ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಕುರಿತಂತೆ ವಿರೋಧ ಪಕ್ಷಗಳಲ್ಲೇ ಭಿನ್ನಾಭಿಪ್ರಾಯಗಳು ಕಂಡುಬಂದವು.

ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿದಾಗ ಆರಂಭದಲ್ಲೇ ಮಾತನಾಡಿದ ಬಿಜೆಪಿಯ ಸದಸ್ಯ ಸುರೇಶ್‌ ಕುಮಾರ್‌ ಮತ್ತು ವಿಪಕ್ಷದ ನಾಯಕ ಆರ್‌. ಅಶೋಕ್‌ ಕಾಯ್ದೆಯನ್ನು ಸ್ವಾಗತಿಸಿದರು. ತಡವಾಗಿಯಾದರೂ ಸರ್ಕಾರ ಎಚ್ಚೆತ್ತುಕೊಂಡು ಕಾಯ್ದೆ ರೂಪಿಸಿದೆ ಎಂದು ಪ್ರಶಂಸಿದ್ದರು.

ನಂತರ ಮಾತನಾಡಿದ ಬಿಜೆಪಿ ಉಚ್ಛಾಟಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಒಂದು ಧರ್ಮಕ್ಕೆ ದಿನದ ಐದು ಬಾರಿ ಧ್ವನಿವರ್ಧಕದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಗಣೇಶೋತ್ಸವದ ಸಮಯದಲ್ಲಿ ಮೆರವಣಿಗೆಯ ವಾಹನದ  ಮುಂದಿನ ಡಿಜೆ ಸದ್ದುಮಾತ್ರ ಸರ್ಕಾರಕ್ಕೆ ಕಿರಿಕಿರಿಯಾಗುತ್ತಿದೆ. ಗಣೇಶೋತ್ಸವಗಳನ್ನು ನಿಯಂತ್ರಿಸಲು ವಿಧೇಯಕ  ತರಲಾಗುತ್ತಿದೆ ಎಂದು ವಿರೋಧಿಸಿದರು

ನಂತರ ಬಿಜೆಪಿಯ ಸುನಿಲ್‌ ಕುಮಾರ್‌, ಎಂ.ಚಂದ್ರಪ್ಪ, ಹರೀಶ್‌ ಪೂಂಜಾ, ಸುರೇಶ್‌ ಗೌಡ, ಸಿಸಿ ಪಾಟೀಲ್‌‍, ಚನ್ನಬಸಪ್ಪ, ಉಮಾನಾಥ್‌ ಕೋಟ್ಯಾನ್‌ ಸೇರಿದಂತೆ ಎಲ್ಲರೂ ಮಸೂದೆಯನ್ನು ಬಲವಾಗಿ ವಿರೋಧಿಸಿದರು. ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವಾಗ ಒಂದು ಕೋಟಿ ರೂ.ಗಳ ಬಾಂಡ್‌ ನೀಡಬೇಕು ಎಂದು ನಿಯಮದಲ್ಲಿದೆ. ಇದು ಅವೈಜ್ಞಾನಿಕ ಮತ್ತು ಅಸಾಧ್ಯ ಎಂದರು.

ಬಾಂಡ್‌ಗಳ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಇಳಿಸುವುದಾಗಿ ಗೃಹ ಸಚಿವರು ತಿದ್ದುಪಡಿ ಮಾಡಿಕೊಂಡರು. ಅದಕ್ಕೂ ವಿರೋಧ ಪಕ್ಷಗಳು ಒಪ್ಪಲಿಲ್ಲ. ಸರ್ಕಾರಿ ಕಾರ್ಯಕ್ರಮಗಳು, ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿನ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಹಬ್ಬ ಹರಿದಿನಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದರು.

ರಾಜಕೀಯ ಸಮಾವೇಶಗಳಿಗೂ ವಿನಾಯಿತಿ ನೀಡಿ ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು.

ಸರ್ಕಾರಿ ಕಾರ್ಯಕ್ರಮ ಎಂದಾದರೆ ಸಚಿವರು ಇರುತ್ತಾರೆ. ಪಕ್ಷದ ಕಾರ್ಯಕ್ರಮಗಳನ್ನು ಮಾಡುವಾಗ ರಾಜಕೀಯ ದ್ವೇಷಕ್ಕೆ, ಕೇಸು ಹಾಕಿ ಜೀವಾವಧಿ ಶಿಕ್ಷೆ ವಿಧಿಸುವ ಅಪಾಯವಿದೆ ಎಂದು ವಿಪಕ್ಷಗಳ ಶಾಸಕರು ಆತಂಕ ವ್ಯಕ್ತಪಡಿಸಿದರು.

ಆರ್‌.ಅಶೋಕ್‌ ಮಾತನಾಡಿ, ನಾವು ರಾಜಕೀಯದಲ್ಲಿದ್ದೇವೆ. ಯಾವುದೋ ಕಾರ್ಯಕ್ರಮ ಮಾಡಿದಾಗ ಸಣ್ಣಪುಟ್ಟ ತಪ್ಪುಗಳಿಗೆ ಕ್ರಿಮಿನಲ್‌ ಕೇಸ್‌‍ ಹಾಕಿ ಜೀವಾವಧಿ ಶಿಕ್ಷೆ ವಿಧಿಸಿದರೆ ಏನು ಮಾಡಬೇಕು? ಜನಸಂದಣಿಯ ಕಾರ್ಯಕ್ರಮಗಳಲ್ಲಿ ವಿರೋಧಿಗಳು ಸಂಚು ರೂಪಿಸಿ ತೊಂದರೆಗೆ ಸಿಲುಕಿಸುವ ಅಪಾಯ ಇದೆ. ಕಾಯ್ದೆಯನ್ನು ಅಂಗೀಕಾರ ಮಾಡಬೇಡಿ ಎಂದರು.

ಈವರೆಗೂ ಸರ್ಕಾರ 40 ವಿಧೇಯಕಗಳನ್ನು ಅಂಗೀಕರಿಸಿಕೊಂಡಿದೆ. ಒಂದೇ ದಿನದಲ್ಲಿ 24 ಮಸೂದೆಗಳಾಗಿವೆ. ಎಲ್ಲದಕ್ಕೂ ನಾವು ಸಹಕಾರ ನೀಡಿದ್ದೇವೆ. ಮಹಾಭಾರತದಲ್ಲಿ ಶ್ರೀ ಕೃಷ್ಣ ಐದು ಗ್ರಾಮಗಳನ್ನಾದರು ಕೊಡಿ ಎಂದು ಕೇಳುವಂತೆ, ಇದೊಂದು ಮಸೂದೆಯನ್ನಾದರೂ ಸದನ ಸಮಿತಿಗೆ ಒಪ್ಪಿಸಿ ಎಂದು ಕೇಳುತ್ತಿದ್ದೇವೆ. ಸರ್ಕಾರ ವಿರೋಧ ಪಕ್ಷಗಳ ಮಾತಿಗೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.

ಸುನಿಲ್‌ ಕುಮಾರ್‌ ಕಾಯ್ದೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಸದನ ಸಮಿತಿಗೆ ವಹಿಸಿ ಎಂದು ಪಟ್ಟು ಹಿಡಿದರು. ಬಿಜೆಪಿಯ ಉಚ್ಛಾಟಿದ ಶಾಸಕ ಎಸ್‌‍.ಟಿ.ಸೋಮಶೇಖರ್‌ ಕಾಯ್ದೆಯನ್ನು ಬೆಂಬಲಿಸಿ ಅಂಗೀಕರಿಸಲು ಮನವಿ ಮಾಡಿದರು.

ಸಭಾಧ್ಯಕ್ಷ ಯು.ಟಿ.ಖಾದರ್‌ 3 ಸಾವಿರ ಜನ ಸೇರುವ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಅಗತ್ಯ ಇಲ್ಲ ಎಂದು ವಿಧೇಯಕದಲ್ಲಿದೆ. ಚಲನಚಿತ್ರ ನಟರಂತಹ ಸೆಲೆಬ್ರಿಟಿಗಳು ಬಂದಾಗ ಏಕಾಏಕಿ 6 ಸಾವಿರ ಜನ ಸೇರಬಹುದು. ಆಗ ಯಾರು ಹೊಣೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಮಧ್ಯ ಪ್ರವೇಶಿಸಿ, ಗೃಹ ಸಚಿವರು ಈಗಾಗಲೇ ಹಲವು ವಿನಾಯಿತಿಗಳನ್ನು ನೀಡಿದ್ದಾರೆ. 3 ಸಾವಿರ ಬದಲಿಗೆ 6 ಸಾವಿರ ಜನ ಸೇರಿದರೆ ಅದರ ಹೊಣೆಯನ್ನು ಕಾರ್ಯಕ್ರಮದ ಆಯೋಜಕರು ಹೊತ್ತುಕೊಳ್ಳಬೇಕು ಎಂದರು.

ಬಿಜೆಪಿಯ ಬಿ.ವೈ.ವಿಜಯೇಂದ್ರ ರಾಜಕೀಯ ಪಕ್ಷಗಳ ಮೇಲೆ ದಬ್ಬಾಳಿಕೆಯಾಗುವಂತಹ ಈ ಕಾಯ್ದೆಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.

ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದ ಗೃಹ ಸಚಿವ ಜಿ ಪರಮೇಶ್ವರ್, ವಿಧೇಯಕವನ್ನು ಸದನ ಸಮಿತಿಗೆ ಒಪ್ಪಿಸುವುದಾಗಿ ಪ್ರಕಟಿಸಿದರು.

Leave a Reply