ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಇವುಗಳ ಅನುಷ್ಠಾನ ಪರಿಶೀಲನೆಗೆ ಸಮಿತಿಗಳನ್ನು ರಚಿಸಿದೆ. ಇವುಗಳಿಗೆ ಕಾಂಗ್ರೆಸ್ ಕಾರ್ಯಕರ್ತರುಗಳನ್ನು ನೇಮಕ ಮಾಡಿ ಅವರಿಗೆ ಸರ್ಕಾರದಿಂದ ಸಂಬಳ ನೀಡುತ್ತಿರುವುದು ಅಕ್ರಮ ಎಂದು ವಿಪಕ್ಷಗಳು ಆಪಾದಿಸಿವೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯರು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಅಧ್ಯಕ್ಷರಿಗೆ ಗೌರವ ಧನ, ಭತ್ಯೆ ನೀಡುತ್ತಿರುವ ಕ್ರಮ ಸರಿಯಲ್ಲ. ಕೂಡಲೇ ಈ ಸಮಿತಿಗಳನ್ನು ರದ್ದುಪಡಿಸಿ ಎಂದು ಆಗ್ರಹಿಸಿ ಧರಣಿ ನಡೆಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ನೀಡಿದ ಉತ್ತರದಿಂದ ತೀವ್ರ ಅಸಮಾಧಾನಗೊಂಡ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಸದನದಲ್ಲಿ ಮಾತಿನ ಚಕಮಕಿ ಏರಿದ ದನಿಯಲ್ಲಿ ನಡೆದು ಸದನ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.
ಈ ವಿಷಯವಾಗಿ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಗಿ ಸಭಾಧ್ಯಕ್ಷರು ಕಲಾಪವನ್ನು ಕೆಲಕಾಲ ಮುಂದೂಡಿದರು. ನಂತರ ಸಭಾಧ್ಯಕ್ಷರ ಕೊಠಡಿಯಲ್ಲಿ ಸಂಧಾನ ಸಭೆ ನಡೆದು ಅರ್ಧ ಗಂಟೆ ಬಳಿಕ ಸದನ ಮತ್ತೆ ಸಮಾವೇಶಗೊಂಡಿತು.
ಆಗ ಮತ್ತೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕರು ಗ್ಯಾರಂಟಿ ಅನುಷ್ಠಾನ ಸಮಿತಿಗಳ ಸದಸ್ಯರ ನೇಮಕಾತಿಯಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಎಂದು ಒತ್ತಾಯಿಸಿದರು.
ಸಮಿತಿಗೆ 10 ಸದಸ್ಯರನ್ನು ಮಾಡಿ, ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿ, ಖಜಾನೆಯ ಹಣ ದುರ್ಬಳಕೆಗೆ ಅವಕಾಶ ಕೊಡಲ್ಲ ಎಂದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಡಿ ಕೆ ಶಿವಕುಮಾರ್, ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಿಣಿಯರಿಗೆ 2 ಸಾವಿರ ರೂ. ಗೃಹಲಕ್ಷ್ಮಿ, ಯುವಕರಿಗೆ ಯುವನಿಧಿ ಸೇರಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 52 ಸಾವಿರ ಕೋಟಿ ರೂ. ವಾರ್ಷಿಕ ವೆಚ್ಚವಾಗುತ್ತಿದೆ. ಅದು ಫಲಾನುಭವಿಗಳಿಗೆ ತಲುಪುತ್ತಿದೆಯೇ, ಇಲ್ಲವೇ ಎಂದು ಪರಿಶೀಲಿಸಲು ಕಾರ್ಯಕರ್ತರನ್ನು ಕಳುಹಿಸಿದರೆ ತಪ್ಪೇನು? ಎಂದು ಸಮರ್ಥನೆಗೆ ಮುಂದಾದರು.
ನಮಗೆ ನಾಡಿನ ಜನರು 138 + 2 ಶಾಸಕರ ಸ್ಥಾನವನ್ನು ಕೊಟ್ಟು ಅಧಿಕಾರ ನೀಡಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಯಾಗಬೇಕು ಎಂಬ ಬೇಡಿಕೆಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಅಲ್ಲಿಯವರೆಗೂ ಕಾರ್ಯಕರ್ತರು ಸಮಿತಿಯಲ್ಲಿ ಮುಂದುವರೆಯುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರ ಉತ್ತರ ವಿರೋಧಿಸಿ ವಿಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಧರಣಿ ಕೈ ಬಿಡುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಮಾಡಿದ ಮನವಿಗೆ ಯಾರೂ ಸ್ಪಂದಿಸದ ಪರಿಣಾಮ ಧರಣಿ ನಡುವೆ ಬೇರೆ ಕಲಾಪ ಕೈಗೆತ್ತಿಕೊಂಡರು.
ಇದಕ್ಕೂ ಮುನ್ನ ಜೆಡಿಎಸ್ ನ ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯೋಜನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವ ಧನ ಮತ್ತು ಸಭಾಭತ್ಯೆ ನಿಗದಿಪಡಿಸಿ ಆದೇಶಿಸಲಾಗಿದೆ ಎಂದರು.
ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ 40 ಸಾವಿರ, ಉಪಾಧ್ಯಕ್ಷರಿಗೆ 10 ಸಾವಿರ ಗೌರವ ಧನ ಹಾಗೂ ಸದಸ್ಯರಿಗೆ 1,100 ರೂ. ಸಭಾಭತ್ಯೆ ನೀಡಲಾಗುತ್ತಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಿಗೆ 25 ಸಾವಿರ ಗೌರವಧನ, ಸದಸ್ಯರಿಗೆ ಪ್ರತಿ ಸಭೆಗೆ 1000 ರೂ. ಸಭಾಭತ್ಯೆ ನೀಡಲಾಗುತ್ತಿದೆ ಎಂದರು.
ಇದನ್ನು ವಿರೋಧಿಸಿದ ಕೃಷ್ಣಪ್ಪ, ರಾಜ್ಯ ಸರ್ಕಾರದ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚಿಕೆ ಮಾಡಲು ಅವಕಾಶವಿದೆಯೇ? ಅವರಿಗೆ ಕಾನೂನು ಬಾಹಿರವಾಗಿ ಸಂಬಳ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪರಿಶೀಲನೆಗೆ ಅಧಿಕಾರಿಗಳು, ಶಾಸಕರು ಇಲ್ಲವೇ? ಎಂದು ಕೇಳಿದರು.
2.50 ಲಕ್ಷ ವಿವಿಧ ಇಲಾಖೆಗಳ ಹುದ್ದೆಗಳು ರಾಜ್ಯದಲ್ಲಿ ಖಾಲಿ ಇವೆ. ಅವುಗಳನ್ನೂ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿಬಿಡಿ, ನೇಮಕಾತಿ ನಿಯಮಾವಳಿಗಳು ಏಕೆ ಬೇಕು? ಕೆಪಿಎಸ್‍ಸಿಯನ್ನು ಮುಚ್ಚಿಬಿಡಿ ಎಂದು ಆಕ್ರೋಶಭರಿತರಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಒಂದು ರೂಪಾಯಿ ಹೆಚ್ಚಳ ಮಾಡಿ ಎಂದರೆ ಹಿಂದೆಮುಂದೆ ನೋಡುತ್ತೀರಿ. ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಧಾರಾಳವಾಗಿ ನೀಡುತ್ತಿದ್ದೀರಿ. ಆಶ್ರಯ ಸಮಿತಿ ಸೇರಿದಂತೆ ಬೇರಾವುದೇ ಸಮಿತಿಗೆ ಸಂಬಳ ನೀಡುತ್ತಿಲ್ಲ. ಅನುಷ್ಠಾನ ಸಮಿತಿಗೆ ಏಕೆ ಸಂಬಳ? ಎಲ್ಲಾ ಗ್ಯಾರಂಟಿ ಯೋಜನೆಗಳು ಆನ್ಲೈನ್ ಮೂಲಕ ಫಲಾನುಭವಿಗಳಿಗೆ ತಲುಪುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ಏಕೆ ಹಣ ನೀಡಬೇಕು? ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸರ್ಕಾರಕ್ಕೂ, ಕಾಂಗ್ರೆಸ್‍ಗೂ ವ್ಯತ್ಯಾಸವಿಲ್ಲದಂತಾಗಿದೆ. 180 ಕೋಟಿ ರೂ. ತೆಗೆದುಕೊಂಡು ಹೋಗಿ ಬಳ್ಳಾರಿಯಲ್ಲಿ ಹಂಚಿದ್ದಾರೆ. ಯಾವ ಲೆಕ್ಕದಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡುತ್ತಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್‍ನಲ್ಲಿ ದುಡ್ಡಿಲ್ಲ ಎಂದರೆ ರಸ್ತೆರಸ್ತೆಯಲ್ಲಿ ಭಿಕ್ಷೆ ಬೇಡಿ ಕೊಡಲಿ. ಸಮಿತಿಗೆ ನೇಮಕ ಮಾಡಲು ವಿದ್ಯಾರ್ಹತೆ ಏನು? ಕಾಂಗ್ರೆಸ್ ಪಕ್ಷದಿಂದ ಕೊಡಲಿ, ಎಲ್ಲವೂ ಆನ್ಲೈನ್ ಮೂಲಕ ಸಂದಾಯವಾಗುತ್ತಿರುವಾಗ ತೆರಿಗೆ ಹಣವನ್ನು ಏಕೆ ಕೊಡಬೇಕು ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಜೆಡಿಎಸ್, ಬಿಜೆಪಿ ಶಾಸಕರು ಎದ್ದುನಿಂತು ಸರ್ಕಾರದ ವಿರುದ್ಧ ಮಾತನಾಡಲು ಮುಂದಾದರು. ಪ್ರತಿಯಾಗಿ ಆಡಳಿತ ಪಕ್ಷದ ಶಾಸಕರು ಎದ್ದುನಿಂತು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲ, ಗೊಂದಲದ ವಾತಾವರಣ ಸೃಷ್ಟಿಯಾಯಿತು.




