ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ನಮ್ಮ ಮೆಟ್ರೋ ಹಳಿಯಲ್ಲಿ ಬಿರುಕುಬಿಟ್ಟಿರುವ ಘಟನೆ ನಡೆದಿದೆ. ಮೆಟ್ರೋ ಲೈನ್‌ನಲ್ಲಿ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು ಸ್ವಲ್ಪ ಯಾಮಾರಿದ್ದರೂ ದೊಡ್ಡ ಗಂಡಾಂತರ ಸಂಭವಿಸುತ್ತಿತ್ತು.
ಮೆಜೆಸ್ಟಿಕ್‌ನಿಂದ ಕೆಂಗೇರಿ ಕಡೆಗೆ ಸಾಗುವ ನೇರಳೆ ಮಾರ್ಗದ ಮೈಸೂರು ರಸ್ತೆಯಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಟ್ಟಣಗೆರೆ ಮೆಟ್ರೋ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ.
ಹಳಿ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಕು ಹಿನ್ನೆಲೆಯಲ್ಲಿ ಹಳಿಯ ಶಬ್ದ, ವೇಗದಲ್ಲಿ ಬದಲಾವಣೆ ಆಗಿದೆ. ಇದನ್ನು ಮೆಟ್ರೋ ಪೈಲೆಟ್ ಹಾಗೂ ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣವೇ ತಾಂತ್ರಿಕ ಸಿಬ್ಬಂದಿ ಅದನ್ನು ದುರಸ್ತಿ ಮಾಡಿದೆ. ಒಂದು ವೇಳೆ ಇದೇ ಟ್ರ್ಯಾಕ್ ನಲ್ಲಿ ರೈಲು ಸಂಚಾರ ಮಾಡಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ನಿಗಮದ ಸಿಬ್ಬಂದಿ ತಿಳಿಸಿದ್ದಾರೆ.
ಈ ಕಾಮಗಾರಿ ಪೂರ್ಣಗೊಂಡು ಕೇವಲ ಮೂರು ವರ್ಷವಾಗಿದೆ. ಇಷ್ಟು ಸಣ್ಣ ಅವಧಿಯಲ್ಲಿ ಟ್ರ್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ಏನಾದರೂ ಲೋಪವಾಗಿದೆಯೇ? ಎಂಬ ಅನುಮಾನವೂ ಕಾಡುತ್ತಿದೆ.
ಹೊಸದಾಗಿ ನಿರ್ಮಿಸಿದ ಟ್ರ್ಯಾಕ್ ಬಿರುಕು ಬಿಡಲು ಕಾರಣವೇನು? ಎಂಬುದು ತಿಳಿದುಬಂದಿಲ್ಲ. ಇನ್ನು ಹಳಿ ಬಿರುಕು ಬಿಟ್ಟ ವಿದ್ಯಮಾನವನ್ನು ಸಾರ್ವಜನಿಕರ ಗಮನಕ್ಕೂ ತರದೇ ತಾಂತ್ರಿಕ ತೊಂದರೆ ಎಂಬ ಅಸ್ತ್ರವನ್ನು ಬಳಸಿಕೊಂಡು ಬಿಎಂಆರ್ ಸಿಎಲ್ ಸಿಬ್ಬಂದಿ ನಿಗೂಢವಾಗಿ ದುರಸ್ಥಿ ಮಾಡಿದ್ದಾರೆ. ಆದರೆ, ಕಾಮಗಾರಿ ಲೋಪದ ಬಗ್ಗೆ ಬಹಿರಂಗಪಡಿಸದೇ ಬಿಎಂಆರ್‌ಸಿಎಲ್ ನಿರ್ಲಕ್ಷ್ಯವಹಿಸಿದೆಯೇ ಎಂಬ ಅನುಮಾನವೂ ಶುರುವಾಗಿದೆ. ಈ ಮೂಲಕ ಗುತ್ತಿಗೆದಾರರನ್ನು ಬಚಾವ್ ಮಾಡಲಾಗುತ್ತಿದೆ ಎಂಬ ಗುಮಾನಿಯೂ ಕಂಡುಬರುತ್ತಿದೆ.




