ಶರಣ್ ಪಂಪ್ ವೆಲ್ ಮೇಲೆ ಪ್ರಕರಣ ಹೂಡಿರುವುದು ಸ್ವಾಗತಾರ್ಹ

12 months ago

ತಕ್ಷಣವೆ ಬಂಧಿಸಿ ಕ್ರಮ ಕೈಗೊಳ್ಳಿ: ಸಿಪಿಐಎಂ ಆಗ್ರಹ

ಮಂಗಳೂರು: ಬಂದ್ ಗೆ ಕರೆ ನೀಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಶರಣ್ ಪಂಪ್ ವೆಲ್ ಮೇಲೆ ಎಫ್ಐಆರ್ ದಾಖಲಿಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಸ್ವಾಗತಿಸಿದೆ. ಆದರೆ ಇದು ಹಿಂದಿನ ಅನುಭವದಂತೆ ಆಗಬಾರದು. ಶರಣ್ ಪಂಪ್ ವೆಲ್ ಹಾಗೂ  ಪೂತ್ತೂರು ಸಹಿತ ಜಿಲ್ಲೆಯ ಇತರೆಡೆ ಇದೇ ಆರೋಪ ಹೊತ್ತ ಪ್ರತಿಯೊಬ್ಬರನ್ನು ತಕ್ಷಣವೇ ಬಂಧನಕ್ಕೆ ಒಳಪಡಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.

ಈ ಹಿಂದೆ ಶರಣ್ ಪಂಪ್ ವೆಲ್ ಹಾಗೂ ಇನ್ನಿತರ ಸಂಘ ಪರಿವಾರದ ನಾಯಕರ ವಿರುದ್ಧ ಕೋಮು ದ್ವೇಷ ಕೆರಳಿಸಿದ ಆಪಾದನೆ ಹೊರಿಸಿ ಪ್ರಕರಣ ದಾಖಲಿಸಿ ಹಾಗೆಯೆ ಬಿಡಲಾಗಿತ್ತು. ಇದು ಉಚ್ಚ ನ್ಯಾಯಾಲಯದಲ್ಲಿ ಎಫ್ಐಆರ್ ಗೆ ತಡೆಯಾಜ್ಞೆ ತರಲು, ಅಥವಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ದ್ವೇಷ ಭಾಷಣಕಾರರಿಗೆ, ಕೋಮು ಹಿಂಸೆ ಪ್ರಚೋದಕರಿಗೆ ಅನುಕೂಲ ಒದಗಿಸಿತ್ತು. ಶರಣ್ ಪಂಪ್ ವೆಲ್, ಸೂಲಿಬೆಲೆ ಮತ್ತಿತರರು ಸರಕಾರದ ಈ ಉದಾರ ನಿಲುವಿನ ಲಾಭ ಪಡೆದು ಈ ಹಿಂದೆ ಹಲವು ಬಾರಿ ಪ್ರಕರಣಗಳಿಗೆ ತಡೆಯಾಜ್ಞೆ ತಂದಿದ್ದರು. ಇದು ಸಮಾಜಲ್ಲಿ ಕೋಮು ಹಿಂಸೆಗೆ ಪ್ರಚೋದಿಸುವವರಿಗೆ ಕಾನೂನು, ಸರಕಾರದ ಕುರಿತು ಭಯ ಇಲ್ಲದ ಸ್ಥಿತಿಗೆ ಕಾರಣ ಆಗಿತ್ತು ಎಂದು ಹೇಳಿದೆ.

ಈ ಬಾರಿ ಹಾಗಾಗದಂತೆ ಸರಕಾರ ನೋಡಿಕೊಳ್ಳಬೇಕು. ಈಗಾಗಲೆ ಪ್ರಕರಣ ದಾಖಲಾಗಿರುವ ಶರಣ್ ಪಂಪ್ ವೆಲ್, ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಮತ್ತಿತರ ಸಂಘ ಪರಿವಾರದ ಪ್ರಮುಖರನ್ನು ಕಾಲಾವಕಾಶ ನೀಡದೆ ತಕ್ಷಣ ಬಂಧಿಸಬೇಕು, ಉಚ್ಚ ನ್ಯಾಯಾಲಯದಲ್ಲಿ ಪೊಲೀಸ್ ಇಲಾಖೆ ಕೇವಿಯೆಟ್ ಸಲ್ಲಿಸಿ, ಈ ಪ್ರಕರಣದಲ್ಲಿ ಏಕಪಕ್ಷೀಯವಾಗಿ ತಡೆಯಾಜ್ಞೆ ದೊರಕದಂತೆ ನೋಡಿಕೊಳ್ಳಬೇಕು, ಆ ಮೂಲಕ ಕೋಮು ಹಿಂಸಾಚಾರದ ವಿರುದ್ಧ ಸರಕಾರದ ಕ್ರಮಗಳು ಸಾಂಕೇತಿಕ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಸಿಪಿಐಎಂ ದ.ಕ‌ .ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸಿದೆ.

Leave a Reply