ಇಡೀ ಜಗತ್ತಿಗೆ ಶಾಂತಿಯನ್ನು ಬೋಧಿಸಿದ ಮಹಾವೀರ ಹೆಸರಿನಲ್ಲಿರುವ ಮಂಗಳೂರಿನ ಪಂಪ್ ವೆಲ್ ಮಹಾವೀರ ಸರ್ಕಲ್ ನಲ್ಲಿ ಮಂಗಳೂರನ್ನು ದರೋಡೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸುವುದು ಸರಿಯೇ ?
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮಂಗಳೂರಿನ ಪಂಪ್ ವೆಲ್ ನ ಮಹಾವೀರ ಸರ್ಕಲ್ ನಲ್ಲಿ ಸ್ಥಾಪಿಸಲು ಮಂಗಳೂರು ಮಹಾನಗರ ಪಾಲಿಕೆ ಟಿಪ್ಪಣಿ ಸಿದ್ದಪಡಿಸಿದೆ. ಇದು ಕರಾವಳಿಗರಿಗೂ ಶಾಂತಿಯ ಪ್ರತೀಕ ಮಹಾವೀರರಿಗೂ ಮಾಡುವ ಅವಮಾನ ಅಲ್ಲವೇ ? ಕರಾವಳಿಯನ್ನು ಲೂಟಿ ಮಾಡಿದವರ, ಕರಾವಳಿಯನ್ನು ಅಭಿವೃದ್ದಿಯಲ್ಲಿ ಹಿಂದೆ ತಳ್ಳಿದವರ ಪ್ರತಿಮೆಯನ್ನು ಕರಾವಳಿಯಲ್ಲಿ ಸ್ಥಾಪಿಸುವುದು ಸರಿಯೇ ?
1665 ರಲ್ಲಿ ಛತ್ರಪತಿ ಶಿವಾಜಿ ಬಸ್ರೂರಿನಲ್ಲಿ ದರೋಡೆ ನಡೆಸದೇ ಇದ್ದಲ್ಲಿ ಇವತ್ತು ಇಡೀ ಕರಾವಳಿ ಹೀಗಿರುತ್ತಿರಲಿಲ್ಲ. ಮುಂಬೈಯನ್ನೂ ಮೀರಿಸುವ ವಾಣಿಜ್ಯ ನಗರಿಯಾಗಿ ಇರುತ್ತಿತ್ತು. ಆಗ ಬಸ್ರೂರು ಕರಾವಳಿಯ ದೊಡ್ಡ ವಾಣಿಜ್ಯ ನಗರ. ಅಕ್ಕಿ, ಕಾಳುಮೆಣಸು ಸೇರಿದಂತೆ ಕರಾವಳಿ ಮಲೆನಾಡಿಗರು ಬೆಳೆಯುತ್ತಿದ್ದ ಮಸಾಲ ಪದಾರ್ಥಗಳನ್ನು ಬಸ್ರೂರಿನ ಮೂಲಕ ವಿದೇಶಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಬಸ್ರೂರು ಮಹಾಲಿಂಗೇಶ್ವರ ಜಾತ್ರೆ ಮಹಾಶಿವರಾತ್ರಿಯಂದೇ ನಡೆಯುತ್ತದೆ. ಆಗೆಲ್ಲಾ ಜಾತ್ರೆಯೆಂದರೆ ಧಾರ್ಮಿಕ ಕಾರ್ಯಕ್ರಮವಲ್ಲ. ಮಹಾಲಿಂಗೇಶ್ವರನ ತೇರು ಎಳೆಯುವ ಜಾತ್ರೆಯೆಂದರೆ ಕೃಷಿಕರ ಬದುಕಿನ ಮಹತ್ತರ ದಿನ. ಆ ದಿನ ಸಂತೆಯಲ್ಲಿ ಕೃಷಿಕರು ಬೆಳೆದಿದ್ದನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಮೊದಲೇ ವಾಣಿಜ್ಯ ನಗರ ಬೇರೆ. ಅಂದು ರೈತರು ಮತ್ತು ವ್ಯಾಪಾರಿಗಳ ಬಳಿ ಹಣವಿರುತ್ತದೆ ಎಂದುಕೊಂಡು 1665 ರ ಫೆಬ್ರವರಿಯ ಮಹಾಶಿವರಾತ್ರಿ ದಿನ ಶಿವಾಜಿ ತನ್ನ ದರೋಡೆಕೋರ ಸೈನ್ಯದ ಜೊತೆ ದಾಳಿ ಮಾಡಿ ದೇವಸ್ಥಾನವನ್ನೂ ಸೇರಿದಂತೆ ಲೂಟಿ ಮಾಡಿದರು. ಬಸ್ರೂರಿನ ಮುಖ್ಯ ವ್ಯಾಪಾರಿ ವರ್ಗವಾಗಿದ್ದ ಜಿಎಸ್ ಬಿ (ಗೌಡ ಸಾರಸ್ವತ ಬ್ರಾಹ್ಮಣ)ರ ಮೇಲೆ ಶಿವಾಜಿ ದರೋಡೆ ಪಡೆ ಹಲ್ಲೆ ನಡೆಸಿತು. ಈ ದಾಳಿಯ ಬಳಿಕ ಬಸ್ರೂರು ವ್ಯಾಪಾರ ಕೇಂದ್ರ ನೆನೆಗುದಿಗೆ ಬಿದ್ದಿತ್ತು.
ಕರಾವಳಿಯ ಮೇಲೆ ಶಿವಾಜಿ ದರೋಡೆಗಾಗಿ ದಾಳಿ ಮಾಡಿದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾದ ಸತ್ಯ. ಅದನ್ನು ಬಲಪಂಥೀಯರು ‘ಪೋರ್ಚುಗೀಸರ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿ’ ಎನ್ನುತ್ತಾರೆ. ಇದು ಸುಳ್ಳು. ಶಿವಾಜಿಯು ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ದಾಳಿ ಮಾಡುವಾಗ ಪೋರ್ಚುಗೀಸರ ಆಡಳಿತವಿರುವ ಗೋವಾವನ್ನು ಹಾದು ಬರುತ್ತಾರೆ. ಗೋವಾದಲ್ಲಿರುವ ಪೋರ್ಚುಗೀಸರ ಮೇಲೆ ಯಾವ ದಾಳಿಯನ್ನೂ ಮಾಡಲ್ಲ. ಆಗ ದಕ್ಷಿಣ ಕನ್ನಡದ ಬಸ್ರೂರಿನಲ್ಲಿ ಕೆಳದಿಯ ಭದ್ರಪ್ಪ ನಾಯಕ ಡಚ್ಚರೊಂದಿಗೆ ವಹಿವಾಟು ನಡೆಸುತ್ತಿದ್ದರು. ಪೋರ್ಚುಗೀಸರೂ ಕೂಡಾ ಕೆಳದಿಯವರ ಜೊತೆ ವ್ಯಾಪಾರ ವಹಿವಾಟಿಗೆ ಒಪ್ಪಂದ ಮಾಡಿದ್ದರೇ ವಿನಹ ಬಸ್ರೂರು ಪೋರ್ಚುಗೀಸರ ಹಿಡಿತದಲ್ಲಿ ಇರಲಿಲ್ಲ. ಕನ್ನಡಿಗರೇ ಆದ ಕೆಳದಿಯವರ ಹಿಡಿತದಲ್ಲಿತ್ತು. ನಗ ನಾಣ್ಯಗಳ ದರೋಡೆಯ ಕಾರಣಕ್ಕಾಗಿಯೇ ಶಿವಾಜಿ ದಕ್ಷಿಣ ಕನ್ನಡ ಜಿಲ್ಲೆಗೆ ದಾಳಿ ನಡೆಸಿದರು.
ಪಂಪ್ ವೆಲ್ ಮಹಾವೀರ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾದರೆ ಕೋಟಿ ಚೆನ್ನಯ್ಯರ ಪ್ರತಿಮೆ ಸ್ಥಾಪನೆ ಮಾಡಬೇಕು. ಅಲ್ಲೆ ಹತ್ತಿರದಲ್ಲಿ ಕಂಕನಾಡಿ ಗರೋಡಿಯೂ ಇದೆ. ಕರಾವಳಿಗರಿಗೊಂದು ಸ್ವಾಭಿಮಾನದ ಬದುಕು ಕಲಿಸಿದ ಕೋಟಿ ಚೆನ್ನಯ್ಯರು ಪ್ರತಿಮೆ ಸ್ಥಾಪಿಸಬೇಕೆ ಹೊರತು ಮಂಗಳೂರನ್ನು ದರೋಡೆ ಮಾಡಿದ್ದ ಶಿವಾಜಿಯದ್ದಲ್ಲ.
– ನವೀನ್ ಸೂರಿಂಜೆ, ಪತ್ರಕರ್ತರು




