ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿ ಪಕ್ಷಕ್ಕೆ ರಾಜ್ಯ ಸರಕಾರ ರಚನೆಗೆ ಅಗತ್ಯವಾದ ಶಾಸಕರ ಸಂಖ್ಯೆಯನ್ನು ನೀಡದಿರುವಾಗಲೂ, ಬಿಜೆಪಿ ಕೇಂದ್ರ ಸರಕಾರ ಹಾಗೂ ರಾಜ್ಯಪಾಲರ ಕಛೇರಿಗಳನ್ನು ದುರ್ಬಳಕೆ ಮಾಡಿಕೊಂಡು ಮತ್ತು ಆಪರೇಷನ್ ಕಮಲದ ಅನೈತಿಕತೆಯ ಭ್ರಷ್ಠಾಚಾರದ ಹಾಗೂ ಅಧಿಕಾರದ ಆಮಿಷಗಳ ಮೂಲಕ ಇತರೆ ಪಕ್ಷಗಳ ಶಾಸಕರನ್ನು ಸೆಳೆದುಕೊಂಡು, ರಾಜ್ಯದ ಜನತೆಯ ಮೇಲೆ ಬಲವಂತದ ರಾಜ್ಯ ಸರಕಾರವನ್ನು ಹೇರಿ ಮುನ್ನಡೆಸಿದೆ. ಗುತ್ತಿಗೆಗಳಲ್ಲಿ ಶೇ ೪೦ ಕಮಿಷನ್ ಮುಂತಾದ ಬೃಹತ್ ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ದೇಶದ ನಂಬರ್ ೧ ಸ್ಥಾನಕ್ಕೆ ತಂದ ಕುಖ್ಯಾತಿ ಅದಕ್ಕಿದೆ. ರಾಜ್ಯದ ರೈತರ ಉದ್ಯೋಗದ ಭದ್ರತೆಗೆ ಮತ್ತು ಕೃಷಿ ಜಮೀನಿನ ಹಕ್ಕುಗಳಿಗೆ ಧಕ್ಕೆ ತಂದಿದ್ದು ಮಾತ್ರವಲ್ಲದೇ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಕೃಷಿಯನ್ನು ಹೇರಿದೆ. ಕಾರ್ಮಿಕರ ಶ್ರಮ ಶಕ್ತಿಯನ್ನು ಮತ್ತು ಗ್ರಾಹಕರನ್ನು ಬೆಲೆ ಏರಿಕೆಗಳ ಮೂಲಕ ವ್ಯಾಪಕ ಲೂಟಿಗೊಳಪಡಿಸುವ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಸಿಪಿಐಎಂ ಆರೋಪಿಸಿದೆ.
ಸರ್ಕಾರ ರೂಪಿಸುತ್ತಿರುವ ಕಾರ್ಪೊರೇಟ್ ನೀತಿಗಳಿಂದ ಸಂಕಷ್ಟಕ್ಕೀಡಾದ ಜನತೆಯ ಪ್ರತಿರೋಧವನ್ನು ತಡೆಯಲು ಹಾಗೂ ಜನತೆಯನ್ನು ವಿಭಜಿಸಿ ಆಳಲು ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಾ ಮತ್ತು ರಾಜ್ಯ ಸರಕಾರವೇ ಈ ತೆರನಾದ ತಾರತಮ್ಯವನ್ನು ಪ್ರತಿಪಾದಿಸುವ ಕಾಯ್ದೆಗಳನ್ನು ಸಂವಿಧಾನ ವಿರೋಧಿಯಾಗಿ ಕ್ರಮವಹಿಸಿದೆ ಎಂದಿದೆ.
ಸ್ವತಃ ಮುಖ್ಯಮಂತ್ರಿಗಳೇ ಕೋಮುದ್ವೇಷಕ್ಕೆ ಬಲಿಯಾದ ಮುಸ್ಲಿಂ ಯುವಕರ ಕುಟುಂಬಗಳಿಗೆ ಪರಿಹಾರ ನೀಡದೇ ನಿರಾಕರಿಸಿದ್ದಾರೆ. ಶಿಕ್ಷಣದ ಖಾಸಗೀಕರಣ ಮತ್ತು ಕೋಮುವಾದೀಕರಣವು ದಲಿತರು, ಮಹಿಳೆಯರು ಮತ್ತು ಬಡವರಿಗೆ ಶಿಕ್ಷಣ ಹಾಗೂ ಉದ್ಯೋಗ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಮೀಸಲಾತಿಯ ಸೌಲಭ್ಯವನ್ನು ಅನುಪಯುಕ್ತ ಹಾಗೂ ಅಪ್ರಸ್ತುತಗೊಳಿಸುತ್ತಿದೆ. ಪ್ರಗತಿಪರ ಸಾಹಿತಿಗಳು ಮತಾಂಧ ಶಕ್ತಿಗಳಿಂದ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಈ ಎಲ್ಲದರಿಂದ ರಾಜ್ಯದ ಎಲ್ಲ ಜನತೆ ಭಾರೀ ಸಂಕಷ್ಠವನ್ನು ಅನುಭವಿಸುತ್ತಿದೆ ಮತ್ತು ಸೌಹಾರ್ದ ವಾತಾವರಣದ ಭಂಗವನ್ನು ಅನುಭವಿಸುತ್ತಿದೆ. ಆದ್ದರಿಂದ ಸಿಪಿಐಎಂ ರಾಜ್ಯ ಸಮಿತಿಯು ಮುಂಬರುವ ಚುನಾವಣೆಯಲ್ಲಿ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಮತ್ತು ಜಾತಿವಾದಿ, ಕೋಮುವಾದಿಯಾದ ಭ್ರಷ್ಠಾಚಾರಕ್ಕೆ ಕುಮ್ಮಕ್ಕು ನೀಡುವ ಬಿಜೆಪಿಯನ್ನು ನಿರ್ಣಯಕವಾಗಿ ಸೋಲಿಸುವಂತೆ ರಾಜ್ಯದ ಮತದಾರರಿಗೆ ಸಿಪಿಐಎಂ ಕರೆ ನೀಡಿದೆ.
ಅದೇ ರೀತಿ, ರಾಜ್ಯದ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ವಿಧಾನಸಭೆಯಲ್ಲಿ ಎಡ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಪ್ರಾತಿನಿಧ್ಯ ನೀಡಬೇಕೆಂದು ಸಿಪಿಐಎಂ ಮನವಿ ಮಾಡಿದೆ.
ಈ ರಾಜಕೀಯ ಕಾರ್ಯತಂತ್ರದ ಭಾಗವಾಗಿ ಸಿಪಿಐಎಂ ಮುಂದಿನ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿದೆ.
ಸುರತ್ಕಲ್ ಅಕ್ರಮ ಟೋಲ್ ಸಂಗ್ರಹದ ವಿರುದ್ಧದ ಹೋರಾಟ ಯಶಸ್ವಿ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ನಾಗರೀಕರು, ಹೋರಾಟ ಸಮಿತಿಯ ನೇತೃತ್ವದಲ್ಲಿ ಸುರತ್ಕಲ್ ಅಕ್ರಮ ಟೋಲ್ ಸಂಗ್ರಹದ ವಿರುದ್ಧ ಕಳೆದ ಆರು ವರ್ಷಗಳಿಂದ ನಡೆಸುತ್ತಿರುವ ಹೋರಾಟದ ಒತ್ತಡಕ್ಕೆ ಮಣಿದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುರತ್ಕಲ್ ಅಕ್ರಮ ಟೋಲ್ ಸಂಗ್ರಹವನ್ನು ನಿಲ್ಲಿಸಲು ನಿರ್ಧರಿಸಿರುವುದು ಜನತೆಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದಿದೆ.
ಈ ಚಳುವಳಿಯು ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮತ್ತು ಬಿಜೆಪಿ ಶಾಸಕರು ಹಾಗೂ ಸಂಸದರ ಜನ ವಿರೋದಿ ನಿಲುಮೆಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದೆ. ಸಿಪಿಐ(ಎಂ) ಹೋರಾಟ ನಿರತ ನಾಗರೀಕರನ್ನು ಅಭಿನಂದಿಸಿದೆ.
ಆದರೆ, ಸರಕಾರಗಳು ಅಕ್ರಮವೆಂದು ಒಪ್ಪಿಕೊಂಡು ಸಂಗ್ರಹವನ್ನು ನಿಲ್ಲಿಸುವ ಬದಲು ಹೆಜಮಾಡಿ ಟೋಲ್ ಸಂಗ್ರಹದ ಜೊತೆಗೆ ವಿಲೀನ ಮಾಡಿರುವ ದೌರ್ಜನ್ಯವನ್ನು ಸಿಪಿಐ(ಎಂ) ಪಕ್ಷ ಬಲವಾಗಿ ಖಂಡಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಏನಾದರು ನಷ್ಟವಾಗಿದ್ದಲ್ಲಿ ಅದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಭರಿಸಬೇಕೆಂದು ಮತ್ತು ಆ ಮೂಲಕ ನಾಗರೀಕರ ಹೊರೆಯನ್ನು ಕಡಿತಗೊಳಿಸಬೇಕೆಂದು ಸಿಪಿಐಎಂ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆ.
ರಾಜ್ಯದಲ್ಲಿ ಇನ್ನು ೧೫ ಕ್ಕೂ ಹೆಚ್ಚು ಇಂತಹ ಅಕ್ರಮ ಟೋಲ್ ಸಂಗ್ರಹ ಕೇಂದ್ರಗಳಿವೆಯೆಂದು ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಸದರಿ ಎಲ್ಲ ಅಕ್ರಮ ಟೋಲ್ ಸಂಗ್ರಹ ಕೇಂದ್ರಗಳನ್ನು ರದ್ದುಪಡಿಸಬೇಕು. ಇಂತಹ ಅಕ್ರಮ ಟೋಲ್ ಸಂಗ್ರಹದಿಂದಾಗಿ ನಾಗರೀಕರು ಲೂಟಿಗೊಳಗಾಗಿದ್ದು ಸರಕಾರದ ದೌರ್ಜನ್ಯದಿಂದಾಗಿ ಆತಂಕಿತರಾಗಿದ್ದಾರೆ. ಇವರ ಆತಂಕ ನಿವಾರಿಸಲು ಮತ್ತು ಆ ಕುರಿತಂತೆ ಜನತೆ ನಿಜಾಂಶವನ್ನು ತಿಳಿಯಲು ಸಾಧ್ಯವಾಗುವಂತೆ ರಾಜ್ಯದ ಒಟ್ಟು ಟೋಲ್ ಸಂಗ್ರಹದ ಕುರಿತಂತೆ ಸಮಗ್ರ ನ್ಯಾಯಾಂಗ ತನಿಖೆಯನ್ನು ನಡೆಸಬೇಕೆಂದು ಸಿಪಿಐಎಂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಕುಕ್ಕರ್ ಬಾಂಬ್ ಸ್ಫೋಟ – ನಿಷ್ಪಕ್ಷಪಾತ ತನಿಖೆಗೆ ಸಿಪಿಐಎಂ ಒತ್ತಾಯ: ಮಂಗಳೂರಿನ ನಾಗುರಿಯಲ್ಲಿ ಕಳೆದ ೨೧ನೇ ದಿನಾಂಕದಂದು ಆಟೋ ರಿಕ್ಷಾದಲ್ಲಿ ವ್ಯಕ್ತಿಯೋರ್ವ ಕೊಂಡೊಯ್ಯುತ್ತಿದ್ದ ಕುಕ್ಕರ್ ಸ್ಪೋಟಗೊಂಡಿದೆ. ಇದರಲ್ಲಿ ರಿಕ್ಷಾ ಚಾಲಕ ಮತ್ತು ಪ್ರಯಾಣಿಸುತ್ತಿದ್ದ ವ್ಯಕ್ತಿಗಳು ಗಾಯಗೊಂಡಿರುತ್ತಾರೆ. ಮೇಲ್ನೋಟಕ್ಕೆ ಇದೊಂದು ವಿದ್ವಂಸಕ ದುಷ್ಕೃತ್ಯದಂತೆ ಕಂಡು ಬಂದಿದೆ. ಸದರಿ ಸ್ಫೋಟಕ್ಕೆ ಸಂಬಂಧಿಸಿ ಸರಕಾರವು ನಿಷ್ಪಕ್ಷಪಾತದ ತನಿಖೆಗೆ ಕ್ರಮವಹಿಸಿ ಜನತೆಗೆ ಸತ್ಯವೇನೆಂಬುದನ್ನು ಬಹಿರಂಗ ಪಡಿಸುವಂತೆ ಸಿಪಿಐ(ಎಂ) ಒತ್ತಾಯಿಸಿದೆ.




