ನಮ್ಮ ಮೈಸೂರಿನ ಭವ್ಯ ಪರಂಪರೆಯ ಮಹತ್ವವನ್ನು ಅರಿಯದ ಬಿಜೆಪಿಯ ಸಂಸದರು ಮತ್ತು ಶಾಸಕರು, ಬಸ್ ನಿಲ್ದಾಣಗಳ ಮೇಲಿನ ಗುಂಬಜ್ ಅನ್ನು ಒಡೆದು ಹಾಕುವ ಹುಚ್ಚಾಟವನ್ನು ಪ್ರದರ್ಶನ ಮಾಡುತ್ತಿದ್ದು ತೆರಿಗೆದಾರರ ಹಣವನ್ನು ಪೋಲು ಮಾಡುವಂತಹ ಬೇಜವಾಬ್ದಾರಿ ನಡವಳಿಕೆಯನ್ನು ತೋರುತ್ತಿರುವುದು ನಿಜಕ್ಕೂ ಖಂಡನೀಯ ಸಂಗತಿಯಾಗಿದೆ.
ಇಡೀ ಮೈಸೂರಿನ ತುಂಬಾ ಗುಂಬಜ್ ನಂತಹ ವಿನ್ಯಾಸಗಳು ನಗರದ ಅಂದವನ್ನು ಹೆಚ್ಚಿಸಿದ್ದು ಪ್ರವಾಸಿಗರಿಗೆ ಪಾರಂಪರಿಕ ಎನ್ನುವ ಭಾವನೆಯನ್ನು ಹುಟ್ಟು ಹಾಕುತ್ತದೆ. ಆದರೆ ಇಂತಹ ವಿನ್ಯಾಸದ ಮಹತ್ವ ತಿಳಿಯದೇ ಮೈಸೂರಿನಲ್ಲಿ ವಿಕೃತಿ ತೋರುತ್ತಿರುವ ಬಿಜೆಪಿಗರು ನಿಜಕ್ಕೂ ಸಾರ್ವಜನಿಕ ಬದುಕಿನ ಜವಾಬ್ದಾರಿ ಏನು ಎಂಬುದನ್ನು ತಿಳಿಯದೇ ವರ್ತಿಸುತ್ತಿದ್ದಾರೆ.
ಭಾರತವನ್ನು ಮೊಘಲರು, ಬ್ರಿಟಿಷರು ಆಳಿದ್ದಾರೆ, ಮೌರ್ಯರು, ಡಚ್ಚರು, ಫ್ರೆಂಚರು ಮತ್ತು ಪೋರ್ಚುಗೀಸರೂ ಆಳಿದ್ದರೂ ಕೂಡಾ ಭಾರತ ಯಾವುದೋ ಒಂದು ಧರ್ಮದ ದೇಶವಾಗಿ ಪರಿವರ್ತನೆ ಆಗಿಲ್ಲ. ಭಾರತ ತನ್ನ ವೈವಿಧ್ಯತೆಗಳಿಂದ ಭಾರತವಾಗಿಯೇ ಉಳಿದಿದೆ.
ಹೀಗಿದ್ದರೂ ಕೂಡಾ ಅಭಿವೃದ್ಧಿಯ ವಿಷಯಗಳನ್ನು ಮರೆ ಮಾಚಲು ಮತ್ತು ಚುನಾವಣಾ ಕಾಲದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಸಲುವಾಗಿ ಕೋಮು ರಾಜಕೀಯ ಮಾಡುತ್ತಿರುವ ಮೈಸೂರಿನ ಸಂಸದರು ಮತ್ತು ಶಾಸಕರು ಈ ಕೂಡಲೇ ತಮ್ಮ ಬೇಜವಾಬ್ದಾರಿ ನಡವಳಿಕೆಯನ್ನು ನಿಲ್ಲಿಸಿ, ಜನರ ತೆರಿಗೆ ಹಣವನ್ನು ಪೋಲು ಮಾಡಬಾರದೆಂದು ಈ ಮೂಲಕ ಆಗ್ರಹಿಸುತ್ತೇನೆ
ಕೆಲಸವಿಲ್ಲದ ಬಡಗಿ ಅದೇನೋ ಮಾಡಿದಂತೆ ಆಗುವುದು ಬೇಡ.
– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ




