ರಾಮನಗರ: ರಾಮನಗರ ತಾಲ್ಲೂಕಿನ ಪ್ರಭಾವಿ ರಾಜಕಾರಣಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು, ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಶನಿವಾರ ನಾಪತ್ತೆಯಾಗಿದ್ದಾರೆ.
62 ವರ್ಷದ ಮಹದೇವಯ್ಯ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಪತ್ನಿ ಬೆಂಗಳೂರಿಗೆ ಹೋಗಿದ್ದರಿಂದ, ಮನೆಯಲ್ಲಿ ಒಬ್ಬರೇ ಇದ್ದರು. ಮಧ್ಯಾಹ್ನ ಸ್ಥಳೀಯರು ಮನೆಗೆ ಹೋಗಿದ್ದಾಗ, ಮಹದೇವಯ್ಯ ಇರಲಿಲ್ಲ.
ಬೆಡ್ ರೂಮ್ ನ ಅಲ್ಮೆರಾ ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಾಗಾಗಿ, ಯಾರೋ ಅವರನ್ನು ಅಪಹರಿಸಿ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿರುವ ಅನುಮಾನ ವ್ಯಕ್ತವಾಗಿದೆ. ಕೂಡಲೇ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಟವರ್ ಲೊಕೇಷನ್ ಮಾದೇಶ್ವರ ಬೆಟ್ಟದ ಭಾಗದಲ್ಲಿ ತೋರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.



