ಮಣಿಪುರ ಹೊತ್ತಿ ಉರಿಯುವಾಗ ದೇಶದ ಪ್ರಧಾನಿ ಚುನಾವಣಾ ಪ್ರಚಾರ, ಆನಂತರ ವಿದೇಶಿ ಪ್ರವಾಸ: ನರೇಂದ್ರ ನಾಯಕ್

3 years ago

#Country #pm #election #campaign #Manipur #burning #foreign #tour #NarendraNaik

ಮಂಗಳೂರು: ಕಳೆದ ಮೇ ತಿಂಗಳ ಮೂರರಂದು ಮಣಿಪುರದಲ್ಲಿ ಹಿಂಸೆ ಪ್ರಾರಂಭವಾದಾಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತಲ್ಲಿನರಾಗಿದ್ದರು. ಆನಂತರ ವಿದೇಶ ಪ್ರವಾಸದಲ್ಲಿಯೇ ಖುಷಿ ಪಡೆಯುತ್ತಿದ್ದಾರೆ ಎಂದು ಅಖಿಲ ಭಾರತ ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಆದಿವಾಸಿ ಹಕ್ಕುಗಳ ಸಮಿತಿ ಮತ್ತು ದಲಿತ ಹಕ್ಕುಗಳ ಸಮಿತಿಯು ಹಮ್ಮಿಕೊಂಡಿದ್ದ, ಮಣಿಪುರದಲ್ಲಿ ನಡೆಯುತ್ತಿರುವ ಆದಿವಾಸಿಗಳ ಮೇಲಿನ ಹಿಂಸಾಚಾರದ ಘಟನೆಗಳನ್ನು ಖಂಡಿಸಿ ನಡೆಸಿದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತಿಹಾಸ ಕ್ಷಮಿಸದು ಎಂದು ಹೇಳಿದರು.

ಮಣಿಪುರದಲ್ಲಿ ಆದಿವಾಸಿ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿ ಪ್ಯಾಸಿಸಂನ ಜನಾಂಗೀಯ ಶುದ್ಧೀಕರಣ ಸಿದ್ಧಾಂತದ ಭಾಗ.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ, ಭಾರತದ ಈಶಾನ್ಯ ಭಾರತದಲ್ಲಿ ಸಂಘ ಪರಿವಾರವು ನಿರಂತರವಾಗಿ ಹರಿಯಬಿಟ್ಟಿರುವ ಫ್ಯಾಸಿಸಂನ ಸಿದ್ಧಾಂತದ ಪ್ರಚಾರದ ಭಾಗವಾಗಿದೆ. ಜನಾಂಗೀಯ ಶುದ್ಧೀಕರಣ ಸಿದ್ಧಾಂತದ ಅಪಾಯಕಾರಿ ಬೆಳವಣಿಗೆಗಳು ಮಣಿಪುರದಲ್ಲಿ ಎಗ್ಗಿಲ್ಲದೇ  ನಡೆಯುತ್ತಿದ್ದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ನಿಷ್ಕ್ರಿಯವಾಗಿದೆ. ಕಳೆದ ಮೇ 3ರ ನಂತರ ಪ್ರಾರಂಭವಾಗಿ ಈ ದಾಳಿ ಪೂರ್ವಯೋಜಿತ ಮತ್ತು ವ್ಯವಸ್ಥಿತವಾದ ಕಾರ್ಯಯೋಜನೆಯ ಫಲವಾಗಿದೆ ಎಂದು ಹೇಳಿದರು.

ಸುಮಾರು ನಾಲ್ಕು ಸಾವಿರಕ್ಕೂ ಮಿಕ್ಕಿ ಮಹಿಳೆಯ ಅತ್ಯಾಚಾರ ಬಹಿರಂಗ ಮೆರವಣಿಗೆ ಮತ್ತು ಬೆತ್ತಲೆಗೊಳಿಸುವ ಅಮಾನವೀಯ ಕೃತ್ಯ ನಡೆದಿದೆ. ನೂರಾರು ಶಾಲಾ ಕಾಲೇಜುಗಳಿಗೆ ಬೆಂಕಿ ಹಚ್ಚಲಾಗಿದೆ. ಆದಿವಾಸಿ ಕುಕ್ಕಿ ಸಮುದಾಯದ ಲಕ್ಷಾಂತರ ಜನತೆ ನಿರ್ವಸತಿಗರಾಗಿ ಗುಡ್ಡ ಕಾಡುಗಳಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಸಿಐಟಿಯುವಿನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸುನಿಲ್ ಕುಮಾರ್ ಬಜಾಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಮಾಂಜಲಿ ಘಟಕದ ಅಧ್ಯಕ್ಷ ಕರಿಯ ಕೆ, ಸಮುದಾಯ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ಮಾತನಾಡಿದರು. ಆದಿವಾಸಿ ಹಕ್ಕುಗಳ ಸಮಿತಿಯ ಮಾರ್ಗದರ್ಶಕರಾದ ಯೋಗೀಶ್ ಜೆಪ್ಪಿನಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಟನಾ ಸಭೆಯ ನಾಯಕತ್ವವನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರುಗಳಾದ ಶೇಖರ್ ಕೆ  ಮಂಗಳ ಜ್ಯೋತಿ ರವೀಂದ್ರ ವಿನೋದ್, ಸೀನಾ ಕೋಡಿಕಲ್, ಪ್ರಶಾಂತ್ ಕಂಕನಾಡಿ, ವಿಜ್ಞೇಶ್ ಮಂಗಳ ಜ್ಯೋತಿ ಮಹಿಳಾ ನಾಯಕರಾದ ರಶ್ಮಿ ಮಂಗಳ ಜ್ಯೋತಿ ಮಂಜುಳಾ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಖಜಾಂಚಿ ರಘುವೀರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬೌದ್ಧ ಮಹಾಸಭಾ ಜಿಲ್ಲೆಯ ಮುಖಂಡ ಪದ್ಮನಾಭ ಕೋಡಿಕಲ್ ಸುಂದರಲಾಲ್ ಮತ್ತು ಶಶಿಕಲ,  DYFI ನ ಜಿಲ್ಲೆಯ ಅಧ್ಯಕ್ಷ ಬಿಕೆ ಇಂತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಜಗದೀಶ್ ಬಜಾಲ್, ಆದಿವಾಸಿ ಹಕ್ಕುಗಳ ಸಮಿತಿಯ ಕಾನೂನು ಸಲಹೆಗಾರರಾದ ಮನೋಜ್ ವಾಮಾಂಜೂರು  ಉಪಸ್ಥಿತರಿದ್ದರು.

Leave a Reply