ಸಿದ್ದರಾಮಯ್ಯ ಹೇಳಿಕೆಗೆ ಮುಸ್ಲಿಮರ ಓಲೈಕೆ ವಿವಾದದ ಲೇಪ

2 years ago

#Siddaramaiah #statement #smeared #Muslim #appeasement #controversy

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ಸಂಪತ್ತಿನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷ ಹಕ್ಕು ಕೊಡುವ ಕುರಿತು ಆಡಿರುವ ಮಾತುಗಳಿಗೆ ಬಿಜೆಪಿ ವಿವಾದದ ಸ್ವರೂಪ ನೀಡಿದೆ. 

ಸಿದ್ದರಾಮಯ್ಯ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಅವರ ಹೇಳಿಕೆಯನ್ನು ತುಷ್ಟೀಕರಣ ಎಂದು ಟೀಕಿಸಿದರೆ, ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸಂಪತ್ತು ಇದ್ದರೆ ಅದನ್ನು ಮುಸ್ಲಿಂರಿಗೆ ಹಂಚಿಕೊಳ್ಳಲಿ ಎಂದು ಹೇಳಿದ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪು ಅಂದರೆ  ಬಹಳ ಪ್ರೀತಿ. ಅವರ ಹೇಳಿಕೆ ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಹಿಂದೆ ಏನಾಯ್ತು? ಎಂಬುದನ್ನು ಅವರು ಮನಗಾಣಬೇಕು ಎಂದರು.

ಮುಖ್ಯಮಂತ್ರಿಗಳು, ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳ ರೀತಿ ನೋಡುತ್ತಿದ್ದಾರೆ. ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾದಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ಮುಸ್ಲಿಂಮರನ್ನ ವೋಟಿನ ಗಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರತಿಕ್ರಿಯಿಸಿ, ಅಲ್ಪಸಂಖ್ಯಾತರ ತುಷ್ಟೀಕರಣದ ಮೂಲಕ ಇತರ ಎಲ್ಲ ಸಮುದಾಯಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾರಿ ಮಾಡಲು ಹೊರಟಿದ್ದಾರೆ ಎಂದರು.

ಸಿಎಂ ಎಲ್ಲರಿಗೂ ನ್ಯಾಯ ಕೊಡುವ ಕರ್ತವ್ಯ ಮರೆತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರಿಗೆ ವಕ್ಫ್ ಮಂಡಳಿ, ಅಲ್ಪಸಂಖ್ಯಾತರ ನಿಗಮ, ಅಲ್ಪಸಂಖ್ಯಾತರ ಆಯೋಗದ ಮೂಲಕ ಹಲವು ಕಾರ್ಯಕ್ರಮಗಳ ಮೂಲಕ ಅನುದಾನ ಬರುತ್ತಿದೆ. ಅವರೂ ಇತರ ಎಲ್ಲರಂತೆ ಶಿಕ್ಷಣ ಪಡೆದು ಸ್ವಾವಲಂಬಿ ಆಗಬೇಕು ಎಂಬ ಆಸೆ ಎಲ್ಲ ಸರ್ಕಾರಗಳಿಗೂ ಇದೆ. ಆದರೆ ಸಿದ್ದರಾಮಯ್ಯ ಸರ್ಕಾರ ಇತರ ಎಲ್ಲ ಸಮುದಾಯಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಈ ಆರೋಪಗಳಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ ಎಂದರು.

Leave a Reply