ಭಾರತದ ಸಂವಿಧಾನ: ಸರ್ಕಾರಿ ವ್ಯವಹಾರ ನಿರ್ವಹಣೆ

2 years ago

77. ಭಾರತ ಸರ್ಕಾರದ ವ್ಯವಹಾರ ನಿರ್ವಹಣೆ: – (1) ಭಾರತ ಸರ್ಕಾರದ ಎಲ್ಲ ಕಾರ್ಯಾಂಗದ ಸಮಸ್ತ ಕಾರ್ಯವು ರಾಷ್ಟ್ರಪತಿಯ ಹೆಸರಿನಲ್ಲಿ ನಡೆಯುತ್ತದೆಂದು ವ್ಯಕ್ತವಾಗತಕ್ಕದ್ದು. (2) ರಾಷ್ಟ್ರಪತಿಯ ಹೆಸರಿನಲ್ಲಿ ಮಾಡಿದ ಆದೇಶಗಳನ್ನು ಮತ್ತು ಬರೆದುಕೊಟ್ಟ ಇತರ ಲಿಖಿತಗಳನ್ನು, ರಾಷ್ಟ್ರಪತಿಯು ರಚಿಸುವ (ಕಾಲಕಾಲಕ್ಕೆ ತಿದ್ದುಪಡಿಯಾಗಿರುವ ಅಧಿಸೂಚನೆ ಸಂಖ್ಯೆ ಎಸ್.ಒ. 2297 ದಿನಾಂಕ 3.11.1958ರ ಭಾರತ ವಿಶೇಷ ರಾಜಪತ್ರ ಭಾಗ 2, ವಿಭಾಗ – 3(ii), ಪುಟ 1315 ನೋಡಿ.) ನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಅಧಿಪ್ರಮಾಣನ ಮಾಡತಕ್ಕದ್ದು ಮತ್ತು ಹಾಗೆ ಅಧಿಪ್ರಮಾಣನ ಮಾಡಿದ ಆದೇಶದ ಅಥವಾ ಲಿಖಿತದ ಸಿಂಧುತ್ವವನ್ನು ಅದು ರಾಷ್ಟ್ರಪತಿಯು ಮಾಡಿದ ಆದೇಶವಲ್ಲವೆಂಬ ಅಥವಾ ಬರೆದು ಕೊಟ್ಟ ಲಿಖಿತವಲ್ಲವೆಂಬ ಕಾರಣದ ಮೇಲೆ ಅದನ್ನು ಪ್ರಶ್ನಿಸತಕ್ಕದ್ದಲ್ಲ. (3) ಭಾರತ ಸರ್ಕಾರದ ವ್ಯವಹಾರವು ಹೆಚ್ಚು ಅನುಕೂಲಕರವಾಗಿ ನಡೆಯಲು ಮತ್ತು ಸದರಿ ವ್ಯವಹಾರವನ್ನು ಮಂತ್ರಿಗಳಲ್ಲಿ ಹಂಚುವುದಕ್ಕೆ ರಾಷ್ಟ್ರಪತಿಯು ನಿಯಮಗಳನ್ನು ರಚಿಸತಕ್ಕದ್ದು. [(4) (1976ನೇ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 14ನೇ ಪ್ರಕರಣದ ಮೂಲಕ (4)ನೇ ಖಂಡವನ್ನು (3-1-77ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿತ್ತು ಮತ್ತು ಇದನ್ನು 1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 12ನೇ ಪ್ರಕರಣದ ಮೂಲಕ (20-6-79ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.)]

78. ರಾಷ್ಟ್ರಪತಿಗೆ ಮಾಹಿತಿ, ಇತ್ಯಾದಿಗಳನ್ನು ಒದಗಿಸುವ ವಿಚಾರದಲ್ಲಿ ಪ್ರಧಾನಮಂತ್ರಿಯ ಕರ್ತವ್ಯಗಳು:ಪ್ರಧಾನಮಂತ್ರಿಯು,- (ಎ) ಒಕ್ಕೂಟದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಮಂತ್ರಿಮಂಡಲದ ಎಲ್ಲ ತೀರ್ಮಾನಗಳನ್ನು ರಾಷ್ಟ್ರಪತಿಗೆ ತಿಳಿಸುವುದು; (ಬಿ) ಒಕ್ಕೂಟದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯು ಕೇಳಬಹುದಾದಂಥ ಮಾಹಿತಿಯನ್ನು ಒದಗಿಸುವುದು; ಮತ್ತು (ಸಿ) ಒಬ್ಬ ಮಂತ್ರಿಯು ತೀರ್ಮಾನ ಕೈಕೊಂಡಿರುವ, ಆದರೆ ಮಂತ್ರಿಮಂಡಲವು ಪರ್ಯಾಲೋಚಿಸದಿರುವ ಯಾವುದೇ ವಿಷಯವನ್ನು, ಮಂತ್ರಿಮಂಡಲದ ಪರ್ಯಾಲೋಚನೆಗೆ ಒಪ್ಪಿಸಬೇಕೆಂದು ರಾಷ್ಟ್ರಪತಿಯು ಅಗತ್ಯಪಡಿಸಿದಲ್ಲಿ ಅದನ್ನು ಹಾಗೆ ಒಪ್ಪಿಸುವುದು – ಅವನ ಕರ್ತವ್ಯವಾಗಿರತಕ್ಕದ್ದು.

Leave a Reply