ಮೀಸಲಾತಿ ಎಂಬುದರ ಮೂಲ ಉದ್ದೇಶವನ್ನೇ ಹಂತ ಹಂತವಾಗಿ ಇದೀಗ ಅಪ್ರಸ್ತುತಗೊಳಿಸಲಾಗಿದೆ. ನಮ್ಮ ದೇಶ ಸುವರ್ಣಯುಗವನ್ನು ಕಂಡಾಗ ಮೀಸಲಾತಿ ಇತ್ತಾ? ಎಂಬುದು ಇಂದಿನವರ ವಾದ. ಅವರಿಗೆ ತಲೆ ಮೇಲೆ ಹೇಲು ಹೊತ್ತವರ ಬಗ್ಗೆ ಗೊತ್ತೂ ಇಲ್ಲ, ಅನುಕಂಪೆಯೂ ಇಲ್ಲ.
ಸರಕಾರ ಮತ್ತು ಖಾಸಗೀ ಕಂಪೆನಿಗಳು ತಮ್ಮ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆಗೆ ನೀಡುತ್ತಿವೆ. ಹೊರಗುತ್ತಿಗೆಯಲ್ಲಿ ಮೀಸಲಾತಿಯೂ ಇಲ್ಲ, ಉದ್ಯೋಗ ಭದ್ರತೆಯೂ ಇಲ್ಲ. ವಿಶ್ವ ಪ್ರಸಿದ್ಧ ಅದಾನಿ ಗ್ರೂಪಲ್ಲಿ ಇರುವ ಖಾಯಂ ಉದ್ಯೋಗಿಗಳ ಸಂಖ್ಯೆ ಕೇವಲ ೨೩೦೦೦+ ಎಂದು ಅದರ ವೆಬ್ ಸೈಟ್ ಹೇಳುತ್ತಿದೆ.
ಸರಕಾರವು ಯುಪಿಎಸ್ ಸಿ ಮೂಲಕ ನಾಗರಿಕೆ ಸೇವೆಗಳಿಗೆ ಸೇರುವ ಅಧಿಕಾರಿಗಳ ಸಂಖ್ಯೆಯನ್ನೇ ಕಡಿಮೆ ಮಾಡುತ್ತಾ ಹೋಗಿದೆ. ೨೦೧೪ರಲ್ಲಿ ೧೩೬೪ ಜನ ಭಾರತೀಯ ಆಡಳಿತ ಸೇವೆಗೆ ಸೇರಿದರೆ ೨೦೨೦ಕ್ಕೆ ಆ ಸಂಖ್ಯೆ ೭೯೬ಕ್ಕೆ ಇಳಿದಿದೆ. ನಿವೃತ್ತರನ್ನು ತಾತ್ಕಾಲಿಕ ನೆಲೆಯಲ್ಲಿ ಆಡಳಿತ ಸೇವೆಗೆ ಸೇರಿಸಿಕೊಳ್ಳುವುದು ಮತ್ತು ಹೊರಗುತ್ತಿಗೆ ನೀಡುವುದರ ಮೂಲಕ ಖಾಯಂ ನೇಮಕಾತಿಗಳಿಗೆ ತಡೆ ಒಡ್ಡಲಾಗಿದೆ. ಕೆಲವೇ ಕೆಲವು ಕಡೆಗಳಲ್ಲಿ ನಡೆದ ನೇಮಕಾತಿಗಳನ್ನು ಗಮನಿಸಿದರೆ, ಖಾಲಿ ಉಳಿದಿರುವ ಹುದ್ದೆಗಳೇ ಹೆಚ್ಚು.
ಮೀಸಲಾತಿಯಿಂದ ಲಾಭ ಪಡೆದ ಅನೇಕರು ಇವತ್ತು ಬಿಜೆಪಿಯ ಪರವಾಗಿದ್ದಾರೆ. ಕರ್ನಾಟಕದ ಲೋಕಸಭೆಯ ಏಳು ಮೀಸಲು ಕ್ಷೇತ್ರಗಳೂ ಇವತ್ತು ಬಿಜೆಪಿಯ ವಶದಲ್ಲಿದೆ. ವಿಧಾನ ಸಭೆಯ ಒಟ್ಟು ೩೬ ಮೀಸಲು ಕ್ಷೇತ್ರಗಳಲ್ಲಿ ೨೭ ( ?) ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಈಚಿನ ಸಮೀಕ್ಷೆಯೊಂದರ ಪ್ರಕಾರ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಅದು ೩೬ರಲ್ಲಿ ೩೨ ಸೀಟುಗಳನ್ನು ಗೆಲ್ಲಲಿದೆ.
ʼಎಲ್ಲರೂ ಒಂದೇʼ ಎಂಬ ಭ್ರಾಮಕ ಘೋಷಣೆಗೆ ಬಲಿಬಿದ್ದಾಗ ಮೀಸಲಾತಿಯ ಸಾಮಾಜಿಕ ನ್ಯಾಯ ಕಲ್ಪನೆಗೆ ಯಾವ ಅರ್ಥವೂ ಉಳಿಯುವುದಿಲ್ಲ.
– ಪುರುಷೋತ್ತಮ ಬಿಳಿಮಲೆ ಹಿರಿಯ ಸಂಶೋಧಕರು




