ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವಿಫಲಗೊಳಿಸುವ ಪಿತೂರಿಗಳು ನಡೆಯುತ್ತಿವೆ

6 months ago

ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಹಲವಾರು ರೀತಿಯ ತಂತ್ರಗಳನ್ನು ಕೆಲವರು ಛರೂಪಿಸುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ನಾಯಕರು ನೇರವಾಗಿ ಭಾಗಿಯಾಗಿದ್ದಾರೆ. ಮತ್ತೆ ಕೆಲವು ಅವರ ಬೆಂಬಲಿತ ಅಭಿಮಾನಿಗಳು ಸಹ ಪರೋಕ್ಷವಾಗಿ ಅಸಹಕಾರವನ್ನು ನೀಡುವುದರ ಮೂಲಕ ಬಿಜೆಪಿ ನಾಯಕರ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ.

ಮುಂದಿನ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಸರ್ಕಾರ ನಡೆಸುವಂತಹ ಜಾತಿ ಜನಗಣತಿ ಸಂದರ್ಭದಲ್ಲಿ ಆನಂದದಿಂದ ಮಾಹಿತಿಯನ್ನು ನೀಡಲು ಉತ್ಸಾಹದಿಂದಿರುವ ವ್ಯಕ್ತಿಗಳು ರಾಜ್ಯ ಸರ್ಕಾರದ ಸಮೀಕ್ಷೆಗೆ ಮಾಹಿತಿಯನ್ನು ನೀಡಲು ನಿರಾಕರಿಸುತ್ತಿದ್ದಾರೆ. ಇವುಗಳು ಅವರ ಮನಸ್ಸಿನ ಭಾವನೆಗಳನ್ನು ತೋರಿಸುತ್ತದೆ.

ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕಾದರೆ ಬೇಕಾಗಿರುವುದು ಬಡವರು, ಶೋಷಿತರು, ಅಸಮಾನತೆಗೆ ಒಳಗಾದವರು ಇವರ ಮಾಹಿತಿಗಳಷ್ಟೇ ಹೊರತು ಹೊಟ್ಟೆ ತುಂಬಿದವರ ಮಾಹಿತಿಗಳ ಅವಶ್ಯಕತೆ ಏನಿಲ್ಲ. ನಮ್ಮ ಊರಿನ ನಾರಾಯಣಪ್ಪ, ಸಾಕಮ್ಮ, ಮುಂತಾದವರು ನೀಡುವ ಮಾಹಿತಿಯೇ ಸರ್ಕಾರದ ಯೋಜನೆಗಳಿಗೆ ಮಾನದಂಡವಾಗಿರುತ್ತದೆ. ಯಾರು ಸಂಕಷ್ಟದಿಂದ ಬದುಕುತ್ತಿದ್ದಾರೆ, ಅಂತವರು ಪ್ರೀತಿಯಿಂದಲೇ ಮಾಹಿತಿಯನ್ನ ನೀಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಸಮೀಕ್ಷೆಯನ್ನು ಸಂಪೂರ್ಣವಾಗಿ ಮಾಡಲು ಬಿಡದೆ, ಮುಂದೆ ಸಮೀಕ್ಷೆಯ ವರದಿ ಬಹಿರಂಗವಾದಾಗ ಇಷ್ಟೊಂದು ಜನ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ, ಇದು ಅಪೂರ್ಣ, ಇದನ್ನು ಮಾನ್ಯತೆ ಮಾಡಬಾರದು ಎಂದು ರಾಜಕಾರಣದ ಮಾತುಗಳನ್ನಾಡುತ್ತಾ ಮತ್ತೆ ಸಮೀಕ್ಷೆಯ ವರದಿಯನ್ನ ತಿಪ್ಪೆಗೆ ಹಾಕಿಸುವಂತಹ ಕೆಲಸವನ್ನು ಮಾಡಲು ಕಾತುರದಿಂದಿದ್ದಾರೆ.

ಪ್ರಪಂಚ ಮತ್ತು ಭಾರತ ದೇಶದಲ್ಲೂ ಸಹ ಹಾಗೂ ಯಾವುದೇ ರಾಜ್ಯದಲ್ಲೂ ಸಹ ಯಾವ ಸಮೀಕ್ಷೆಗಳು ನೂರಕ್ಕೆ ನೂರರಷ್ಟು ಸಂಪೂರ್ಣವಾಗಿ ನಡೆಯಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಮೀಕ್ಷೆಯ ವಿಚಾರದಲ್ಲಿ  ಶೇಕಡ 90ರಷ್ಟು ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಮಾಹಿತಿಗಳನ್ನ ನೀಡಿರುವುದರಿಂದ ಇದು ಯಶಸ್ವಿಯಾದ ದಾರಿಯಲ್ಲಿ ಸಾಗಿದೆ ಎನ್ನುವುದರಲ್ಲಿ ಅನುಮಾನವೇ ಬೇಡ.

ಕೆಲವು ಬಿಜೆಪಿ ಕೃಪಾಪೋಷಿತ ಸಿಬ್ಬಂದಿಯೂ ಸಹ ನೆಪಗಳನ್ನ ಹೇಳಿ ಸಮೀಕ್ಷೆಯ ಕಾರ್ಯದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಮುಂದೆ ನಡೆಯುವಂತಹ ಕೇಂದ್ರ ಸರಕಾರದ ಸಮೀಕ್ಷೆಯಲ್ಲಿ ಇವರುಗಳ ರೀತಿಯಲ್ಲಿ ಸಣ್ಣತನವನ್ನ ತೋರದೆ ದೇಶದ ಹಿತದೃಷ್ಟಿಯಿಂದ ಮತ್ತು ಯೋಜನೆಗಳನ್ನು ರೂಪಿಸುವ ಮಾಹಿತಿಯ ಸಂಗ್ರಹಿಸುವ ಕಾರ್ಯಕ್ರಮ ವಾಗಿರುವ ಕಾರಣದಿಂದಲೂ ಎಲ್ಲರೂ ಅದರಲ್ಲಿ ಭಾಗವಹಿಸಿ ನಮ್ಮ ವಿಶಾಲತೆಯನ್ನ ತೋರಿಸೋಣ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply