ಜಯದಿಂದ ಉಬ್ಬಿ ಹೋಗಿರುವ ಕಾಂಗ್ರೆಸ್ ನ ಯಾವ ನಾಯಕರೂ ಮರೆಯಬಾರದ ಸಂಗತಿ

3 years ago

ಕಾಂಗ್ರೆಸ್ ಪಕ್ಷದ ಈ ಅಭೂತಪೂರ್ವ ಗೆಲುವಿಗೆ ಬರಿಯ ಕಾಂಗ್ರೆಸ್ ಕಾರ್ಯಕರ್ತರಷ್ಟೆ ಕಾರಣವಲ್ಲ. ಕಾಂಗ್ರೆಸ್ ನಾಯಕರು ತಮ್ಮ‌ ಪಕ್ಷದ ಕಾರ್ಯಕರ್ತರನ್ನು ಕೊಂಡಾಡುತ್ತಿದ್ದಾರೆ ಅಭಿನಂದಿಸುತ್ತಿದ್ದಾರೆ‌ ಸಂತೋಷ. ಆದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈ ಪರಿಯ ಹೋರಾಟದ ಕೆಚ್ಚು ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಮಣಿಸಲು ಬೇಕಾದ ವಿಷಯ ವಿಚಾರ ರೀತಿ ನೀತಿ ಮತ್ತು ಪ್ರೇರಣೆ ಪ್ರಭಾವಗಳನ್ನು ರಾಜ್ಯದ ವೈಚಾರಿಕ ವಲಯ ದೊಡ್ಡಮಟ್ಟದಲ್ಲಿ ಮಾಡಿದೆ. ಸ್ವತಃ ತಾನೇ ಬೀತಿಯ ನಡುವೆಯೂ ಬೀದಿಯಲ್ಲಿ ನಿಂತು ನಾನಾ ಸ್ವರೂಪದಲ್ಲಿ ಹೋರಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧೈರ್ಯವಾಗಿ ವೀರ್ಯವಾಗಿ ಹತ್ತು ಹಲವು ಆತಂಕಗಳ ನಡುವೆಯೂ ಎದೆಗಾರಿಕೆಯಿಂದ ಬರೆದು ಹೋರಾಡಿ ವರದಿ ಮಾಡಿ ನಾಡಿನ ದೊಡ್ಡ ಸಂಖ್ಯೆಯ ಯುವಕರಿಗೆ ಮಹಿಳೆಯರಿಗೆ ಕೃಷಿಕರಿಗೆ ಕಾರ್ಮಿಕರಿಗೆ ದಲಿತರಿಗೆ ಅಲ್ಪಸಂಖ್ಯಾತರಿಗೆ ಅಸ್ಟೇ ಏಕೆ ಎಸ್ಟೋ ಮಬ್ಬಕ್ತರಿಗೆ ತಲುಪಿಸಿ ಅವರಲ್ಲಿ ಜಾಗೃತಿ ಮೂಡಿಸುವಲ್ಲಿ ಅರಿವು ಮೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇದನ್ನು ಕಾಂಗ್ರೆಸ್ ಒಂದೇ ಮಾಡಲು ಸಾಧ್ಯವಿರಲಿಲ್ಲ. ಎಸ್ಟೋ ಯಡಪಂಥೀಯರಿಗೆ ಜಾತ್ಯತೀತ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇರುವವರಿಗೆ, ಸಂವಿಧಾನ ರಕ್ಷಣೆಗೆಂದು ಟೊಂಕ ಕಟ್ಟಿ ನಿಂತವರಿಗೆ ಕಾಂಗ್ರೆಸ್ ನ ಕೆಲವೇ ಕೆಲವು ಮೇನ್ ಸ್ಟ್ರೀಮ್ ನಾಯಕರು ಬಿಟ್ಟರೆ ಉಳಿದವರು ನಿರ್ಲಕ್ಷಿಸಿರುವುದೇ ಹೆಚ್ಚು.

ಹೋರಾಟಗಾರರನ್ನು ವಿಚಾರವಾದಿಗಳನ್ನು ಚಿಂತಕರನ್ನು ಥಿಂಕ್ ಟ್ಯಾಂಕ್ ಗಳನ್ನು ದಿವ್ಯ ಉದಾಸೀನದಿಂದ ನೋಡುವ ಅಲಕ್ಷಿಸುವ ಹತ್ತಿರ ಬಿಟ್ಟುಕೊಳ್ಳದ ಗೌರವಿಸದ ರಕ್ಷಣೆಗೆ ನಿಲ್ಲದ ದೊಡ್ಡ ಸಂಖ್ಯೆಯ ನಾಯಕರು ಅಲ್ಲಿ ಈಗಲೂ ಇದ್ದಾರೆ. ಅವರ ಬುದ್ದಿ ಭಾವ ವಿಶಾಲವಾಗಬೇಕು. ಅವರ ಕಣ್ಣಿನ ಮಂಪರು ಮೆದುಳಿನ ಮಂಪರು ತೆರೆಯಬೇಕು. ಒಂದು ರಾಷ್ಟ್ರೀಯ ಪಕ್ಷದ ಶಕ್ತಿಯನ್ನೂ ಮೀರಿಸಿ ಜನಾಭಿಪ್ರಾಯ ಮೂಡಿಸುವಲ್ಲಿ ಕಾಂಗ್ರೆಸಿಗರಲ್ಲದ ಸಾವಿರಾರು ಜನ ಹಿರಿಯ ಕಿರಿಯ ವಿಚಾರವಾದಿಗಳು ಬರೆಹಗಾರರು ಪತ್ರಿಕೆಗಳು ಯ್ಯೂಟ್ಯೂಬ್ ಮೊದಲಾದಲ್ಲಿ ಕ್ರಿಯಾಶೀಲವಾಗಿರುವ ಟಿವಿ ಚಾನಲ್ ಇತ್ಯಾದಿ ಮಾದ್ಯಮಗಳು ಹಾಕಿರುವ ಶ್ರಮ ಅಷ್ಟಿಷ್ಟಲ್ಲ. ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಪ್ರಿಯಾಂಕ ಖರ್ಗೆ, ಕೃಷ್ಣ ಭೈರೇಗೌಡ, ಮಹದೇವಪ್ಪ, ಯು.ಟಿ. ಖಾದರ್, ಮೊದಲಾದವರಿಗೆ ಇದು ಚನ್ನಾಗಿ ಗೊತ್ತಿದೆ.

ಇಷ್ಟನ್ನೆಲ್ಲಾ ನನ್ನಂತಹ ಚಿಕ್ಕ ವಯಸಿನ ಯುವಕರೂ ಸೇರಿದಂತೆ ಸಾವಿರ ಸಾವಿರ ಸಂಖ್ಯೆ ಸಂವಿಧಾನ ಪ್ರೇಮಿಗಳು ಪ್ರಜಾಪ್ರಭುತ್ವವಾದಿಗಳು ಯಾವುದೇ ಅಧಿಕಾರ, ಹಣ, ಸವಲತ್ತುಗಳ ಆಸೆ ಆಕಾಂಕ್ಷೆ ಇಲ್ಲದೆ, ಕೋಮುವಾದಿಗಳು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಶತ್ರುಗಳು, ಜಾತಿವಾದಿ ಜನಾಂಗವಾದಿ ಫ್ಯಾಸಿಸ್ಟರು ಸೋಲಲೇಬೇಕು. ಸಂವಿಧಾನ ನಮಗಾಗಿ ನಮ್ಮ ದೇಶಕ್ಕಾಗಿ ಉಳಿಯಲೇ ಬೇಕು ಎಂಬ ಬಲವಾದ ಕಾರಣಗಳಿಂದ ಹೋರಾಡಿದ್ದಾರೆ. ಕೇಸರಿಗಳ ಹಿಟ್ ಲಿಸ್ಟಿನಲ್ಲಿ ಸೇರಿದ್ದಾರೆ. ನಮ್ಮಲ್ಲೆರನ್ನು ಮತ್ತು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೊಣೆಯನ್ನು ಕಾಂಗ್ರೆಸ್ ಹೆಗಲಿಗೆ ಹಾಕಿ ತಾವೂ ಹೆಗಲಿಗೆ ಹೆಗಲು ನೀಡಿದ್ದಾರೆ‌. ತಮ್ಮ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕಳೆದ ನಾಲಕೈದು ವರ್ಷದಿಂದ ಹಗಲು ರಾತ್ರೆ ಸಂಘಿಗಳ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ‌. ಇಲ್ಲಿ ಕರ್ನಾಟಕದ ಅಸ್ಮಿತೆಯ ಪ್ರಶ್ನೆಯೂ ದೊಡ್ಡದಿತ್ತು. ಕನ್ನಡ ನಾಡಿಗೆ ಕನ್ನಡ ಭಾಷೆ ಕನ್ನಡಿಗರ ಬದುಕಿಗೆ ಎದುರಾಗಿರುವ ಆತಂಕಗಳನ್ನು ಹೋಗಲಾಡಿಸಿ ಕನ್ನಡ ಕನ್ನಡಿಗ ಕನ್ನಡತನವನ್ನು ಉಳಿಸಿಕೊಳ್ಳುವ ವಿಷಯದಲ್ಲಿ ರಾಜಿ ಇಲ್ಲದ ಹೋರಾಟ ನಡೆಸಿದ್ದಾರೆ. ಇದೆಲ್ಲವನ್ನೂ ಕಾಂಗ್ರೆಸ್ ಕಾರ್ಯತರು ಮಾಡಿಲ್ಲ. ಆದರೆ ಅವರೆಲ್ಲರಲ್ಲೂ ಈ ವಿಚಾರಗಳ ಕಿಚ್ಚು ಹಚ್ಚಿದವರು, ಅವರ ಮೆದುಳಿನ ಕವಾಟಗಳನ್ನು ತೆರೆದು ಅಲ್ಲಿ ಈ ವೈಚಾರಿಕ ಗಟ್ಟಿತನವನ್ನು ತುಂಬಿ ಹುರಿದುಂಬಿಸಿ ಇಡೀ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಹೊಸ ಧಿಕ್ಕು ದೆಸೆಗಳನ್ನು ಕೊಟ್ಟಿದ್ದಾರೆ‌.

ವಿಜಯದ ಸಂಭ್ರಮದಲ್ಲಿರುವ, ಜಯದಿಂದ ಉಬ್ಬಿ ಹೋಗಿರುವ ಕಾಂಗ್ರೆಸ್ ನ ಯಾವ ನಾಯಕರೂ ಇದನ್ನು ಮರೆಯಬಾರದು. ನಿನ್ನೆಯಿಂದಲೂ ಗಮನಿಸುತ್ತಿದ್ದೇನೆ, ಸಿದ್ದರಾಮಯ್ಯ ತಮ್ಮ ಟ್ವೀಟ್ ಒಂದರಲ್ಲಿ ನಾಡಿನ ಯುವಕರ ಬುದ್ಧಿಜೀವಿಗಳ ವಿಚಾರವಂತರ ಈ ಹೋರಾಟವನ್ನು ಶ್ಲಾಘಿಸಿದ್ದರು ಬಿಟ್ಟರೆ ಮತ್ತೆ ಯಾರೂ ಇದನ್ನು ಶ್ಲಾಘಿಸಿಲ್ಲ. ಮರೆತು ಬಿಟ್ಟರು ಎಂದು ಹೇಳಲಾರೆ. ಆದರೆ ಇವರು ಮರೆಯಬಾರದು. ಏಕೆಂದರೆ ಕಾಂಗ್ರೆಸ್ ಮೇಲೆ ಅಸಮಧಾನಗಳಿದ್ದರೂ ಬದಿಗಿಟ್ಟು ಕಾಂಗ್ರೆಸ್ ನಲ್ಲಿ ಭರವಸೆ ಇಟ್ಟು ಆ ಪಕ್ಷದ ಬೆನ್ನಿಗೆ ನಿಂತು ಹೋರಾಡಿರುವವರ ಸಂಖ್ಯೆ ದೊಡ್ಡದಿದೆ. ಕಾಂಗ್ರೆಸ್ ಗೆಲುವಿನ ಹಿಂದೆ ಇರುವ ದೊಡ್ಡ ಶಕ್ತಿ ಇವರೇ.

  • ಸುರೇಶ ಎನ್ ಶಿಕಾರಿಪುರ ಶಿಕಾರಿಪುರ

Leave a Reply