ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ನರೇಂದ್ರ ಮೋದಿಗೆ ಬರೆದ ಬಹಿರಂಗ ಪತ್ರ.
ಮುಂಬೈ ನಗರದ ಪೊಲೀಸ್ ಕಮೀಷನರ್ ಹಾಗೂ ಮಹಾರಾಷ್ಟ್ರದ ಪೊಲೀಸ್ ಮಹಾ ನಿದರ್ಶಕರಾಗಿ ಸೇವೆ ಸಲ್ಲಿಸಿದ ಹಾಗೂ ದೇಶದ ಹೆಸರಾಂತ ನಿಷ್ಟಾವಂತ ಅಧಿಕಾರಿಯಾಗಿದ್ದ ಜುಲಿಯೊ ರಿಬೈರೋ ಅವರು ಪ್ರಧಾನ ಮಂತ್ರಿ ಮೋದಿಗೆ ಬರೆದ ಇಂಗ್ಲೀಷ್ ಪತ್ರವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಇಂಗ್ಲೀಷ್ ಪತ್ರದ ಕನ್ನಡ ಅನುವಾದ ಹೀಗಿದೆ.
ಭಾರತ ದೇಶದ ಓರ್ವ ಹಿರಿಯ ನಾಗರಿಕನಾಗಿ ಇದನ್ನು ಪ್ರಧಾನಿ ಅವರಿಗೆ ತಿಳಿಸಬೇಕು ಎಂದು ನಾನು ಭಾವಿಸಿದೆ. ಆ ಕಾರಣದಿಂದ ಈ ಪತ್ರವನ್ನು ಬರೆದೆ.
ಶ್ರೀ ಮೋದಿಯವರೇ, ಕಳೆದ 60 ವರ್ಷಗಳಲ್ಲಿ ಭಾರತ ಏನು ಸಾಧಿಸಿದೆ ಎಂದು ವೇದಿಕೆ ಮೇಲೆ ನಿಂತು ನೀವು ಪದೇ ಪದೆ ಪ್ರಶ್ನೆ ಕೇಳುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶದ ಪ್ರಜೆಗಳು ಮೂರ್ಖರು ಎಂದು ನೀವು ಖಂಡಿತಾ ಭಾವಿಸಬೇಡಿ. ನೀವು 300 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತ ದೇಶದ ಪ್ರಧಾನಿಯಾಗಿದ್ದೀರಿ. ನಮ್ಮ ಜನ ಬ್ರಿಟೀಷರ ಆಳ್ವಿಕೆಯಲ್ಲಿ ಗುಲಾಮರಂತೆ ಬದುಕುತ್ತಿದ್ದರು. ಸ್ವಾತಂತ್ರ್ಯದ ನಂತರ ಭಾರತದಲ್ಲಿ 1947 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು ಮತ್ತು ಎಲ್ಲವೂ ಶೂನ್ಯದಿಂದ ಪ್ರಾರಂಭವಾಯಿತು. ಈ ದೇಶದಲ್ಲಿ ಬ್ರಿಟಿಷರು ಬಿಟ್ಟು ಹೋಗಿದ್ದ ಕಸವನ್ನು ಹೊರತು ಪಡಿಸಿದರೆ ಬೇರೇನೂ ಇರಲಿಲ್ಲ. ಬ್ರಿಟಿಷರು ಭಾರತವನ್ನು ತೊರೆದ ನಂತರ ಭಾರತವು ಒಂದು ಸೂಜಿಯನ್ನು ಉತ್ಪಾದಿಸುವ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ದೇಶದ .ಇಪ್ಪತ್ತು ಹಳ್ಳಿಗಳಿಗೆ ಮಾತ್ರ ವಿದ್ಯುತ್ ಲಭ್ಯವಿತ್ತು. ಈ ದೇಶದಲ್ಲಿದ್ದ ಒಂದಿಷ್ಟು ದೊರೆಗಳಿಗೆ (ರಾಜರಿಗೆ) ಮಾತ್ರ ದೂರವಾಣಿ ಸೌಲಭ್ಯವಿತ್ತು. ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಕೇವಲ ಹತ್ತು ಸಣ್ಣ ಪ್ರಮಾಣದ ಅಣೆಕಟ್ಟುಗಳಿದ್ದವು. ಆಸ್ಪತ್ರೆಗಳಿರಲಿಲ್ಲ, ಶಿಕ್ಷಣ ಸಂಸ್ಥೆಗಳಿರಲಿಲ್ಲ, ಕೃಷಿ ಉತ್ಪಾದನೆಗೆ ಗೊಬ್ಬರವಿರಲಿಲ್ಲ, ಜನತೆಗೆ ತಿನ್ನುವ ಆಹಾರವಿರಲಿಲ್ಲ, ಕೃಷಿಗೆ ನೀರು ಇಲ್ಲ. ಯಾವುದೇ ಉದ್ಯೋಗಗಳು ಇರಲಿಲ್ಲ . ಅಂದಿನ ಕಾಲಘಟ್ಟದಲ್ಲಿ ಭಾರತ ದೇಶದಾದ್ಯಂತ ಹಸಿವನ್ನು ಮಾತ್ರ ಕಾಣಬಹುದಾಗಿತ್ತು. ಅನೇಕ ಶಿಶು ಮರಣಗಳು ಸಂಭವಿಸಿದವು.
ಗಡಿಯಲ್ಲಿ ಕೆಲವೇ ಕೆಲವು ಸೇನಾ ಸಿಬ್ಬಂದಿ. ಕೇವಲ ನಾಲ್ಕು ವಿಮಾನಗಳು, ಇಪ್ಪತ್ತು ಟ್ಯಾಂಕ್‌ಗಳು ಮತ್ತು ದೇಶದ ಎಲ್ಲಾ ನಾಲ್ಕುಕಡೆಗಳಲ್ಲಿ ಸಂಪೂರ್ಣವಾಗಿ ತೆರೆದ ಗಡಿಗಳು. ಅತ್ಯಂತ ಕನಿಷ್ಠ ರಸ್ತೆಗಳು ಮತ್ತು ಸೇತುವೆಗಳು. ಖಾಲಿ ಖಜಾನೆ. ಈ ಪರಿಸ್ಥಿತಿಯಲ್ಲಿ ನೆಹರೂ ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು.
60 ವರ್ಷಗಳ ನಂತರ ಭಾರತ ಎಂದರೇನು? ನಿಮ್ಮ ಪ್ರಶ್ನೆಗೆ ಇತಿಹಾಸ ನಮ್ಮ ಕಣ್ಣ ಮುಂದಿದೆ.
ಭಾರತದ ಸೇನಾ ಬಲವು ವಿಶ್ವದ ಅತಿದೊಡ್ಡ ಸೈನ್ಯಗಳಲ್ಲಿ ಒಂದಾಗಿದೆ. ಸಾವಿರಾರು ಯುದ್ಧ ವಿಮಾನಗಳು, ಟ್ಯಾಂಕರ್ ಗಳು ನಮ್ಮಲ್ಲಿವೆ. ದೇಶಾದ್ಯಂತ ಲಕ್ಷಾಂತರ ಕೈಗಾರಿಕಾ ಸಂಸ್ಥೆಗಳಿವೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿದೆ. ನೂರಾರು ವಿದ್ಯುತ್ ಶಕ್ತಿ ಕೇಂದ್ರಗಳು. ಲಕ್ಷ ಕಿಲೋಮೀಟರ್‌ಗಳಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇತುವೆಗಳು. ಹೊಸ ರೈಲ್ವೇ ಯೋಜನೆಗಳು, ಕ್ರೀಡಾಂಗಣಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ದೂರದರ್ಶನವನ್ನು ಹೊಂದಿರುವ ಹೆಚ್ಚಿನ ಭಾರತೀಯ ಮನೆಗಳು, ಎಲ್ಲಾ ದೇಶವಾಸಿಗಳಿಗೆ ದೂರವಾಣಿ. ದೇಶದ ಒಳಗೆ ಮತ್ತು ಹೊರಗೆ ಕೆಲಸ ಮಾಡಲು ಎಲ್ಲಾ ಮೂಲಸೌಕರ್ಯಗಳು, ಬ್ಯಾಂಕ್‌ಗಳು, ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ನೀಡುವ ವೈದ್ಯಕೀಯ ಮತ್ತು ತಾಂತ್ರಿಕ ಜ್ಞಾನದ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿವೆ. ಪರಮಾಣು ಶಸ್ತ್ರಾಸ್ತ್ರಗಳು, ಉಪ-ನೌಕೆಗಳು, ಪರಮಾಣು ಕೇಂದ್ರಗಳು, ಇಸ್ರೋ ಸಂಸ್ಥೆಯನ್ನು ಒಳಗೊಂಡಂತೆ ನವರತ್ನ ಗಳು ಹೆಸರಿನಲ್ಲಿ ಸಾರ್ವಜನಿಕ ವಲಯದ ಘಟಕಗಳು ನಮ್ಮಲ್ಲಿವೆ. ಇವುಗಳು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅರವತ್ತು ವರ್ಷಗಳ ಅವಧಿಯಲ್ಲಿ ನೆಹರೂ, ಲಾಲ್ ಬಹುದ್ದೂರ್ ಶಾಸ್ತ್ರಿ, ಇಂದಿರಾ ಮತ್ತು ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಸೃಷ್ಟಿಯಾಗಿವೆ.
ಕೆಲವು ವರ್ಷಗಳ ಹಿಂದೆ ಭಾರತೀಯ ಸೇನೆಯು ಪಾಕಿಸ್ತಾನವನ್ನು ಲಾಹೋರ್‌ನವರೆಗೂ ಅಟ್ಟಿಸಿಕೊಂಡು ಹೋಗಿತ್ತು. ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಮತ್ತು ಕಮಾಂಡರ್‌ಗಳು ಭಾರತೀಯ ಸೇನೆಗೆ ಶರಣಾಗಿದ್ದರು. ಭಾರತವು ಖನಿಜಗಳು ಮತ್ತು ಆಹಾರ ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಿತು. ಶ್ರೀಮತಿ ಇಂದಿರಾ ಗಾಂಧಿ ಅವರ ಆಡಳಿತದ ಅವಧಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮಾಡುವುದರ ಜೊತೆಗೆ ಕಂಪ್ಯೂಟರ್‌ಗಳನ್ನು ಭಾರತಕ್ಕೆ ಪರಿಚಯಿಸಲಾಯಿತು. ಮಾಹಿತಿ ತಂತ್ರ ಜ್ಞಾನದ ಬೆಳವಣಿಯಿಂದ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ನಮ್ಮ ಯುವಕ , ಯುವತಿಯರಿಗೆ ಹೇರಳವಾದ ಉದ್ಯೋಗಾವಕಾಶಗಳು ದೊರೆತವು.
ನೀವು ಭಾರತದಲ್ಲಿ ಬಳಕೆಯಲ್ಲಿದ್ದ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಧಾನಿ ಆಗಿದ್ದೀರಿ.
ನೀವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತವು ವಿಶ್ವದ ಹತ್ತು ಬಲಿಷ್ಟ ಆರ್ಥಿಕತೆಯ ರಾಷ್ಟ್ರಗಳಲ್ಲಿ ಒಂದಾಗಿತ್ತು. ಇಷ್ಟು ಮಾತ್ರವಲ್ಲದೆ ಜಿಎಸ್‌ಎಲ್‌ವಿ, ಮಂಗಳಯಾನ, ಮೆಟ್ರೋ ರೈಲು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು, ಪೃಥ್ವಿ, ಅಗ್ನಿ, ನಾಗ್, ಪರಮಾಣು ಜಲಾಂತರ್ಗಾಮಿ ನೌಕೆಗಳು.. ಇವೆಲ್ಲವನ್ನೂ ನೀವು ಪ್ರಧಾನಿಯಾಗುವ ಮೊದಲೇ ಭಾರತದಲ್ಲಿ ಅಸ್ತಿತ್ವದಲ್ಲಿದ್ದವು. ಇಂತಹ ಭವ್ಯ ಇತಿಹಾಸ ನಮ್ಮ ಮುಂದೆ ಇರುವಾಗ 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಸಾಧಿಸಿದೆ ಎಂದು ಪ್ರಶ್ನೆ ಕೇಳಬೇಡಿ ಹಾಗೂ ಜನರ ಬಳಿಗೆ ಬರಬೇಡಿ.
ಈಗಿನ ಭಾರತದ ಸ್ಥಿತಿಗತಿ ಹೇಗಿದೆ ಎಂದು ಇಡೀ ಜಗತ್ತಿಗೆ ಗೊತ್ತಿದೆ.
ಹೆಸರು ಬದಲಾಯಿಸುವುದು, ಪ್ರತಿಮೆ ಸ್ಥಾಪಿಸುವುದು ಮತ್ತು ನಿರಂತರವಾಗಿ ಗೋವಿನ ರಾಜಕಾರಣ ಮಾಡುವುದನ್ನು ಹೊರತುಪಡಿಸಿ ಹಾಗೂ ಹಿಂದೂಗಳು ಮತ್ತು ಮುಸ್ಲಿಮರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ದಲಿತರು, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ನಡುವೆ ಬಿರುಕು ಮೂಡಿಸುವುದನ್ನು ಕಾಯಕ ಮಾಡಿಕೊಂಡ ನೀವು ಕಳೆದ ಒಂಬತ್ತು ವರ್ಷಗಳಲ್ಲಿ ಏನು ಸಾಧಿಸಿದ್ದೀರಿ ಎಂಬುದನ್ನು ದಯವಿಟ್ಟು ಜನರಿಗೆ ತಿಳಿಸಿ.
ನಿಮ್ಮ ವಿಫಲವಾದ ನೋಟು ಅಮಾನ್ಯೀಕರಣ, ಅತ್ಯಂತ ಕಳಪೆ ಜ್ಞಾನದಿಂದ ಜಾರಿಗೊಂಡ ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ಸಾಮಾನ್ಯರು ನರಳುವಂತೆ ಮಾಡಿದಿರಿ. ಮತ್ತು ಜನರನ್ನು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ, ಅನಗತ್ಯ ಸಾವುಗಳಿಗೆ ಕಾರಣವಾದಿರಿ. ಪ್ರದರ್ಶನವನ್ನೇ ಬಂಡವಾಳ ಮಾಡಿಕೊಂಡ ನಿಮ್ಮ ಬಿಜೆಪಿಗರು ವಿದೇಶಿ ನೇರ ಬಂಡವಾಳವನ್ನು ವಿರೋಧಿಸಿದರು ಮತ್ತು ಈಗ ಯಾವುದೇ ಸಂಕೋಚ ಅಥವಾ ನಾಚಿಕೆಯಿಲ್ಲದೆ ನಿಮ್ಮ ಸರ್ಕಾರ ಬೆಂಬಲ ನೀಡುತ್ತಿದೆ.. ಬಿಜೆಪಿಯು ಭಾರತವನ್ನು ಅಂಬಾನಿಗೆ ಮಾರಾಟ ಮಾಡುತ್ತಿದೆ ಮತ್ತು ಭಾರತ ಸರ್ಕಾರದ ಒಡೆತನದ ಹಿಂದೂಸ್ಥಾನ್ ಏರೋನಾಟಿಕ್ ಸಂಸ್ಥೆಯ ವ್ಯವಹಾರಿಕ ಒಪ್ಪಂಧಗಳನ್ನು ಅದಾನಿ ಗೆಮತ್ತು ರಫೇಲ್ ಡೀಲ್ ಅನ್ನು ಅನಿಲ್ ಅಂಬಾನಿಯ ಕೇವಲ ಎರಡು ತಿಂಗಳ ಹಳೆಯ ಕಂಪನಿಗೆ ಮಾರಾಟ ಮಾಡಲಾಗುತ್ತಿದೆ.
ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರವನ್ನು ಹೆಚ್ಚು ತೆರಿಗೆ ಹಾಕುವ ಮೂಲಕ ಹೆಚ್ಚಿಸಿತು, ಕಚ್ಚಾ ತೈಲದ ಬೆಲೆ ಅಗ್ಗವಾಗಿದ್ದರೂ ಸಹ ಬೆಲೆ ಮಾತ್ರ ಇಳಿಯುತ್ತಿಲ್ಲ. ಭಾರತದಲ್ಲಿ ಅಮಿತ್ ಶಾ ಅವರ ಪುತ್ರ , ಅಂಬಾನಿ, ಅದಾನಿ, ಬಾಬಾ ರಾಮದೇವ್ ಇಂತಹ ಬಿಜೆಪಿ ಪ್ರಾಯೋಜಕರ ವಿಕಾಸ ಮಾತ್ರ ನಡೆಯುತ್ತಿದೆ. ದಯಮಾಡಿ ನೀವು ಪ್ರತಿನಿಧಿಸುವ ವಾರಣಾಸಿಯ ಗಂಗಾ ನದಿಯಲ್ಲಿ ಸ್ನಾನ ಮಾಡಿ ಹೊರಬನ್ನಿ. ಕಲ್ಮಶಗಳಿಂದ ತುಂಬಿರುವ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಸ್ವಚ್ಛವಾಗುತ್ತದೆ.
ವಿ.ಸೂ. – ಇದು ಕಾಂಗ್ರೇಸ್ ಪಕ್ಷದ ಪರ ನೀಡಿದ ಹೇಳಿಕೆ ಅಲ್ಲ. ಪಕ್ಷಾತೀತವಾಗಿ ಬದುಕುತ್ತಿರುವ ಓರ್ವ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ನಾನು ಕಂಡ ಸತ್ಯಗಳನ್ನು ನಿಮ್ಮೆದುರು ತೆರೆದಿಟ್ಟಿದ್ದಿನಿ.
ಕನ್ನಡಕ್ಕೆ- ಜಗದೀಶ್ ಕೊಪ್ಪ.




