ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ: ವಿಶೇಷಗಳೇನು?

2 years ago

ಬಿಜೆಪಿಗಿಂತ ಒಂದು ಹೆಜ್ಜೆ ಮುನ್ನುಗ್ಗಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ 

5 ನ್ಯಾಯಗಳ ಮೂಲಕ 25 ಪ್ರಮುಖ ಭರವಸೆಗಳನ್ನು ಘೋಷಿಸಿದ ಕಾಂಗ್ರೆಸ್

ದೆಹಲಿ: 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಂಚ ನ್ಯಾಯ ಗ್ಯಾರಂಟಿ ಜೊತೆಗೆ 25 ಗ್ಯಾರಂಟಿ ಯೋಜನೆ ಜಾರಿ ಮಾಡುವ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.

 

ಕಾಂಗ್ರೆಸ್ ಪ್ರಣಾಳಿಕೆ

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ 2024ರ ಲೋಕಸಭೆ ಚುನಾವಣಾ ಪ್ರಣಾಳಿಕೆಯನ್ನು ಮಾಜಿ ಅಧ್ಯಕ್ಷ್ಯೆ ಮತ್ತು ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮೊದಲಾದ ನಾಯಕರ ಸಮ್ಮುಖದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಕಾಂಗ್ರೆಸ್ ಪ್ರಣಾಳಿಕೆ

ಪ್ರಣಾಳಿಕೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆ, ಅಗ್ನಿಪತ್ ಯೋಜನೆ ರದ್ದು, 30 ಲಕ್ಷ ಉದ್ಯೋಗಗಳ ಭರ್ತಿ, ಪರಿಶಿಷ್ಟ ಜಾತಿ, ವರ್ಗ ಮತ್ತು ಓಬಿಸಿ ಸಮುದಾಯಗಳ ಮೀಸಲಾತಿ ಹೆಚ್ಚಳ, ಜಾತಿಗಣತಿ ನಡೆಸುವ ಭರವಸೆಗಳನ್ನು ಘೋಷಿಸಿದೆ. 

ಐದು ನ್ಯಾಯಗಳ ಘೋಷಣೆ
1. ಯುವ ನ್ಯಾಯ
2. ನಾರಿ ನ್ಯಾಯ
3. ಕಿಸಾನ್ ನ್ಯಾಯ
4. ಶ್ರಮಿಕ್ ನ್ಯಾಯ
5. ಎಲ್ಲರೂ ಪಾಲ್ಗೊಳ್ಳುವ ನ್ಯಾಯ
ಮೇಲಿನ ಐದು ನ್ಯಾಯಗಳು ಸೇರಿದಂತೆ ಒಟ್ಟು 25 ನ್ಯಾಯಗಳನ್ನು ಜಾರಿ ಮಾಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಘೋಷಿತ ಪಂಚ ನ್ಯಾಯಗಳನ್ನು ದೇಶದ ಅಭಿವೃದ್ಧಿಯ ಆಧಾರ ಸ್ತಂಭಗಳೆಂದು ಕಾಂಗ್ರೆಸ್ ಕರೆದಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಈ ಐದೂ ನ್ಯಾಯಗಳನ್ನು ಜಾರಿ ಮಾಡುವ ಜೊತೆಗೆ 25 ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸುವುದಾಗಿ ಭರವಸೆ ಕೊಟ್ಟಿದೆ. 

ದೇಶದಲ್ಲಿ ಉದ್ಯೋಗಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ, ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನೀಡುವ ಭರವಸೆ ಮತ್ತು ಜಾತಿಗಣತಿ ನಡೆಸುವ ಭರವಸೆಯನ್ನೂ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. 

ಪ್ರಣಾಳಿಕೆ ಬಿಡಗಡೆ ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಪ್ರಣಾಳಿಕೆಯು ದೇಶದ ರಾಜಕೀಯ ಇತಿಹಾಸದಲ್ಲಿ ’ನ್ಯಾಯ ಕಾ ದಸ್ತಾವೇಜ್’ನ್ಯಾಯಕ್ಕಾಗಿ ದಾಖಲೆ ಆಗಿರುತ್ತದೆ. ’ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಐದು ಸ್ತಂಭಗಳಿಂದ – ಯುವ ರೈತರು, ಮಹಿಳೆಯರು, ಕಾರ್ಮಿಕರು, ಮತ್ತು ಎಲ್ಲರೂ ಪಾಲ್ಗೊಳ್ಳುವಿಕೆ ಸೇರಿದಂತೆ, 25 ಗ್ಯಾರಂಟಿಗಳು ಪ್ರಣಾಳಿಕೆಯಲ್ಲಿವೆ. ಅವುಗಳ ಈಡೇರಿಕೆ ನಮ್ಮ ಬದ್ದತೆ ಎಂದರು. 

ಚುನಾವಣಾ ಪ್ರಣಾಳಿಕೆಯನ್ನು ದೇಶದ ಬಡಜನರಿಗೆ ಅರ್ಪಿಸಲಾಗುವುದು. ಪಿ.ಚಿದಬಂರಂ ನೇತೃತ್ವದ ಸಮಿತಿ ಕಳೆದ ಹಲವು ತಿಂಗಳಲ್ಲಿ ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಎಲ್ಲಾ ವರ್ಗದ ಸಮಯದಾಯ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದು ಹೇಳಿದರು.

ಒಬ್ಬ ಅಪ್ರೆಂಟೀಸ್ಗೆ ಒಂದ ಲಕ್ಷರೂಪಾಯಿ ಮೊತ್ತದಲ್ಲಿ ಕೌಶಲ್ಯ ತರಬೇತಿ ನೀಡಿ ಅವರಲ್ಲಿ ಕೌಶಲ್ಯ ವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ. ಇದರ ಜೊತೆಗೆ ಪಂಚ ನ್ಯಾಯದ ಮೂಲಕ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಉದ್ದೇಶ. ಎಲ್ಲರನ್ನೂ ಒಳಗೊಳ್ಳುವ ಮೂಲಕ ಎಲ್ಲರಿಗೂ ಸಮಾನ ಅವಕಾಶ ಒದಗಿಸುವುದು ಪ್ರಣಾಳಿಕೆಯ ಉದ್ದೇಶ ಎಂದರು.

ಕಾಂಗ್ರೆಸ್ ನೀಡಿದ ಪ್ರಮುಖ ಚುನಾವಣಾ ಭರವಸೆಗಳು:

1. ಮೀಸಲಾತಿಯ ಪ್ರಮಾಣವನ್ನು ಶೇ. 50ಕ್ಕೆ ಹೆಚ್ಚಿಸಲು ಸಂವಿಧಾನ ತಿದ್ದುಪಡಿ
2. ಪಿಎಸ್ಯು ಮತ್ತು ಸರ್ಕಾರಿ ಉದ್ಯೋಗಗಳಲ್ಲಿನ ಗುತ್ತಿಗೆ ಉದ್ಯೋಗಗಳನ್ನು ರದ್ದುಗೊಳಿಸಿ ಮತ್ತು ಅವುಗಳ ಖಾಯಂಗೊಳಿಸುವುದು
3. ಎಸ್ ಸಿ, ಎಸ್ ಟಿ , ಒಬಿಸಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ
4. ಜಾತಿ ಆಧಾರದ ಮೇಲೆ ಯಾವುದೇ ರೀತಿಯ ವಿದ್ಯಾರ್ಥಿ ಕಿರುಕುಳ ತಪ್ಪಿಸಲು ರೋಹಿತ್ ವೇಮುಲಾ ಕಾಯ್ದೆ ಜಾರಿ
5. ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ 1,000 ರೂ. ಪಿಂಚಣಿ
6. 25 ಲಕ್ಷ ರೂ.ವರೆಗಿನ ನಗದುರಹಿತ ವಿಮೆಯೊಂದಿಗೆ ರೋಗನಿರ್ಣಯ, ಶಸ್ತ್ರಚಿಕಿತ್ಸೆ ಮತ್ತು ಔಷಧಗಳು ಸೇರಿದಂತೆ ಸಾರ್ವತ್ರಿಕ ಉಚಿತ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆ
7. 20245ರಿಂದ ಮಹಿಳೆಯರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇ.50ರಷ್ಟು ಮೀಸಲಾತಿ
8. ಪ್ರತಿ ಬಡ ಕುಟುಂಬಕ್ಕೆ ಮಹಾಲಕ್ಷ್ಮಿ ಯೋಜನೆ – ರೂ. 1 ಲಕ್ಷದ ಬೇಷರತ್ತು ನಗದು ವರ್ಗಾವಣೆ ಸೌಲಭ್ಯ
9. ಅಗ್ನಿಪಥ್ ಕಾರ್ಯಕ್ರಮ ರದ್ದುಗೊಳಿಸಿ ಮತ್ತು ಸಂಪೂರ್ಣ ಮಂಜೂರಾದ ಶಕ್ತಿ ಸಾಧಿಸಲು ಸಾಮಾನ್ಯ ನೇಮಕಾತಿ ಪುನರಾರಂಭಿಸಲು ಸಶಸ್ತ್ರ ಪಡೆಗಳಿಗೆ ಅಧಿಕಾರ
10. ಸರ್ವರ ಅಭಿವೃದ್ಧಿಗೆ ಒತ್ತು

ಇದೇ ಸಂದರ್ಭದಲ್ಲಿ ಮಾತಾಡಿದ ಮಾಜಿ ಹಣಕಾಸು ಸಚಿವ ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸರ್ವಾಧಿಕಾರಿ ಮನೋಭಾವ ಹೆಚ್ಚಾಗಿದೆ. ಅದರಲ್ಲಿಯೂ ಕಳೆದ ಐದು ವರ್ಷದಲ್ಲಿ ಇದು ಮತ್ತಷ್ಟು ಹೆಚ್ಚಿದೆ. ಬಡವರು, ದೀನದಲಿತರು ಬದುಕುವ ಸ್ಥಿತಿ ಮತ್ತಷ್ಟು ದಯನೀಯವಾಗಿದೆ ಎಂದರು.

ಉದ್ಯೋಗ ನೀಡಿಕೆ, ಸಂಪತ್ತು ಸಮಾನ ಹಂಚಿಕೆ ಮತ್ತು ಎಲ್ಲರ ಕ್ಷೇಮಾಭಿವೃದ್ದಿಗೆ ಒತ್ತು ನೀಡುವ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.8.5ರಷ್ಟು ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ ಈ ಪ್ರಮಾಣ ಶೇ.5.9ರಷ್ಟಿದೆ. ಆರ್ಥಿಕತೆ ಕುಸಿದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರೀಮಂತರಿಂದ ಶ್ರೀಮಂತರಿಗಾಗಿ ಮತ್ತು ಶ್ರೀಮಂತರಿಗೋಸ್ಕರ ಸ್ಥಾಪಿತವಾಗಿದೆ. ಹೀಗಾಗಿ ದೇಶದ ಬಡಜನರನ್ನು ಧಿಕ್ಕರಿಸಿದೆ ಎಂದು ಆರೋಪಿಸಿದರು.

ಮುಂದಿನ 10 ವರ್ಷಗಳಲ್ಲಿ 23 ಕೋಟಿ ಜನರನ್ನು ಬಡತನದ ರೇಖೆಯಿಂದ ಮೇಲೆ ತರುವ ಗುರಿ ಹೊಂದಲಾಗಿದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಎಂದು ದೇಶದ ಮತದಾರರನ್ನು ಕೋರಿದರು.

Leave a Reply