ಸಿಎಂ ಬೊಮ್ಮಾಯಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

4 years ago

ಬೆಂಗಳೂರು: ರಾಜಕೀಯ ವೈಷಮ್ಯ ಮರೆತು ಸೌಹಾರ್ದತೆಯಿಂದ ಸಹಜ ಜೀವನ ನಡೆಸುತ್ತಿದ್ದ ಕರಾಳಿಯಲ್ಲಿ ಕೇವಲ 10 ದಿನಗಳಲ್ಲೇ 3 ಹತ್ಯೆಗಳಾಗಿವೆ. ಈ ಮೂರು ಕೊಲೆ ಪ್ರಕರಣಗಳು ಇನ್ನೂ ತನಿಖೆ ಹಂತದಲ್ಲಿವೆ, ಯಾವೊಂದು ಹತ್ಯೆಯ ಹಿಂದಿನ ಉದ್ದೇಶ ಇದುವರೆಗೂ ತಿಳಿದುಬಂದಿಲ್ಲ ಎಂದು ಕೆಪಿಸಿಸಿ ಹೇಳಿದೆ.

ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ನಡೆದಿರುವ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ಸಿಎಂಅನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇಂತಹ ಸಮಯದಲ್ಲಿ ಬೆಂಕಿ ಕುಂಡದಂತಿರುವ ಕರಾವಳಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ಪರಸ್ಪರ ಪ್ರೀತಿ-ಸ್ನೇಹವನ್ನು ಬೆಸೆದು, ಕೋಮು ಭಾವನೆ ಕೆದಕುವವರಿಗೆ ಹೆಡೆಮುರಿ ಕಟ್ಟಿ, ಶಾಂತಿ ನೆಲೆಗೊಳಿಸುವುದು ಈ ರಾಜ್ಯದ ಮುಖ್ಯಮಂತ್ರಿಗಳ ಜವಾಬ್ದಾರಿ. ಆದರೆ ತಾವು ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎನ್ನುವುದನ್ನೂ ಮರೆತು ಪಕ್ಷಪಾತ ಧೋರಣೆಯಿಂದ ನಡೆದುಕೊಳ್ಳುವುದು ಎಷ್ಟು ಸರಿ? ಇಂತಹ ಪಕ್ಷಪಾತ ಧೋರಣೆಯ ಮೂಲಕ ಅವರು ರಾಜ್ಯಕ್ಕೆ ಕೊಡಲು ಹೊರಟಿರುವ ಸಂದೇಶ ಎಂತದ್ದು? ಎಂದು ಪ್ರಶ್ನಿಸಿದೆ.

“ಕ್ರಿಯೆಗೆ ಪ್ರತಿಕ್ರಿಯೆ ಸಹಜ” ಎಂದು ಹೇಳುವುದು, ಈ ಮೂಲಕ ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡುವುದು, ರಾಜಕೀಯ ವೈಷಮ್ಯದ ಕೃತ್ಯಗಳು ನಡೆದಾಗ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬಿಜೆಪಿ ಮೊದಲು ನಿಲ್ಲಿಸಬೇಕಿದೆ. ನಾಗಪುರದ ಹಾವುಗಳನ್ನು ಓಲೈಸುವುದಕ್ಕಾಗಿ ರಾಜಧರ್ಮ ಕೈಬಿಡುವುದಕ್ಕಿಂತ ರಾಜೀನಾಮೆ ನೀಡುವುದೇ ಲೇಸು ಬಸವರಾಜ್ ಬೊಮ್ಮಾಯಿ ಅವರೇ ಎಂದು ರಾಜೀನಾಮೆಗೆ ಒತ್ತಾಯಿಸಿದೆ.

ಜನತಾ ಪರಿವಾರದಿಂದ ಬಿಜೆಪಿಗೆ ವಲಸೆ ಬಂದಿರುವ Basavaraj Bommai ಅವರು ‘ಸಂಘಪರಿವಾರಿ’ ಎಂದು ಗುರುತಿಸಿಕೊಳ್ಳಲು ಸಾಕಷ್ಟು ಒದ್ದಾಡುತ್ತಿದ್ದಾರೆ. ಅಸ್ತಿತ್ವ & ಹುದ್ದೆ ಉಳಿಸಿಕೊಳ್ಳಲು ಅವರಿಗೆ ಅದು ಅನಿವಾರ್ಯ! ಅವರ ಸಂಘದ ಓಲೈಕೆ ಪ್ರಯತ್ನ ಹಾಗೂ ಕೋಮುಕ್ರಿಮಿಗಳಿಗೆ ಬೆಂಬಲಿಸಿದ್ದೇ ಇಂದು ರಾಜ್ಯದ ರಕ್ತಸಿಕ್ತ ಸ್ಥಿತಿಗೆ ಕಾರಣ ಎಂದು ಆರೋಪಿಸಿದೆ.

Leave a Reply