ಮಂಗಳೂರು: ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸರ್ವ ವಿಭಾಗದ ಜನತೆ ಭಾಗವಹಿಸಿದ್ದರೂ ಅದರಲ್ಲಿ ಕಾರ್ಮಿಕ ವರ್ಗ ನಡೆಸಿದ ಚಳುವಳಿಯಂತೂ ತೀರಾ ಅವಿಸ್ಮರಣೀಯ ಎಂದು CITU ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ ಹೇಳಿದರು.
ತೊಕ್ಕೋಟುನಲ್ಲಿ ಜರುಗಿದ CITU ಉಳ್ಳಾಲ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತಾಡಿದ ಅವರು, ಅಂದು ಬ್ರಿಟಿಷರು ಜಾರಿಗೆ ತಂದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದ ಕಾರ್ಮಿಕ ವರ್ಗ ಇಂದೂ ಕೂಡ ಆಳುವ ವರ್ಗದ ಆಕ್ರಮಣಕಾರಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಮರಶೀಲ ಹೋರಾಟದತ್ತ ಮುನ್ನುಗ್ಗುತ್ತಿದೆ ಎಂದರು.

ಆಳುವ ವರ್ಗದ ವಿನಾಶಕಾರಿ ಆರ್ಥಿಕ ನೀತಿಗಳು ಹಾಗೂ ಕೋಮುವಾದಿ ಅಜೆಂಡಾದಿಂದಾಗಿ ದೇಶದ ಸ್ವಾತಂತ್ರ್ಯಕ್ಕೆ ಮತ್ತೆ ಅಪಾಯ ಬಂದೊದಗಿದ್ದು, ದೇಶ ಉಳಿಸುವ ಮೂಲಕ ಜನತೆಯ ಬದುಕನ್ನು ರಕ್ಷಿಸಲು ಕಾರ್ಮಿಕ ವರ್ಗ ಕಟಿಬದ್ದರಾಗಬೇಕಾಗಿದೆ ಎಂದು ಅವರು ಸೇರಿದ್ದ ಕಾರ್ಮಿಕರಿಗೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಮಿಕ ನಾಯಕರಾದ ಸುಕುಮಾರ್ ಮಾತನಾಡಿ, ಇಂದು ಕಾರ್ಪೊರೇಟ್ ಹಿಂದುತ್ವದ ಕೂಟ ದೇಶವನ್ನು ಆಳುತ್ತಿದ್ದು ದೇಶದ ಸ್ವಾತಂತ್ರ್ಯ, ಸಮಗ್ರತೆ, ಸಾರ್ವಭೌಮತ್ವವನ್ನು ನಾಶ ಮಾಡುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವನ್ನು ಜಾತಿ ಧರ್ಮದ ಆಧಾರದಲ್ಲಿ ಮತ್ತೆ ವಿಭಜಿಸಲು ಹುನ್ನಾರ ನಡೆಸುತ್ತಿದೆ. ಕಾರ್ಮಿಕ ವರ್ಗದ ಹಕ್ಕು ಭಾಧ್ಯತೆಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ದೂಡುತ್ತಿದೆ ಎಂದು ಆರೋಪಿದರು.
ಸಮ್ಮೇಳನಕ್ಕೆ ಮಾರ್ಗದರ್ಶನ ನೀಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಐಕ್ಯತೆ ಮತ್ತು ಹೋರಾಟದ ನಿನಾದದೊಂದಿಗೆ ಜನ್ಮ ತಾಳಿದ CITU ವಿವಿಧ ವಿಭಾಗದ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ದೇಶದ ಬಲಿಷ್ಠ ಕಾರ್ಮಿಕ ಸಂಘಟನೆಯಾಗಿ ಮೂಡಿ ಬಂದಿದೆ. ಕಾರ್ಮಿಕ ವರ್ಗದ ಮಧ್ಯೆ ಐಕ್ಯತೆ ಸಾಧಿಸಿ ಚಳುವಳಿಯನ್ನು ವಿಸ್ತರಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಾರ್ಮಿಕ ವರ್ಗಕ್ಕೆ ಮಾತ್ರ ಸಾಧ್ಯ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು CITU ಉಳ್ಳಾಲ ವಲಯಾಧ್ಯಕ್ಷ ಪದ್ಮಾವತಿ ಶೆಟ್ಟಿ ವಹಿಸಿದ್ದರು.
ಬಳಿಕ ನಡೆದ ಪ್ರತಿನಿಧಿ ಅಧಿವೇಶನದಲ್ಲಿ CITU ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿ ಜಯಂತ ನಾಯಕ್ ಕರಡು ವರದಿ ಮಂಡಿಸಿದರು. ಸಮ್ಮೇಳನದ ಸಮಾರೋಪ ಭಾಷಣವನ್ನು ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕ ಯು.ಬಿ.ಲೋಕಯ್ಯ ಮಾಡಿದರು.
ಸಮ್ಮೇಳನವು ನೂತನ ವಲಯ ಸಮಿತಿಯನ್ನು ರಚಿಸಿತು. ನೂತನ ಅಧ್ಯಕ್ಷರಾಗಿ ಸುಂದರ ಕುಂಪಲ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿದಾಸ್ ಭಟ್ನಗರ, ಖಜಾಂಚಿಯಾಗಿ ವಿಲಾಸಿನಿ ತೊಕ್ಕೋಟುರವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಪದ್ಮಾವತಿ ಶೆಟ್ಟಿ, ರಾಮಚಂದ್ರ ಪಜೀರು, ಜನಾರ್ಧನ ಕುತ್ತಾರ್, ಜಯಂತ ನಾಯಕ್, ಕಾರ್ಯದರ್ಶಿಗಳಾಗಿ ಅಶೋಕ ಶೆಟ್ಟಿ, ಚಂದ್ರಹಾಸ ಪಿಲಾರ್, ಬಾಬು ಪಿಲಾರ್, ರತ್ನಮಾಲಾ ಉಚ್ಚಿಲ ಅವರನ್ನು ಆರಿಸಲಾಯಿತು.



