ಬೆಂಗಳೂರು: ನಗರದ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಬೆಂಗಳೂರುನಗರ ದಕ್ಷಿಣ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭ ಮತ್ತು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷದ ನಾಯಕ ಆರ್.ಅಶೋಕ್ ರವರಿಗೆ ಅಭಿನಂದನೆ ಮತ್ತು ನೂತನ ಜಿಲ್ಲಾಧ್ಯಕ್ಷ ಶಾಸಕ ಸಿ.ಕೆ.ರಾಮಮೂರ್ತಿರವರ ಬಿಜೆಪಿ ಬಾವುಟ ಹಸ್ತಾಂತರ ಮಾಡಿ ಪದಗ್ರಹಣ ನೇರವೇರಿತು.
ಇದೇ ವೇಳೆ ಮಾತಾಡಿದ ಬಿ.ವೈ.ವಿಜಯೇಂದ್ರ, ಇಂದು ಶುಭ ದಿನ. ದೇಶದ ಅಪ್ರತಿಮ ನಾಯಕ, ಬಿಜೆಪಿ ಪಕ್ಷದ ಹಿರಿಯ ನಾಯಕ, ರಾಮಜನ್ಮಭೂಮಿ ಹೋರಾಟದ ರೂವಾರಿ ಲಾಲ್ ಕೃಷ್ಣ ಅಡ್ವಾಣಿ ಭಾರತರತ್ನ ಪ್ರಶಸ್ತಿ ಸಂದಿರುವುದು ಸಂತೋಷದಾಯಕವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಂತರ ಭ್ರಮೆಯಲ್ಲಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯ ಚುನಾವಣೆಯ ಫಲಿತಾಂಶ ನೋಡಿದ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತವಾಗಿದೆ. ದೇಶದ ಭವಿಷ್ಯದ ದೃಷ್ಟಿ, ಶಕ್ತಿಶಾಲಿ ರಾಷ್ಟ್ರ ಮತ್ತು ಅಗ್ರಗಣ್ಯ ರಾಷ್ಟ್ರ ಮಾಡಲು ಪ್ರಧಾನಿ ನರೇಂದ್ರಮೋದಿರವರಿಂದ ಮಾತ್ರ ಸಾಧ್ಯ , ದೇಶಕ್ಕೆ ಮೋದಿನೆ ಗ್ಯಾರಂಟಿ ಎಂದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆರವರೆ ಹೇಳುತ್ತಾರೆ, ಬಿಜೆಪಿ ಪಕ್ಷ 400 ಲೋಕಸಭಾ ಕ್ಷೇತ್ರ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ನಮ್ಮ ತಪ್ಪಿನಿಂದ ಕಾಂಗ್ರೆಸ್ ಸರ್ಕಾರ ಬಂದಿದೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಒಂದು ಬಿಡಿಗಾಸು ಅಭಿವೃದ್ದಿ ಮಾಡಿಲ್ಲ. 8 ತಿಂಗಳ ಆಡಳಿತದ ಕಾಂಗ್ರೆಸ್ ಸರ್ಕಾರ ಜನವಿರೋಧಿ, ಜನಪ್ರಿಯತೆ, ನಂಬಿಕೆ ಎರಡನ್ನು ಕಳೆದುಕೊಂಡಿದೆ ಎಂದರು.
ಭಷ್ಟಾಚಾರರಹಿತ ಆಡಳಿತ, ವಿಶ್ವದ ಗಮನ ಸೆಳದ ನಾಯಕ ಪ್ರಧಾನಿ ನರೇಂದ್ರಮೋದಿರವರು. ಬಡವರು, ರೈತರು, ಮಹಿಳೆಯರು, ಯುವಕರಿಗಾಗಿ 2047ರಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡಲಾಗುವುದು. ಅಚಲವಾದ ವಿಶ್ವಾಸವನ್ನು ಪ್ರಧಾನಿ ನರೇಂದ್ರಮೋದಿರವರು ಇಟ್ಟುಕೊಂಡಿದ್ದಾರೆ ಎಂದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತಾಡಿ, ಲೋಕಸಭಾ ಚುನಾವಣೆಗೆ ಸಂಪೂರ್ಣ ತಯಾರಿ ಮಾಡಲಾಗುತ್ತಿದೆ. 28 ಲೋಕಸಭಾ ಕ್ಷೇತ್ರ ಗೆಲ್ಲಲು ಬಿಜೆಪಿ ಅಧ್ಯಕ್ಷರು ಆದೇಶ ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. 8 ತಿಂಗಳ ಅವಧಿಯಲ್ಲಿ ಅಭಿವೃದ್ದಿಯಾಗಿಲ್ಲ, ಯಾವುದೇ ಕಲ್ಯಾಣ ಅನುಷ್ಠಾನವಾಗಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಪಾಪರ್ ಸರ್ಕಾರ. ದೆಹಲಿ ಹೋಗಿ ಪ್ರತಿಭಟನೆ ಮಾಡಲು ಕಾಂಗ್ರೆಸ್ ತಯಾರಿ ನಡೆಸಿದ್ದಾರೆ. ದೇಶ ಒಡೆಯುವ ಕೆಲಸ ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ. ದೇಶ ಒಂದು ಕುಟುಂಬದಂತೆ , ಭಾರತಮಾತೆ ನಮ್ಮೆಲ್ಲರ ತಾಯಿ. ಕೇಂದ್ರದಿಂದ ಹಣ ಕೇಳುತ್ತಿರುವುದು ಕಾಂಗ್ರೆಸ್ ಸರ್ಕಾರ ಹಣ ಲೂಟಿ ಹೊಡೆಯಲು ಎಂದರು.
ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಅನುದಾನ ಪ್ರಧಾನಿ ನರೇಂದ್ರಮೋದಿರವರು ಕೊಟ್ಟಿದ್ದಾರೆ. ದೇಶ ಎರಡು ಭಾಗ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಬೆಂಗಳೂರು ಎರಡು ಭಾಗ ನಂತರ ಕನಕಪುರ ಒಂದು ಭಾಗ ಮಾಡಲು ಹೋಗುತ್ತಿದ್ದಾರೆ. ದೇಶ ಸ್ವಾತಂತ್ರ್ಯಗಳಿಸಲು ಲಕ್ಷಾಂತರ ಜನರ ತ್ಯಾಗ ಬಲಿದಾನವಿದೆ ಎಂದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಕಟ್ಚಿಬೆಳೆಸುವಲ್ಲಿ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮವಿದೆ. ಅವರು ಮಾಡಿದ ಸೇವೆಯಿಂದ ನಮ್ಮಂತವರು ಮುಂದೆ ಬರಲು ಸಾಧ್ಯವಾಗಿದೆ. ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಶ್ರಮಿಸಲಾಗುವುದು ಎಂದರು.
ನೂತನವಾಗಿ ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಸಿ.ಕೆ.ರಾಮಮೂರ್ತಿ ಮಾತನಾಡಿ, ಬೆಂಗಳೂರು ದಕ್ಷಿಣ ಬಿಜೆಪಿ ಪಕ್ಷದ ಭದ್ರಕೋಟೆ. ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ರವರಿಗೆ ಕಾರ್ಯಕರ್ತರ ಪರವಾಗಿ ಸನ್ಮಾನಿಸಲಾಗುತ್ತಿದೆ. 10 ವಿಧಾನಸಭಾ ಕ್ಷೇತ್ರಗಳು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ ಎಂದರು.
ಸದೃಢ ಮತ್ತು ಸಂಘಟನೆ ಮೂಲಕ ಬೂತ್ ಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿರವರ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ, ಮನೆಗಳಿಗೆ ತಲುಪಿಸಬೇಕು. ಸಾಮಾನ್ಯ ಕಾರ್ಯಕರ್ತನಾದ ನನ್ನನು ಅನಂತ್ ಕುಮಾರ್, ವಿಜಯಕುಮಾರ್ ಅವರು ರಾಜಕೀಯವಾಗಿ ಬೆಳೆಸಿದರು. ದಕ್ಷಿಣ ಲೋಕಸಭಾ ಕ್ಷೇತ್ರವನ್ನು 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಂಘಟನೆ ಮಾಡಲಾಗುವುದು ಎಂದರು.
ಶಾಸಕ ಸತೀಶ್ ರೆಡ್ಡಿ, ಮಾಜಿ ಸಚಿವ ವಿ.ಸೋಮಣ್ಣ, ಶಾಸಕರಾದ ಎಂ.ಕೃಷ್ಣಪ್ಪ, ರವಿಸುಬ್ರಮಣ್ಯ, ಉದಯ ಗರುಡಚಾರ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಗೋಪಿನಾಥ್ ರೆಡ್ಡಿ, ನಗರಕೇಂದ್ರ ಜಿಲ್ಲಾಧ್ಯ ಎಸ್.ಹರೀಶ್, ಸಪ್ತಗಿರಿಗೌಡ, ಮಾಜಿ ಮಹಾಪೌರ ಎಸ್.ಕೆ.ನಟರಾಜ್, ರಾಜ್ಯ ಬಿಜೆಪಿ ಯುವ ನಾಯಕ ಡಾ.ಅರುಣ್ ಸೋಮಣ್ಣ, ರವೀಂದ್ರ, ಕೆ.ಉಮೇಶ್ ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ, ಹಾಲಿ ಸದಸ್ಯರು, ಮಂಡಲ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




