ಬೆಂಗಳೂರು: ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲ.ಈ ಬಗ್ಗೆ ದೂರುಗಳು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ಬಾಗೂರಿನ ದೇವಸ್ಥಾನದಲ್ಲಿ ಕನಕಪೀಠದ ಈಶ್ವರಾನಂದಪುರಿ ಸ್ವಾಮೀಜಿಯವರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ಕೊಡದೆ ತಾರತಮ್ಯ ಮಾಡಿದ್ದಲ್ಲದೆ, ದೇವಾಲಯ ಸ್ವಚ್ಛಗೊಳಿಸಿದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದರು.
ಚಿತ್ರದುರ್ಗದ ದೇವಾಲಯದಲ್ಲಿ ಕನಕಪೀಠದ ಗುರುಗಳಿಗೆ ದೇವರ ದರ್ಶನ ವಿಷಯವಾಗಿ ತಾರತಮ್ಯ ಮಾಡಿರುವ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಕೆಲವು ದೇವಸ್ಥಾನಗಳಲ್ಲಿ ಭಕ್ತರನ್ನು ಗರ್ಭಗುಡಿಯೊಳಗೂ ಬಿಟ್ಟು ದೇವರ ಮೂರ್ತಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ತಾವು ಇತ್ತೀಚೆಗೆ ಶ್ರೀಶೈಲಕ್ಕೆ ಭೇಟಿ ನೀಡಿದಾಗ ಗರ್ಭಗುಡಿಗೆ ಕರೆದುಕೊಂಡು ಹೋಗಿದ್ದರು. ದೇವರ ಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಬಹಳಷ್ಟು ದೇವಸ್ಥಾನಗಳಲ್ಲಿ ಗರ್ಭಗುಡಿಯೊಳಗೆ ಬಿಡುವುದಿಲ್ಲ ಎಂದು ನಮ್ಮ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಬಾಗೂರು ದೇವಸ್ಥಾನದ ಪಟ್ಟಣದಲ್ಲಿ ಸ್ವಾಮೀಜಿ ಹೋದ ಬಳಿಕ ದೇವಾಲಯ ಸ್ವಚ್ಛಗೊಳಿಸಿರುವುದು ಸರಿಯಲ್ಲ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮುಜರಾಯಿ ಅಷ್ಟೇ ಅಲ್ಲ ಯಾವುದೇ ದೇವಸ್ಥಾನಗಳಲ್ಲಿ ಜಾತಿ, ಅಸ್ಪೃಶ್ಯತೆ, ಅಸಮಾನತೆ ಆಚರಣೆಯಾಗಬಾರದು. ಬಸವಣ್ಣ, ಕನಕದಾಸರ ಆಶಯದಂತೆ ಸಹಬಾಳ್ವೆಯ ಪರಿಪಾಠ ಇರಬೇಕು. ಶ್ರೀಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿವೆ. ಎಲ್ಲಿಯೂ ಅಸ್ಪೃಶ್ಯತೆ ಆಚರಣೆಯಾಗುತ್ತಿಲ್ಲ. ಇತ್ತೀಚೆಗೆ ಈ ಪ್ರಕರಣ ವರದಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲಾಖೆಯ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಜೊತೆಗೆ ಅಸ್ಪೃಶ್ಯತೆ ಮತ್ತು ತಾರತಮ್ಯ ಆಚರಣೆ ಮಾಡಬಾರದು ಎಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ನಾಮಫಲಕಗಳನ್ನು ಮತ್ತಷ್ಟು ಗೋಚರ ಸ್ಥಿತಿಯಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.




