ಕಾರವಾರ: ಜಿಲ್ಲೆಯಲ್ಲಿನ ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಅಧ್ಯಯನದ ಬಗ್ಗೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ವಿಶೇಷ ಕಾಳಜಿ ವಹಿಸಿ ಪ್ರತಿಯೊಬ್ಬರೂ ಉತ್ತೀರ್ಣರಾಗುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮಗೊಳಿಸುವ ಕುರಿತು ನಡೆದ, ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ್ವಿತೀಯ ಪಿಯುಸಿ ಪ್ರತೀ ವಿದ್ಯಾರ್ಥಿಯ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವ ಸಮಯವಾಗಿದ್ದು, ಅವರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಪ್ರೇರೇಪಣೆ ಅತ್ಯಂತ ಅಗತ್ಯ. ಪ್ರಾಧ್ಯಾಪಕರು ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಕಾಳಜಿ ವಹಿಸಬೇಕು, ಗೈರು ಹಾಜರಾದ ವಿದ್ಯಾರ್ಥಿಗಳ ಬಗ್ಗೆ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿವಹಿಸಿ, ಅವರು ಪರೀಕ್ಷೆಯಲ್ಲಿ ಉತೀರ್ಣರಾಗುವಂತೆ ಮಾಡಬೇಕು. ಅವರಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಬೇಕು, ಜಿಲ್ಲೆಯು ಫಲಿತಾಂಶದಲ್ಲಿ ರ್ಯಾಂಕ್ ಪಡೆಯುವುದು ಮುಖ್ಯವಾಗದೇ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಅತೀ ಮುಖ್ಯ ಎಂದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ಎದುರಿಸುವ ಬಗ್ಗೆ, ಪರೀಕ್ಷೆ ಕೊಠಡಿಯಲ್ಲಿ ಸಮಯ ಪಾಲನೆ ಬಗ್ಗೆ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ, ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಪ್ರಿಪರೇಟರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರಿಗೆ ಬೋಧನೆ ಮಾಡುವಂತೆ ಮತ್ತು ಪರೀಕ್ಷೆಯ ಯಾವುದೇ ಹಂತದಲ್ಲೂ ವಿದ್ಯಾರ್ಥಿಗಳ ಮಾನಸಿಕ ಧೈರ್ಯ ಕುಂದದಂತೆ ನಿರಂತರವಾಗಿ ಅವರನ್ನು ಪ್ರೆರೇಪಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ಕಾಲೇಜ್ ಗಳಲ್ಲಿ ಸೇಫ್ಟಿ ಆಡಿಟ್ ನಡೆಸಿ, ಕಾಲೇಜು ಆವರಣ ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಇರುವ ಬಗ್ಗೆ ದೃಢ ಪಡಿಸಿಕೊಳ್ಳಿ. ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಕಾಲೇಜುಗಳಲ್ಲಿ ಅಣಕು ಪ್ರದರ್ಶನ ಆಯೋಜಿಸುವಂತೆ ಹಾಗೂ ಕಾಲೇಜುಗಳಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ಆನ್ಲೈನ್ ಮೂಲಕ ತರಬೇತಿ ನೀಡಲು ಮೂಲಸೌಕರ್ಯಗಳ ಕೊರತೆಯಿದ್ದಲ್ಲಿ ಗಮನಕ್ಕೆ ತರುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಮಾತನಾಡಿ, ದ್ವಿತೀಯ ಪಿಯುಸಿ ತರಗತಿಗಳಿಗೆ ಗೈರು ಹಾಜರಾಗುತ್ತಿರುವ ವಿದ್ಯಾರ್ಥಿಗಳ ಮಾಹಿತಿ ನೀಡಿ, ಅವರ ಮನೆಗೆಳಿಗೆ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಲೇಜಿಗೆ ಹಾಜರಾಗುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದ್ದಾರೆ, ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಗುಣಮಟ್ಟದ ಫಲಿತಾಂಶ ಬರುವ ನಿಟ್ಟಿನಲ್ಲಿ ಅಧ್ಯಾಪಕರು ಕಾರ್ಯನಿರ್ವಹಿಸಿ ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ವೃದ್ಧಿಗಾಗಿ, ತರಗತಿಯಲ್ಲಿ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ಮನವೊಲಿಸಿ ಕಾಲೇಜಿಗೆ ಬರುವಂತೆ ಕ್ರಮವಹಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಕಾಲೇಜು ಅವಧಿಯ ಪ್ರಾರಂಭ ಮತ್ತು ನಂತರದಲ್ಲಿ ವೇಳಾಪಟ್ಟಿ ಮಾಡಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಾಲೇಜು ಹಂತದಲ್ಲಿ ಗುರುತಿಸಿ 5 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರನ್ನು ಮೇಲ್ವಿಚಾರಕರಂತೆ ನೇಮಿಸಿ ಅವರ ಕಲಿಕೆಯನ್ನು ಉತ್ತಮಗೊಳಿಸಲಾಗುತ್ತಿದ್ದು, ಎರಡು ಕಿರು ಪರೀಕ್ಷೆ , ಮಧ್ಯ ವಾರ್ಷಿಕ ಪರೀಕ್ಷೆ , ಘಟಕ ಪರೀಕ್ಷೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಅವರ ಪ್ರಗತಿಯನ್ನು ತಿಳಿಸಲಾಗಿದೆ ಎಂದರು.
ತಾಲೂಕುವಾರು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಮಿತಿಯನ್ನು ರಚಿಸಿ ಮೇಲುಸ್ತುವಾರಿ ಮಾಡಲಾಗುತ್ತಿದೆ ಹಾಗೂ ಉಪನ್ಯಾಸಕರುಗಳಿಗೆ ಫಲಿತಾಂಶ ಉತ್ತಮಪಡಿಸಲು ಎರಡು ಪುನಶ್ಚೇತನ ಕಾರ್ಯಗಾರವನ್ನು ನಡೆಸಲಾಗಿದ್ದು, ಡಿಸೆಂಬರ್ ಅಂತ್ಯದಲ್ಲಿ ವರ್ಷದ ಪಠ್ಯವನ್ನು ಪೂರ್ಣಗೊಳಿಸಿ ನಂತರ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉಪಯೋಗಿಸಿಕೊಂಡು ಬೋಧಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.




