ಪರೀಕ್ಷೆ ವಿರೋಧಿಸಿ ಆಂದೋಲನ ನಡೆಸಲೇಬೇಕಾಗಿದೆ: ಶ್ರೀಪಾದ್ ಭಟ್

5 years ago

ಬೆಂಗಳೂರು: ಕೋವಿಡ್ ನ ಈ ದುರಂತದಲ್ಲಿ ಆಡಳಿದಲ್ಲಿರುವವರಿಗೆ ಕನಿಶ್ಟ ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ. ಆದರೆ ಇಲ್ಲಿನ  ಅತ್ಯಂತ ದುಶ್ಟ, ಅನೈತಿಕ, ಅನರ್ಹ ಬಿಜೆಪಿ ಸರಕಾರವು ‘ಮೌತ್ ಕ ಸೌದಾಗರ್ ‘ನಂತೆ ವರ್ತಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಪಾದ್ ಭಟ್ ಆರೋಪಿಸಿದ್ದಾರೆ.

ಇದಕ್ಕೆ ಪೂರಕವಾಗಿ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ವಿವೇಚನೆ, ಪ್ರಬುದ್ಧತೆ, ಜನರ ಕಾಳಜಿ ಇಲ್ಲದೆ ಅಮಾನವೀಯವಾಗಿ ಮಾತನಾಡುತ್ತಿದ್ದಾರೆ. ಇವರು ಸರಿಯಾಗಿ, ನಿಯತ್ತಿನಿಂದ, ಯೋಜಿತವಾಗಿ ಶಾಲೆಗಳನ್ನು ನಡೆಸಲಿಲ್ಲ. ಮಕ್ಕಳು ಪಾಠವನ್ನೇ ಕಲಿಯಲಿಲ್ಲ. ವ್ಯಾಸಂಗವೇ ಇಲ್ಲ. ಆದರೂ ಶಿಕ್ಷಣ ಮಂತ್ರಿಗೆ 10 ಮತ್ತು ಎರಡನೇ ಪಿಯುಸಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಹುಂಬತನ. ಶಿಕ್ಷಣವೆಂದರೆ ಬೋದನೆ ಮತ್ತು ಕಲಿಕೆ ಎಂಬ ಪ್ರಾಥಮಿಕ ತಿಳುವಳಿಕೆ, ಕರ್ತವ್ಯವನ್ನು ಮರೆತ ಈ ಸದರಿ ಮಂತ್ರಿಗೆ ಬರೀ ಪರೀಕ್ಷೆ ನಡೆಸುವ ಈ ಹಪಾಹಪಿತನಕ್ಕೆ ಅಜ್ಞಾನ ಮಾತ್ರವಲ್ಲ, ಅವರೊಳಗಿನ ಅಮಾನವೀಯತೆಯೂ ಕಾರಣ ಎಂದಿದ್ದಾರೆ.

ಚಾಮರಾಜನಗರದಲ್ಲಿ ಅಮಾಯಕರನ್ನು ಬಲಿ ತೆಗೆದುಕೊಂಡ ಇವರಿಗೆ ಈಗ ಮಕ್ಕಳನ್ನು ಅಪಾಯಕ್ಕೆ ದೂಡುವ ಆತುರತೆ. ಇಂತಹ ಬಿಕ್ಕಟ್ಟಿನಲ್ಲಿ ಪರೀಕ್ಷೆ ನಡೆಸಲೇಬಾರದು ಅಥವಾ ಅನಿವಾರ್ಯತೆ ಇದ್ದಲ್ಲಿ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿ ಆಯಾ, ಶಾಲಾ, ಕಾಲೇಜುಗಳ ಮಟ್ಟದಲ್ಲಿ ಸಾಮಾನ್ಯ ಪರೀಕ್ಷೆ ನಡೆಸುವುದು ವಿವೇಕತನ. ಆದರೆ ಈ ವಿವೇಕದ ಪ್ರಜ್ಞೆಯಿಲ್ಲದ ಸುರೇಶ್ ಕುಮಾರ್ ಗೆ ಮಕ್ಕಳನ್ನು ಬಲಿ ಕೊಡುವ ಅವಿವೇಕದ ತುಡಿವಿದ್ದಂತಿದೆ ಎಂದು ಅಭಿಪ್ರಾಯಟಪಟ್ಟಿದ್ದಾರೆ.

ಪಬ್ಲಿಕ್ ಪರೀಕ್ಷೆ ವಿರೋದಿಸಿ ದ. ಕ. ಜಿಲ್ಲೆಯ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘವು ಬರೆದ ಪತ್ರವನ್ನು ಕೆಳಗೆ ಲಗತ್ತಿಸಲಾಗಿದೆ. ಈ ಕೂಡಲೇ ಪರೀಕ್ಷೆ ವಿರೋದಿಸಿ ಆಂದೋಲನ ನಡೆಸಲೇಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ. ಈ ಕೆಳಗೆ ಪತ್ರದ ಪೂರ್ಣಪಾಠವನ್ನು ನೀಡಲಾಗಿದೆ.

ಇವರಿಗೆ

ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ಕರ್ನಾಟಕ ಸರಕಾರ.

ಮಾನ್ಯರೇ,

ವಿಷಯ: ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇಯ ಅಲೆಯು ವಿಷಮಿಸುತ್ತಿರುವ ಹಾಗೂ ಭವಿಷ್ಯದಲ್ಲಿ ಮೂರನೇಯ ಅಲೆಯ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆರೋಗ್ಯ ಹಿತದೃಷ್ಟಿಯಿಂದ ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಗಂಭೀರವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಕುರಿತು.

2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ತನಕ ನಡೆಸಿರುವ online /offline ಪಾಠಗಳು ಕಾಲೇಜು ಹಂತದಲ್ಲಿ ನಡಸಿದ ಕಿರು ಪರೀಕ್ಷೆಗಳು ಹಾಗೂ ಮಧ್ಯಾವಧಿ ಪರೀಕ್ಷೆಗಳು ಮತ್ತು ವಿದ್ಯಾರ್ಥಿಗಳು ತಮ್ಮನ್ನು ತಾವು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೀತಿಯ ಆಧಾರದಲ್ಲಿ, ನಮ್ಮ ಜಿಲ್ಲೆಯ ಎಲ್ಲಾ ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳು, ವಿಷಯವಾರು ಉಪನ್ಯಾಸಕ ಸಂಘಗಳು ಮತ್ತು ಪ್ರಾಚಾರ್ಯರ ಸಂಘದ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ನಡೆಸಲು ನೀಡುವ ಪ್ರಾಯೋಗಿಕ ಸಲಹೆಗಳು.

ಪ್ರಾಯೋಗಿಕ ಸಲಹೆಗಳಿಗೆ ಕಾರಣಗಳು:

  1. ಕೋವಿಡ್-19ರ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ, ಸಾಮಾನ್ಯ ಪರಿಸ್ಥಿತಿಯಲ್ಲಿ ನಡೆಸುವ ರೀತಿಯಲ್ಲಿಯೇ ಪರೀಕ್ಷೆಗಳನ್ನು ನಡಸುವುದು ಅವೈಜ್ಞಾನಿಕವಾಗಿದೆ.
  2. Online ತರಗತಿಗಳೆಂಬ ಪರಿಕಲ್ಪನೆಯು ಕೋವಿಡ್-19ರ ತುರ್ತುಪರಿಸ್ಥಿತಿಯ ನಂತರ ಭಾರತದಲ್ಲಿ ವ್ಯಾಪಕವಾಗಿ ಪರಿಚಯವಾಯಿತು. ಆದರೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಇನ್ನೂ ಈ ಪರಿಕಲ್ಪನೆಗೆ ಹೊಂದಿಕೊಂಡಿಲ್ಲ ಹಾಗೂ online ತರಗತಿಗಳು ಯಾವತ್ತೂ offline ತರಗತಿಗಳಿಗೆ ಪರ್ಯಾಯವಲ್ಲ. ಮುಂದುವರಿದ ರಾಷ್ಟ್ರಗಳಲ್ಲಿಯೂ ಉನ್ನತ ವಿದ್ಯಾಭ್ಯಾಸ ಪಡೆಯಲು ಹೆಚ್ಚಾಗಿ online ತರಗತಿಗಳನ್ನು ನಡೆಸುತ್ತಾರೆಯೇ ಹೊರತು ನರ್ಸರಿಯಿಂದ 12ನೇ ತರಗತಿ ತನಕ offline ತರಗತಿಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚು ಮಹತ್ವವನ್ನು ನೀಡಿರುತ್ತಾರೆ.
  3. ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ನಗರ ಭಾಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಾಂತ್ರಿಕ, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ online ತರಗತಿಗಳಿಂದ ವಂಚಿತರಾಗಿರುತ್ತಾರೆ.
  4. ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು offline ತರಗತಿಗಳನ್ನು ಸಮರ್ಪಕವಾಗಿ ಬಳಸುವಲ್ಲಿ ವಿಫಲರಾಗಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 70 ಪಠ್ಯ ವಿಷಯಗಳನ್ನು 3ರಿಂದ 3.5 ತಿಂಗಳ ಕಾಲ ನಡೆದ Offline ತರಗತಿಗಳಲ್ಲಿ ಸಮರ್ಪಕವಾಗಿ ನಿರ್ವಹಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.
  5. ಕಳೆದ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಕಾಲೇಜು ಹಂತದಲ್ಲಿ ನಡೆಸಿರುವ ಕಿರು ಪರೀಕ್ಷೆ, ಮದ್ಯಾವಧಿ ಪರೀಕ್ಷೆ, ತರಗತಿ ಪರೀಕ್ಷೆಗಳಲ್ಲಿ ಕಳಪೆ ಸಾಧನೆಯನ್ನು ಮಾಡಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ.
  6. ಸಾಮಾನ್ಯ ಪರಿಸ್ಥಿತಿಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಇಲಾಖೆ ನಿಗದಿಪಡಿಸಿದ ನಿರ್ಧಿಷ್ಟ ಪರೀಕ್ಷಾ ಕೇಂದ್ರಗಳಲ್ಲಿ ನಡೆಸುವುದರಿಂದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಕೋವಿಡ್-19ರ ನಿಯಮಾನುಸಾರ ಅಂತರವನ್ನು ಕಾಪಾಡಿಕೊಂಡು ಪರೀಕ್ಷೆಗಳನ್ನು ನಡೆಸುವುದು ತುಂಬಾ ಕಷ್ಟ ಸಾಧ್ಯ.
  7. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನಿಗಧಿಪಡಿಸಿದ ನಿರ್ಧಿಷ್ಟ ಮೌಲ್ಯಮಾಪನ ಕೇಂದ್ರಗಳಲ್ಲಿ ಮಾತ್ರ ಮೌಲ್ಯಮಾಪನ ನಡೆಸಲು ಅವಕಾಶವಿರುವುದರಿಂದ ಉಪನ್ಯಾಸಕರು ಬೇರೆ ನಗರಗಳಿಗೆ ಸಂಚರಿಸಿ, ವಾಸ್ತವ್ಯವಿದ್ದು ಮೌಲ್ಯಮಾಪನ ನಡೆಸುವುದು ಕೋವಿಡ್-19ರ ಈ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯವಾಗಿದೆ.
  8. ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ತನಕ offline ತರಗತಿಗಳ ಮೂಲಕ ಉಪನ್ಯಾಸಕರ ಸಂಪರ್ಕದಲ್ಲಿದ್ದರೆ ಮಾತ್ರ ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಯಶಸ್ಸು ಸಿಗುತ್ತದೆ ಹೊರತು, ಈ ರೀತಿ ತಿಂಗಳುಗಳ ಕಾಲ ಲಾಕ್‍ಡೌನ್ ಮಾಡಿ ಪರೀಕ್ಷೆಗಳನ್ನು ನಡೆಸಿದಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ಭಾರಿಯ ಆಂಗ್ಲಭಾಷಾ ವಿಷಯ ಫಲಿತಾಂಶವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. offline ತರಗತಿಗಳ ಮೂಲಕ ಸಮರ್ಪಕವಾಗಿ ತರಗತಿಗಳನ್ನು ನಡೆಸಿದ್ದರೂ, ಲಾಕ್‍ಡೌನ್ ನಂತರ ಪರೀಕ್ಷೆಯನ್ನು ನಡಸಿರುವುದರಿಂದ ಉತ್ತಮ ಅಂಕಗಳನ್ನು ಪಡೆಯುವಲ್ಲಿ ವಿದ್ಯಾರ್ಥಿಗಳು ವಿಫಲರಾಗಿರುತ್ತಾರೆ ಹಾಗೂ ಅನುತ್ತೀರ್ಣರಾದ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಆಂಗ್ಲಭಾಷಾ ವಿಷಯದಲ್ಲಿ ಒಂದರಲ್ಲಿಯೇ ಅನುತ್ತೀರ್ಣಗೊಂಡಿರುವುದು ನಮಗೆಲ್ಲ ತಿಳಿದಿರುವ ಸಂಗತಿಯಾಗಿದೆ. ರಾಜ್ಯಮಟ್ಟದಲ್ಲಿ ಆಂಗ್ಲಭಾಷಾ ಶೇಕಡಾವಾರು ಫಲಿತಾಂಶವು ಬೇರೆ ವಿಷಯಗಳಿಗಿಂತ ಕನಿಷ್ಟವಾಗಿರುತ್ತದೆ.
  9. ಅತೀ ಪ್ರಮುಖವಾಗಿ ಸರಕಾರಿ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಕಾಪಾಡುವುದು ಮುಖ್ಯವಾಗಿರುತ್ತದೆ.

ಈ ಎಲ್ಲ ಕಾರಣಗಳಿಂದ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಸಾಮಾನ್ಯ ಪರಿಸ್ಥಿತಿಯಲ್ಲಿರುವಂತೆ ನಡೆಸುವುದು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.

ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ವಿಷಯವಾರು ಉಪನ್ಯಾಸಕರ ಸಂಘಗಳು ಮತ್ತು ಪ್ರಾಚಾರ್ಯರ ಸಂಘದ ವತಿಯಿಂದ ಈ ಕೆಳಗಿನ ಪ್ರಾಯೋಗಿಕ ಸಲಹೆಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ.

ಪ್ರಾಯೋಗಿಕ ಸಲಹೆಗಳು:

  1. ವಿದ್ಯಾರ್ಥಿಗಳ ಪರೀಕ್ಷಾ ಭಯ ಮತ್ತು ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಇಲಾಖೆಯು ಒಂದು ವಾರದೊಳಗೆ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ನಿರ್ಧಿಷ್ಟ ಪ್ರಶ್ನೆ ಕೋಶವನ್ನು ಅಥವಾ 4 ರಿಂದ 5 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡುವುದು. ಈ ಪ್ರಶ್ನೆ ಕೋಶ ಅಥವಾ ಮಾದರಿ ಪ್ರಶ್ನೆ ಪತ್ರಿಕೆಗಳ ಉತ್ತರವನ್ನು ಅಧ್ಯಯನ ಮಾಡಲು ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು ಅವರನ್ನು ಪರೀಕ್ಷೆಗೆ ತಯಾರು ಮಾಡುವುದು.
  2. ಈ ರೀತಿಯಾಗಿ ತಯಾರಿಸಿದ ಪ್ರಶ್ನೆಕೋಶ ಅಥವಾ 4 ರಿಂದ 5 ಮಾದರಿ ಪ್ರಶ್ನೆಪತ್ರಿಕೆಗಳಿಂದಲೇ ನಿಯಮಾನುಸಾರ ಪ್ರಶ್ನೆಗಳನ್ನು ಆಯ್ಕೆ ಮಾಡಿ ವಾರ್ಷಿಕ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ತಯಾರಿಸುವುದು. ಅಗತ್ಯ ಬಿದ್ದಲ್ಲಿ ಈ ರೀತಿಯ ಪ್ರಶ್ನೆ ಪತ್ರಿಕೆಗಳ ತಯಾರಿಗಾಗಿ ಕಂಪ್ಯೂಟರ್ ತಂತ್ರಾಂಶವನ್ನು ಬಳಸುವುದು.
  3. ಸಾಮಾನ್ಯ ಪರಿಸ್ಥಿತಿಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ರಾಜ್ಯಾದ್ಯಂತ ಇಲಾಖೆ ನಿಗಧಿಪಡಿಸಿದ ನಿರ್ಧಿಷ್ಟ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡಸುವುದರಿಂದ ಕೋವಿಡ್-19 SOPಯನ್ನು ಸಂಪೂರ್ಣವಾಗಿ ಪಾಲಿಸಿಕೊಂಡು ಅಂತರವನ್ನು ಕಾಯ್ದುಕೊಂಡು ಪರೀಕ್ಷೆಗಳನ್ನು ನಡಸುವುದು ಅತ್ಯಂತ ತ್ರಾಸದಾಯಕ ಕಾರ್ಯವಾಗಿದೆ. ಕೋವಿಡ್-19ರ ನಿಯಮಗಳನ್ನು ಪಾಲನೆ ಮಾಡಿಕೊಂಡು, ಕೋವಿಡ್-19ರ  ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡಗಟ್ಟುವ ನಿಟ್ಟಿನಲ್ಲಿ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ರೀತಿಯಲ್ಲಿಯೇ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ಪರೀಕ್ಷೆ ಬರೆಯಲು ಅನುವುಮಾಡಿಕೊಡುವುದು.
  4. ಜಿಲ್ಲಾ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಹಿರಿಯ ಅಥವಾ ಅನುಭವಿ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸಮಿತಿಯನ್ನು ರಚಿಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ನಿರ್ದೇಶನ ನೀಡುವುದು.
  5. ಈಗಾಗಲೇ ವಸತಿನಿಲಯಗಳು ಅಥವಾ ಪಿಜಿಗಳು ಅಥವಾ ಸಂಬಂಧಿಕರ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಊರಿಗೆ ತೆರಳಿದ್ದು ಈ ವಿದ್ಯಾರ್ಥಿಗಳಿಗೆ ಕಳೆದ ಬಾರಿಯಂತೆ ತಮ್ಮ ವಾಸಸ್ಥಾನದ ಹತ್ತಿರದ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವುದು. ಈ ಬಗ್ಗೆ ಅಗತ್ಯ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವುದು.
  6. ಪರೀಕ್ಷೆಯ ಎಲ್ಲಾ ಕಾರ್ಯಗಳಿಗೆ ಸ್ಥಳೀಯ ಸಿಬ್ಬಂದಿಗಳನ್ನು ಬಳಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆಯನ್ನು ನಡೆಸುವುದು.
  7. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕಾಲೇಜು ಹಂತದಲ್ಲಿ ನಡೆಸದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಿಷಯವಾರು ಮೌಲ್ಯಮಾಪನ ಕೇಂದ್ರಗಳನ್ನು ತೆರೆದು ಜಿಲ್ಲೆಯ ಎಲ್ಲಾ ವಿಷಯವಾರು ಉಪನ್ಯಾಸಕರಿಂದ ಈ ಹಿಂದಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾದರಿಯಲ್ಲಿಯೇ ಮೌಲ್ಯಮಾಪನವನ್ನು ನಡೆಸುವುದು.
  8. KCET ಪರೀಕ್ಷೆಗೆ ಈ ಒಂದು ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕವನ್ನು ಪರಿಗಣಿಸದಿರುವುದು.

ಈ ರೀತಿಯಾಗಿ 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೋವಿಡ್-19ರ ಕ್ಲಿಷ್ಟಕರ ಸನ್ನಿವೇಶದಲ್ಲಿ ವಿದ್ಯಾರ್ಥಿ ಕೇಂದ್ರಿತವಾಗಿ ನಡೆಸಲು ಮುಂದಾಲೋಚನೆ ಮಾಡುವಂತೆ ಈ ಮೂಲಕ ವಿನಂತಿ.

  ವಂದನೆಗಳೊಂದಿಗೆ,

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಷಯವಾರು ಉಪನ್ಯಾಸಕರ ಸಂಘಗಳು ಹಾಗೂ ಪ್ರಾಚಾರ್ಯರ ಸಂಘದ ಪರವಾಗಿ

ಉಮೇಶ್ ಎಂ ಕರ್ಕೇರ,

ಅಧ್ಯಕ್ಷರು

ಉಮೇಶ್ ಎಂ ಕರ್ಕೇರ.

9901431492

ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು

Leave a Reply