ಕಮ್ಯುನಿಸ್ಟ್ ಚಳುವಳಿಯ ಹಿತೈಷಿ ಕಾಂ.ಐತಪ್ಪ ಕುತ್ತಾರ್ ನಿಧನ

1 year ago

ಮಂಗಳೂರು: ಕಮ್ಯುನಿಸ್ಟ್ ಚಳುವಳಿಯ ಹಿತೈಷಿಗಳೂ, ಮುನ್ನೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ಕಾಂ.ಐತಪ್ಪ ಕುತ್ತಾರ್ ಧೀರ್ಘಕಾಲದ ಅನಾರೋಗ್ಯದಿಂದಾಗಿ 17-04-2025 ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಚಳುವಳಿಗೆ ಆಕರ್ಷಿತರಾಗಿದ್ದ ಐತಪ್ಪ ಅವರು ಅತ್ಯಂತ ಚುರುಕಿನವರಾಗಿದ್ದರು.1970ರ ದಶಕದಲ್ಲಿ ಕಾಂ.ಸುಶೀಲ ಗೋಪಾಲನ್ ರವರು ಭಾಗವಹಿಸಿದ್ದ ದೇರಳಕಟ್ಟೆಯ ಬ್ರಹತ್ ಬಹಿರಂಗ ಸಭೆಯ ಪ್ರಯುಕ್ತ ಆಯೋಜಿಸಲಾಗಿದ್ದ ಸಣ್ಣ ಮಕ್ಕಳ ಪಥಸಂಚಲನದಲ್ಲಿ ಐತಪ್ಪ ಮುಂಚೂಣಿಯ ಪಾತ್ರ ವಹಿಸಿದ್ದರು. ಯೌವ್ವನಾವಸ್ಥೆಯಲ್ಲಿ ಯುವಕರ ಮಧ್ಯೆ ಭಾರೀ ಪ್ರಭಾವವನ್ನು ಹೊಂದಿದ್ದ ಐತಪ್ಪರವರು ಯುವಜನ ನಾಯಕರಾಗಿ ಬೆಳೆದರು. DYFI ಸಂಘಟನೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿರುವುದು ಮಾತ್ರವಲ್ಲದೆ ಜಿಲ್ಲೆಯಲ್ಲಿ ಸಮಾಜಮುಖಿ ಚಟುವಟಿಕೆಯಲ್ಲಿ ತನ್ನದೇ ಪಾತ್ರವನ್ನು ವಹಿಸಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುನ್ನೂರು ಯುವಕ ಮಂಡಲದ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. BSNL ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ಅಲ್ಲಿನ ನೌಕರರ ಉತ್ತಮ ಬದುಕಿಗಾಗಿ ಯೂನಿಯನ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಕಾರ್ಮಿಕ ವರ್ಗದ ಚಳುವಳಿಯ ಮೇಲೆ ಅಪಾರ ಗೌರವವನ್ನು, ಎಲ್ಲಾ ಜನಪರ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದರು.ಸದಾ ಹಸನ್ಮುಖಿಯಾಗಿದ್ದು, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದ ಐತಪ್ಪರವರು ಮುನ್ನೂರು ಗ್ರಾಮದಲ್ಲಿ ಭಾರೀ ಜನಾನುರಾಗಿಯಾಗಿದ್ದರು. ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಎಡಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಲು ನಿರ್ಧಾರವನ್ನು ಕೂಡ ಕೈಗೊಂಡಿದ್ದರು.

ಒಟ್ಟಿನಲ್ಲಿ ಐತಪ್ಪರವರ ಅಕಾಲಿಕ ನಿಧನ ಮುನ್ನೂರು ಗ್ರಾಮದ ಎಡ ಚಳುವಳಿಗೆ ಭಾರೀ ನಷ್ಟವಾಗಿದೆ ಎಂದು CPIM ಉಳ್ಳಾಲ ವಲಯ ಸಮಿತಿಯು ತನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ.

ಕಾಂ.ಐತಪ್ಪರವರು ಪತ್ನಿ,ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Leave a Reply