ಬೆಂಗಳೂರು: ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ನಡೆಸಿರುವ ಧರಣಿಯನ್ನು ಕಾನೂನುಬಾಹಿರ ಎಂದು ಟೀಕಿಸಿರುವ ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದೆ.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲು ಅನುಮತಿ ಪಡೆಯಲಾಗಿದೆಯಾ ಎಂದು ಪ್ರಶ್ನಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಚುನಾವಣೆ ಸಮಯದಲ್ಲಿ ರಾಜಕೀಯ ಕಾರಣಕ್ಕಾಗಿ ಪ್ರತಿಭಟನೆ ನಡೆಸುವ ಮೂಲಕ ಸಿಎಂ ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸಲು ಇವರಿಗೆ ಅನುಮತಿ ಕೊಟ್ಟವರು ಯಾರು? ಇದು ಚುನಾವಣಾ ಆಯೋಗದ ನೀತಿ ಸಂಹಿತೆ ಉಲ್ಲಂಘನೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು.
ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ ಎಂದರು.
ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಹತ್ಯೆಯಂತಹ ಘಟನೆಗಳಿಂದ ಜನತೆ ರೊಚ್ಚಿಗೆದ್ದಿದ್ದು, ಅವರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ನವರು ವಿಧಾನಸೌಧದ ಆವರಣದಲ್ಲಿ ಬರ ಪರಿಹಾರದ ವಿಚಾರದಲ್ಲಿ ಪ್ರತಿಭಟನೆ ನಡೆಸಿದರು ಎಂದರು.
ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿಲ್ಲ, ನಿರ್ದೇಶನವನ್ನೂ ನೀಡಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಸಂಭ್ರಮ ಆಚರಿಸುತ್ತಿದೆ. ಚುನಾವಣಾ ಆಯೋಗದ ತಡೆ ಇದ್ದ ಕಾರಣಕ್ಕೆ ಕೇಂದ್ರ ಪರಿಹಾರ ಬಿಡುಗಡೆ ಮಾಡಿರಲಿಲ್ಲ. ಸುಪ್ರೀಂಕೋರ್ಟ್ನಲ್ಲಿಈ ವಿಚಾರ ಬಂದಾಗ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಕೇಳುತ್ತೇವೆ ಎಂದು ಹೇಳಿತ್ತು. ಆ ಬಳಿಕ ಅನುಮತಿ ಕೇಳಿತ್ತು. ಆಯೋಗ ಅನುಮತಿ ನೀಡಿದೆ. ಅದನ್ನು ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ತಿಳಿಸಿದೆ. ಇದರಲ್ಲಿ ಕಾಂಗ್ರೆಸ್ನದು ಒಂದು ಕಾಳಿನಷ್ಟೂ ಪ್ರಯತ್ನವೂ ಇಲ್ಲ ಎಂದರು.
ಕೇಂದ್ರ ಸರ್ಕಾರ ಎಸ್ಡಿಆರ್ಎಫ್ ಅಡಿ ಈಗಾಗಲೇ 700 ಕೋಟಿ ರೂಪಾಯಿ ಕೊಟ್ಟಿದೆ. ಆ ಹಣದಲ್ಲೇ 2,000 ರೂಪಾಯಿ ಪರಿಹಾರ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣದ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ? ಈ ₹700 ಕೋಟಿಯಲ್ಲಿ ಶೇ 25ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕು ಎಂದರು.
ಸಾಮಾನ್ಯವಾಗಿ ಬರಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಂದ ಹಣ ಬಂದ ಬಳಿಕವೇ ಪರಿಹಾರವನ್ನು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಹಿಂದಿನಿಂದಲೂ ಇದೇ ಪರಂಪರೆ ನಡೆದುಕೊಂಡು ಬಂದಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತು. ಅದಕ್ಕೆ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಇದರಿಂದಾಗಿ ಸರ್ಕಾರದ ಖಜಾನೆ ಖಾಲಿ ಆಗಿದೆ. ಯಾವುದೇ ಗ್ಯಾರಂಟಿ ಜನರಿಗೆ ತಲುಪಿಲ್ಲ. ಆದ್ದರಿಂದ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಿರಂತರ ಮಾಡುತ್ತಲೇ ಬಂದಿದೆ ಎಂದು ದೂರಿದರು.
ಯಾವುದೇ ಅಭಿವೃದ್ಧಿಗೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಗ್ಯಾರಂಟಿಗಳಲ್ಲಿ ಎಲ್ಲರಿಗೂ ಅದರ ಪ್ರಯೋಜನ ಸಿಗುತ್ತಿಲ್ಲ, ತೆರಿಗೆ ಸಂಗ್ರಹಣೆ ಕಡಿಮೆ ಆಗಿದೆ. ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಹಾಲಿನ ಸಬ್ಸಿಡಿ 700 ಕೋಟಿಯನ್ನು ರೈತರಿಗೆ ಕೊಟ್ಟಿಲ್ಲ. ಚುನಾವಣೆ ಮುಗಿದ ಬಳಿಕ ನೌಕರರಿಗೆ ಸಂಬಳ ಪಾವತಿ ಮಾಡಲು ಹಣವಿಲ್ಲ, ನೌಕರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.




