ಬೆಂಗಳೂರು: ಪಕ್ಷದಲ್ಲಿನ ಕೆಲವು ವಿದ್ಯಮಾನಗಳ ಬಗ್ಗೆ ಬೇಸರಗೊಂಡು ಪಕ್ಷ ತೊರೆಯಲು ಮುಂದಾಗಿದ್ದ ಸಚಿವ ಸೋಮಣ್ಣ, ಇದೀಗ ಎಲ್ಲಾ ಗೊಂದಲಗಳು ಬಗೆಹರಿದಿದ್ದು,ಪಕ್ಷದ ಬೆಳವಣಿಗೆಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ದೆಹಲಿಯಿಂದ ಹಿಂತಿರುಗಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಅಸಮಾಧಾನಗಳನ್ನು ನಮ್ಮ ದೆಹಲಿ ನಾಯಕರು ಸರಿಪಡಿಸಿದ್ದಾರೆ. ಎಲ್ಲಾ ಗೊಂದಲಗಳು ಬಗೆಹರಿದಿವೆ. ನಮ್ಮೊಳಗಿನ ಆಂತರಿಕ ಕಲಹಗಳಿಗೆ ತೆರೆ ಎಳೆದು ಪಕ್ಷ ಕಟ್ಟುವಂತೆ ಸೂಚಿಸಿದ್ದಾರೆ ಎಂದರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ನನ್ನ ಬಗ್ಗೆ ಏನಾದರೂ ಮಾತಾಡಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ದೇವರು ಒಳ್ಳೆಯದನ್ನೇ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಕೆಲವು ಬೆಳವಣಿಗೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಅವರು ಕೂಡ ಪರಿಹರಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಇನ್ನು ಯಾವ ಸಮಸ್ಯೆ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಯಡಿಯೂರಪ್ಪ ನಮ್ಮೆಲ್ಲರಿಗೂ ನಾಯಕರು. ಕೇವಲ ವಿಜಯೇಂದ್ರ ಒಬ್ಬರಿಗೆ ಅವರು ನಾಯಕರಲ್ಲ. ವಿಜಯೇಂದ್ರ ಏನು ಹೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಪಕ್ಷ ತೊರೆಯುವ ಅವಶ್ಯಕತೆ ನನಗಿಲ್ಲ ಎಂದು ಸ್ಪಷ್ಪಪಡಿಸಿದರು.
ಯಡಿಯೂರಪ್ಪನವರಿಗೆ ಯಡಿಯೂರಪ್ಪ ಸಾಟಿ, ಸೋಮಣ್ಣನಿಗೆ ಸೋಮಣ್ಣನೇ ಸಾಟಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಯಡಿಯೂರಪ್ಪ ಕೂಡ ಪ್ರಮುಖರು. ಅವರ ಬಗ್ಗೆ ನಾನು ಎಂದಿಗೂ ಅಪಸ್ವರ ಎತ್ತಿಲ್ಲ. ವಿಜಯೆಂದ್ರ ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಬಿಎಸ್‍ವೈ ಗಮನಿಸಲಿ ಎಂದು ಮನವಿ ಮಾಡಿದರು.
ಯಡಿಯೂರಪ್ಪರ ಹೋರಾಟ ಬೇರೆ. ನನ್ನ ಹೋರಾಟ ಬೇರೆ. ಆದರೆ ವಿಜಯೇಂದ್ರ ಅವರ ಬೆಳವಣಿಗೆಗೆ ಅವರು ಏನು ಮಾಡುತ್ತಾರೆ ಎಂಬುದನ್ನು ಹೇಳಿಕೊಂಡರೆ ಉತ್ತಮ. ನನಗೆ 72 ವರ್ಷ, ವಿಜಯೇಂದ್ರ ಅವರಿಗಿಂತ ದೊಡ್ಡ ಮಗ ಇದ್ದಾನೆ ಎಂದು ನಾನು ಹೇಳಿದ್ದೆ. ಯಡಿಯೂರಪ್ಪ ಹೆಸರು ಬಿಟ್ಟು ತಮ್ಮ ದೂರದೃಷ್ಟಿ ಏನು ಎಂದು ವಿಜಯೇಂದ್ರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಈ ನಡುವೆ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ವಿ.ಸೋಮಣ್ಣ ಅವರನ್ನು ಎಂದೂ ಕಡೆಗಣಿಸಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಕೂತು ಪರಿಹರಿಸಿ ಕೊಳ್ಳಲಾಗುವುದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ವರಿಷ್ಠರು ಸೋಮಣ್ಣನವರನ್ನು ದೆಹಲಿಗೆ ಕರೆದು ಮಾತನಾಡಿದ್ದಾರೆ, ಎಲ್ಲವೂ ಸರಿಹೋಗುತ್ತದೆ, ಯಾವುದೇ ರೀತಿಯಲ್ಲಿ ಗೊಂದಲವಿಲ್ಲ. ಸೋಮಣ್ಣ ಅವರನ್ನು ನಾನು ಭೇಟಿ ಮಾಡದೆ ಮೂರು ತಿಂಗಳಾಯಿತು. ಯಾರು ಯಾರನ್ನೂ ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ, ವಿಜಯೇಂದ್ರ ಕೂಡ ಕೆಲಸ ಮಾಡುತ್ತಿದ್ದಾರೆ, ಸೋಮಣ್ಣ ಕೂಡ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.




