ಕಾಂಗ್ರೆಸ್ ಭ್ರಷ್ಟರು ಎನ್ನುವ ರಾಜ್ಯ ಬಿಜೆಪಿಯವರೇ ನಿಮ್ಮ ಇತಿಹಾಸ ನೆನಪಿರಲಿ

3 years ago

ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪ್ರಧಾನ ಮಂತ್ರಿಗಳಿಂದ ಹಿಡಿದು ಬಿಜೆಪಿಯ ಎಲ್ಲ ನಾಯಕರು ರಾಜ್ಯದ ಜಿಲ್ಲೆ, ಕ್ಷೇತ್ರಗಳು ಮತ್ತು ಮುಂದಿನ ದಿನಗಳಲ್ಲಿ ಪಂಚಾಯ್ತಿ ಮಟ್ಟಕ್ಕೂ ಪಾದಯಾತ್ರೆ, ರೋಡ್ ಷೋಗಳು, ಬಹಿರಂಗ ಸಭೆಗಳು, ಸಹಸ್ರಾರು ಕೋಟಿಗಳ ಯೋಜನೆಗಳ ಶಂಕುಸ್ಥಾಪನೆ ಮಾಡುತ್ತಾ ಜೊತೆಗೆ ಪದೇ ಪದೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರಿಗಳೆಂದು, ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದ ರೀತಿಯಲ್ಲಿ ಪುಂಕಾನುಪುಕವಾಗಿ ಅಬ್ಬರಿಸುತ್ತಿರುವವರಿಗೆ ಸ್ವಲ್ಪ ಇತಿಹಾಸ ನೆನಪು ಮಾಡಿಕೊಡಬೇಕಾಗಿದೆ.

1947 ರಿಂದ 1952ರವರೆಗೆ ಮುಖ್ಯಮಂತ್ರಿಗಳಾಗಿದ್ದ ಕೆ.ಸಿ. ರೆಡ್ಡಿಯವರ ಮೇಲಾಗಲಿ ಅಥವಾ ಅವರ ಸಂಪುಟದ ಸಹೋದ್ಯೋಗಿಗಳ ಮೇಲಾಗಲಿ ಯಾವ ಭ್ರಷ್ಟಾಚಾರದ ಆಪಾದನೆಗಳಿತ್ತು. ಕೆಂಗಲ್ ಹನುಮಂತಯ್ಯನವರ ವ್ಯಕ್ತಿತ್ವವನ್ನು ಹಾಳು ಮಾಡುವಂತಹ ಅಥವ ಅವರ ಸಾರ್ವಜನಿಕ ಜೀವನವನ್ನು ಪ್ರಶ್ನಿಸುವಂತಹ ವಿಚಾರಗಳು ತಮ್ಮಲ್ಲಿ ಇದೆಯೇ? ಕಡಿದಾಳು ಮಂಜಪ್ಪನವರಂತಹ ಪ್ರಾಮಾಣಿಕರು ನಿಮ್ಮ ಪಕ್ಷದಲ್ಲಿ ಯಾರಾದರೂ ಇದ್ದಾರೆಯೇ? ಎಸ್.ಆರ್. ಕಂಠಿರವರ ಬದ್ಧತೆ ತಮಗೆ ಅರಿವಿದೆಯೇ? ಬಿ.ಡಿ. ಜತ್ತಿಯವರ ಮೇಲೆ ಯಾವ ಮಾತುಗಳು ಕೇಳಿಬಂದಿತ್ತು, ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧ ಬದುಕಿಗೆ ಮತ್ತೊಂದು ಹೆಸರಾದ ನಿಜಲಿಂಗಪ್ಪನವರ ಮೇಲೆ ಯಾವ ಆರೋಪವಿತ್ತು?

ದೇವರಾಜ ಅರಸುರವರ ಮೇಲೆ ಬದುಕಿದಷ್ಟು ದಿನವು ದೂರಿನ ಸುರಿಮಳೆಗಳನ್ನು ಮಾಡಿ ಭ್ರಷ್ಟರೆಂದು ಹೀಯಾಳಿಸಿ ಅವರು ಸತ್ತ ನಂತರ ನಿಮ್ಮ ಪಕ್ಷದ ಜಾಹಿರಾತಿನಲ್ಲಿ ಅವರ ಭಾವಚಿತ್ರವನ್ನು ಬಳಸುವ ನೀವು ಎಷ್ಟರ ಮಟ್ಟಿಗೆ, ಪ್ರಾಮಾಣಿಕರಿದ್ದೀರಿ? ಅರಸುರವರ ಅಂತ್ಯದ ಕಾಲದ ಆರ್ಥಿಕ ಪರಿಸ್ಥಿತಿಯ ನೆನಪಿದೆಯೇ?

ಬಂಗಾರಪ್ಪನವರ ಮೇಲೆ ಕೆಲಸಕ್ಕೆ ಬಾರದ ಕ್ಲಾಸಿಕ್ ಕಂಪ್ಯೂಟರ್ ಆರೋಪವನ್ನು ಮಾಡಿ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ದಂಡ ವಿಧಿಸಿದ್ದು ನೆನಪಿದೆಯೇ?

ವೀರೇಂದ್ರ ಪಾಟೀಲರ ವ್ಯಕ್ತಿತ್ವವನ್ನು ಹೋಲುವ ನಾಯಕರು ನಿಮ್ಮಲ್ಲಿ ಯಾರಿದ್ದಾರೆ. ಎಸ್‌.ಎಂ. ಕೃಷ್ಣರವರ ಮೇಲೆ ಯಾವ ಆರೋಪವನ್ನು ಮಾಡುತ್ತೀರಿ. ಈಗಂತೂ ನೀವು ಅವರ ಮೇಲೆ ಮಾತನಾಡುವ ಹಾಗಿಲ್ಲ. ಏಕೆಂದರೆ ಅವರು ನಿಮ್ಮ ಪರವಾದ ಧ್ವನಿಯನ್ನು ತೆಗೆಯುತ್ತಿದ್ದಾರೆ. ಇನ್ನು ಗುಂಡೂರಾಯರ ಮೇಲೆ ಯಾವ ಆರೋಪಗಳು ಸಾಬೀತಾಗಿವೆ?

ಪದೇ ಸಿದ್ದರಾಮಯ್ಯನವರ ಸರ್ಕಾರದ ಬಗ್ಗೆ ಮಾತನಾಡುವ ನೀವು ನಿಮ್ಮಲ್ಲಿ ದಾಖಲೆಗಳು ಇರುವುದೇ ಸತ್ಯವಾದರೆ ನಿಮ್ಮ ಆರೋಪಗಳಿಗೆ ಹುರುಳಿದಿದ್ದರೆ, ನೀವೇ ಸಾಕಿರುವ ಸಿ.ಬಿ.ಐ., ಇ.ಡಿ. ಅಸ್ತ್ರಗಳನ್ನೇಕೆ ಬಳಸುತ್ತಿಲ್ಲ?

ಐದು ವರ್ಷದ ಅವಧಿಯಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಯಾವ ಮಂತ್ರಿಗಳು ಜೈಲಿಗೆ ಹೋದರು? ಯಾರ ಮೇಲೆ ಯಾವ ಯಾವ ತನಿಖಾ ಸಂಸ್ಥೆಗಳಲ್ಲಿ ಆರೋಪಗಳು ಸಾಬೀತಾಗಿವೆ? ಎಂಬುದನ್ನು ಬಹಿರಂಗಪಡಿಸಿ.

ಪುರಾಣ ಹೇಳುವ ಬಿ.ಜೆ.ಪಿಯವರು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯವರು ಸರೆಮನೆಗೆ ಹೋದ ದಾಖಲೆಯನ್ನು ನಿರ್ಮಿಸಿದವರು ನೀವು .ಚೆಕ್ ಮೂಲಕ ಲಂಚವನ್ನು ಪಡೆದ ಪ್ರವೀಣರು, ಅತ್ಯಾಚಾರದ ಪ್ರಕರಣದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪುಣ್ಯಾತ್ಮರು ಯಡಿಯೂರಪ್ಪನವರ ಸರ್ಕಾರದಲ್ಲಿದ್ದವರು.

ಜನಾರ್ದನ ರೆಡ್ಡಿ, ಕಟ್ಟಾಸುಬ್ರಮಣ್ಯಂ ನಾಯ್ಡು ಹೀಗೆ ಅನೇಕ ಮಂತ್ರಿಗಳು ಕೃಷ್ಣ ಜನ್ಮಸ್ಥಾನದಲ್ಲಿ ಅತಿಥಿಗಳಾಗಿದ್ದದ್ದು ಬಿ.ಜೆ.ಪಿ. ಸರ್ಕಾರದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಸಂಪುಟದ ಅನೇಕ ಸದಸ್ಯರು, ಅವರ ಸುಪುತ್ರರು, ಬಿ.ಜೆ.ಪಿ.ಯ ಶಾಸಕರು ಮೊಕದ್ದಮೆಗಳನ್ನು ಎದುರಿಸಿ ಜಾಮೀನು ಪಡೆದುಕೊಂಡು ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ.

ಇತ್ತೀಚೆಗೆ ತಾನೇ ಬಿ.ಜೆ.ಪಿ.ಯ ಶಾಸಕರೊಬ್ಬರ ಮನೆಯಲ್ಲಿ ಕೋಟಿ ಕೋಟಿ ನೋಟಿನ ಕಂತೆಗಳು ಅವರ ಪುತ್ರನ ಕಮೀಷನ್ ಸ್ವರೂಪದಲ್ಲಿ ಶೇಖರಣೆಯಾಗಿರುವುದನ್ನು ಕಂಡಂತಹ ಕನ್ನಡಿಗರ ಕಣ್ಣುಗಳು ಕುರುಡಾಗಿಲ್ಲ.

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಗುತ್ತಿಗೆದಾರರು 40 ಕಮೀಷನ್‌ ಆರೋಪದಿಂದ ಹಿಡಿದು, ಪಿಎಸ್‌ಐ ಸ್ಕ್ಯಾಮ್, ಬಿಟ್ ಕಾಯಿನ್ ಹಗರಣ, ವಿಧಾನಸೌಧದಲ್ಲಿ ಹಣ ಸಿಕ್ಕಿದ ಕಥೆ, ಅತ್ಯಾಚಾರಿಗಳ ಪುರಾಣ, ಅಸಭ್ಯ ನಡವಳಿಕೆಗಳ ಹತ್ತಾರು ಸಂಗತಿಗಳು ಹಸಿ ಹಸಿಯಾಗಿದ್ದರೂ ಅದ್ಯಾವ ಬಾಯಿಯಲ್ಲಿ ಬಿ.ಜೆ.ಪಿ.ಯ ನಾಯಕರು ಕಾಂಗ್ರೆಸನ್ನು ದೂಷಿಸುತ್ತಾ ತಾವು ಸತ್ಯ ಹರಿಶ್ಚಂದ್ರನ ಪ್ರತಿರೂಪಗಳೆಂದು ನಾಚಿಕೆಯಿಲ್ಲದೆ ವೇದಿಕೆಗಳ ಮೇಲೆ ಮಾತನಾಡುವ ನಾಯಕರು ಮಾತಾಡುತ್ತಾರೆ?

ಇಂತಹವರನ್ನು ಕಂಡಾಗ ಎಂತವರಿಗೂ ಸಹ ಆಕ್ರೋಶ, ಬರದಿರಲು ಸಾಧ್ಯವಿಲ್ಲ. ನಿಜಕ್ಕೂ ಬಿ.ಜೆ.ಪಿ.ಯವರು ಮತ್ತು ಯಡಿಯೂರಪ್ಪನವರ ಮಂತ್ರಿ ಮಂಡಲ ಹಾಗೂ ಬೊಮ್ಮಾಯಿಯವರ ಸಂಪುಟದ ಸದಸ್ಯರೆಲ್ಲರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸಮ್ಮುಖದಲ್ಲಿ ನಿಂತು ತಾವು ಗಳಿಸಿರುವ ಹಣವೆಲ್ಲಾ ಬೆವರು ಸುರಿಸಿ ದುಡಿದ ಮೂಲದಿಂದ ಬಂದಿರುವುದೆಂದು ಪ್ರಮಾಣ ಮಾಡಿ ಬಿಟ್ಟರೆ ಇನ್ನು ಮುಂದೆ ಎಂದೂ ಇವರ ಪ್ರಾಮಾಣಿಕತೆಯನ್ನು ಯಾರು ಪ್ರಶ್ನಿಸುವುದಿಲ್ಲ. ಬಿಜೆಪಿಯ ಒಬ್ಬೊಬ್ಬ ನಾಯಕರು ಎಷ್ಟು ಕೊಳ್ಳೆ ಹೊಡೆದಿದ್ದಾರೆ? ಅವರು ಬದುಕುತ್ತಿರುವ ರೀತಿ ಗಮನಿಸಿದಷ್ಟು ಮೂರ್ಖರು ನಾಡಿನ ಜನರೆಲ್ಲ ಎಂಬುದು ಅರಿವಿರಲಿ.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply