ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಇದೀಗ ಔತಣ ಕೂಟದ ರಾಜಕೀಯ ಆರಂಭಗೊಂಡಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಶಾಸಕರು ಹಾಗೂ ಮಂತ್ರಿಗಳ ಸಭೆ ಕರೆದಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನದ ನಂತರ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಂತ್ರಿಮಂಡಲ ವಿಸ್ತರಣೆ ನಡೆಯಲಿದೆ ಎಂಬ ಚರ್ಚೆಗಳು ಆರಂಭಗೊಂಡಿರುವ ಬೆನ್ನಲ್ಲೇ ಪರಮೇಶ್ವರ್ ಕರೆದಿರುವ ಔತಣಕೂಟ ಕುತೂಹಲ ಕೆರಳಿಸಿದೆ.
ಇದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ ಬೆನ್ನಲ್ಲೇ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿದೆ. ಪಕ್ಷದ ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ನಾಳೆ ತಾವು ಆಯೋಜಿಸಿದ್ದ ಔತಣಕೂಟವನ್ನು ಮುಂದೂಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಕಳೆದ ವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನಡೆಸಿದ ಔತಣ ಕೂಟ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಪರಮೇಶ್ವರ್ ಅವರು ನಡೆಸಲು ಉದ್ದೇಶಿಸಿದ್ದ ಕೂಟ ಮುಖ್ಯಮಂತ್ರಿ ಹುದ್ದೆಗಾಗಿ ನಡೆಸುತ್ತಿರುವ ಲಾಭಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಡುವೆ ಅಧಿಕಾರ ಹಂಚಿಕೆ ಸೂತ್ರ ಏರ್ಪಟ್ಟಿದ್ದು, ಮೊದಲ ಎರಡೂವರೆ ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿದ ನಂತರ ಮತ್ತೊಂದು ಅವಧಿಗೆ ಬೇರೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಿದೆ. ಈ ಹುದ್ದೆಯನ್ನು ತಮಗೆ ನೀಡಬೇಕು ಎಂದು ಪರಮೇಶ್ವರ್ ಇದೀಗ ಲಾಭಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಇದಕ್ಕಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲು ತಮ್ಮ ನಿವಾಸದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಂತ್ರಿಗಳು ಹಾಗೂ ಶಾಸಕರಿಗೆ ಔತಣ ಕೂಟ ಏರ್ಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ಔತಣಕೂಟಗಳಿಂದ ರಾಜ್ಯ ಕಾಂಗ್ರೆಸ್ಸಿನಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ಸಭೆಗಳಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.
ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ ಕೆ ಸುರೇಶ್, ಒಂದು ಪಕ್ಷದ ಶಾಸಕರು ಮತ್ತು ಮಂತ್ರಿಗಳು ಒಟ್ಟಾಗಿ ಕುಳಿತು ಊಟ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ವಿಶೇಷ ಸಂದರ್ಭಗಳಲ್ಲಿ ಸಚಿವರು, ನಾಯಕರು ಒಟ್ಟಿಗೆ ಸೇರಿ ಔತಣಕೂಟ ನಡೆಸುವುದು ಸಾಮಾನ್ಯ. ಇದಕ್ಕೆ ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಪರಮೇಶ್ವರ್ ಅವರು ನಮ್ಮ ಹಿರಿಯ ನಾಯಕರು, ಗೃಹಮಂತ್ರಿಗಳು. ಅವರಿಗೆ ತಮ್ಮದೇ ಆದ ಒತ್ತಡಗಳಿವೆ. ಅವರ ಸಮುದಾಯದ ಶಾಸಕರು ಅವರ ಮುಂದೆ ಕೆಲವು ಬೇಡಿಕೆ ಇಟ್ಟಿರಬಹುದು. ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಪೂರೈಸಲು ಚರ್ಚೆ ಮಾಡಬಹುದು. ಮತ್ತೊಂದು ಕಾಂತರಾಜು ಅವರ ವರದಿ ಬಗ್ಗೆ ಚರ್ಚೆ ಆರಂಭವಾಗಿವೆ. ಈ ಬಗ್ಗೆ ಚರ್ಚೆ ನಡೆಸಲು ಸಭೆ ಸೇರುವುದು ಸಾಮಾನ್ಯ ಎಂದರು.
ಈ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಸತೀಶ್ ಜಾರಕಿಹೊಳಿ ಅವರ ಡಿನ್ನರ್ ಮೀಟಿಂಗ್ ಆಯ್ತು ಈಗ ಡಾ.ಪರಮೇಶ್ವರ್ ಅವರ ಸರದಿ! ಎಂದಿದ್ದಾರೆ.
ಒದ್ದು ಅಧಿಕಾರ ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ಡಿ.ಕೆ.ಶಿವಕುಮಾರ್ ಅವರು ಅಬ್ಬರಿಸಿದಾಗಿನಿಂದ ಕೆರಳಿ ಕೆಂಡವಾದಂತಿರುವ ಅವರ ವಿರೋಧಿ ಬಣ, ಅದು ಹೇಗೆ ಒದ್ದು ಕಿತ್ತುಕೊಳ್ಳುತ್ತಾರೋ ನೋಡೇ ಬಿಡೋಣ ಎಂದು ಸವಾಲು ಹಾಕಿದಂತೆ ಡಿನ್ನರ್ ಮೀಟಿಂಗ್ ಗಳ ಮೇಲೆ ಮೀಟಿಂಗ್ ಮಾಡುತ್ತಿದ್ದಾರೆ ಎಂದಿದ್ದಾರೆ.
ಒಟ್ಟಿನಲ್ಲಿ @INCKarnataka ಪಕ್ಷದ ಡಿನ್ನರ್ ಪಾಲಿಟಿಕ್ಸ್ ನ winner ಯಾರೋ ಗೊತ್ತಿಲ್ಲ, ಆದರೆ loser ಮಾತ್ರ ಕರ್ನಾಟಕ. ಯಾರು ಯಾರಿಗೆ ಒದೆಯುತ್ತಾರೋ, ಯಾರು ಯಾರ ಕೈಯಲ್ಲಿ ಒದ್ದಿಸಿಕೊಳ್ಳುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಅಭಿವೃದ್ಧಿ ಇಲ್ಲದೆ ಸೊರಗುತ್ತಿರುವ ಕನ್ನಡಿಗರ ಒದ್ದಾಟ ಮಾತ್ರ ತಪ್ಪಿದ್ದಲ್ಲ ಎಂದಿದ್ದಾರೆ.



