ಉತ್ತರ ಭಾರತೀಯ ಕಾರ್ಮಿಕರ ರಕ್ಷಣೆಗೆ ಸಿಐಟಿಯು ಒತ್ತಾಯ

3 months ago

ಉತ್ತರ ಭಾರತೀಯ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಎಂದು ಆರೋಪಿಸಿ ಜನಾಂಗೀಯ ಧಾಳಿ ನಡೆಸಿ ಗುಂಪು ಹತ್ಯೆಗೆ ಯತ್ನಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳೂರು: ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಬಳಿ ಉತ್ತರ ಭಾರತದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ  ಜನಾಂಗೀಯ ಹಲ್ಲೆಯನ್ನು ಸಿಐಟಿಯು ದ.ಕ ಜಿಲ್ಲಾ ಸಮಿತಿ ಖಂಡಿಸಿದೆ.

ಸಂಘ ಪರಿವಾರ ದೇಶದಲ್ಲಿ ಹಬ್ಬಿಸುವ ಸುಳ್ಳು ಸುದ್ದಿಗಳು ಯಾವ ರೀತಿಯಲ್ಲಿ ಸಂಘಿ ಮನಸ್ಥಿತಿಯ ತಳಮಟ್ಟದ ಕಾರ್ಯಕರ್ತರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಕಾವೂರಿನ ಘಟನೆ ಸಾಕ್ಷಿಯಾಗಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಬಾಂಗ್ಲಾದೇಶಿಗರು ಭಾರತದೊಳಗೆ ನುಸುಳಿ ಕೊಂಡಿದ್ದಾರೆ ಎಂಬ ವಿಷಯವನ್ನೇ ರಾಜಕೀಯ ಅಸ್ತ್ರ ಮಾಡಿಕೊಂಡಿದ್ದ ಬಿಜೆಪಿಗೆ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಾಗ್ಯೂ ಬಾಂಗ್ಲಾ ಗೇಟಿಗೆ ಬೀಗ ಹಾಕಲು ಸಾಧ್ಯವಾಗದ ಬಿಜೆಪಿಗರಿಗೆ  ಉತ್ತರ ಭಾರತೀಯ ಮುಸ್ಲಿಂ ಕಾರ್ಮಿಕರ ಮೇಲೆ ಪೂರ್ವಗ್ರಪೀಡಿತರಾಗಿ ಧಾಳಿ ಮಾಡುತ್ತಿರುವುದರ ಹಿಂದೆ  ಪೂರ್ವಯೋಜಿತ ಷಡ್ಯಂತ್ರ  ಇದೆಯೋ ಎಂಬ ಅನುಮಾನ ಮೂಡುತ್ತಿದೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಹೇಳಿದ್ದಾರೆ.

ಈ ವಿಷಯ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉತ್ತರ ಭಾರತೀಯರ ಮಾನವ ಶ್ರಮವನ್ನು ಜಿಲ್ಲೆಯ ಕೈಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರವು ಗಾಢವಾಗಿ ಅವಲಂಬಿಸಿದೆ   ಉತ್ತರ ಭಾರತೀಯ ಕಾರ್ಮಿಕರಿಲ್ಲದೆ  ಜಿಲ್ಲೆಯ ಅನೇಕ ಕೈಗಾರಿಕೆ, ಉದ್ಯಮಗಳು ನಡೆಸಲು ಸಾಧ್ಯವಿಲ್ಲದಷ್ಟು ಅನಿವಾರ್ಯ ಪರಿಸ್ಥಿತಿ ಇರುವಾಗ ವಲಸೆ ಕಾರ್ಮಿಕರ ಮೇಲಿನ ಧಾಳಿ ಜಿಲ್ಲೆಯ ಆರ್ಥಿಕ ಮತ್ತು ಸೌಹಾರ್ದ ಪರಿಸ್ಥಿತಿಯನ್ನು ಹದಗೆಡಿಸಲಿದೆ ಎಂದಿದ್ದಾರೆ.

ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಳೂರು ಬಳಿ ಉತ್ತರ ಭಾರತೀಯ ಕಾರ್ಮಿಕನ ಮೇಲೆ ಜನಾಂಗೀಯ ಧಾಳಿ ನಡೆಸಿದ ಹಲ್ಲೆಕೋರರನ್ನು ಪೊಲೀಸರು ಕೂಡಲೇ  ಬಂಧಿಸಬೇಕು ಸರಕಾರವೂ ಕೂಡ ಈ ಪ್ರಕಾರಣವನ್ನು ಗಂಭೀರ ವಾಗಿ ಪರಿಗಣಿಸಿ ಉತ್ತರ ಭಾರತೀಯ ವಲಸೆ ಕಾರ್ಮಿಕರನ್ನು ರಕ್ಷಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Leave a Reply