ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕು
ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಕಲಿಕೆಯ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿ
ಹಾಸನ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಕಲಿಕೆಯ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಹೇಳಿದರು.
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಬಾಲಕಿಯರ ಸರ್ಕಾರಿ ವಿಭಜಿತ ಪ್ರೌಢಶಾಲೆಯಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಯ ಮಕ್ಕಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಅವರು, ಪ್ರತಿಯೊಂದು ಮಗುವಿಗೂ ಪ್ರಾಥಮಿಕ ಶಿಕ್ಷಣ ಕಡ್ಡಾಯ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ ಎಂದರು.
ಮಕ್ಕಳ ಸುರಕ್ಷತೆ ಬಹುಮುಖ್ಯ. ಬಾಲ್ಯವಿವಾಹ, ಬಾಲ ಗರ್ಭಿಣಿ, ಪೋಕ್ಸೋ ಕಾಯ್ದೆ ಬಗ್ಗೆ ತಿಳುವಳಿಕೆ ಇರಬೇಕು ಎಂದರು.
ಶಿಸ್ತು ಮತ್ತು ಶ್ರದ್ಧೆಯಿಂದ ಕಲಿಯುವುದನ್ನು ಅಳವಡಿಸಿಕೊಳ್ಳಬೇಕು. 18 ವರ್ಷದೊಳಗಿನ ಪ್ರತಿಯೊಂದು ಮಕ್ಕಳು ಮೊಬೈಲ್ ಬಳಕೆ ಮಾಡಬಾರದು. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕು. ಶಿಕ್ಷಕರು ಸಹ ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದರು.
ಶಿಸ್ತುಬದ್ಧ ಜೀವನಕ್ಕೆ ಮೊದಲ ಆದ್ಯತೆ ನೀಡಬೇಕು. ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಅತ್ಯುತ್ತಮ ವ್ಯಕ್ತಿಯಾಗಬಹುದು. ದೇಶವನ್ನು ಅರಿತುಕೊಳ್ಳಲು ಮತ್ತು ಸರಿಯಾದ ರೀತಿಯಲ್ಲಿ ಜೀವನ ನಡೆಸಲು ಶಿಕ್ಷಣ ಅಗತ್ಯವಿದೆ ಎಂದರು.
ಕಳೆದ ಬಾರಿ ಹಾಸನ ಜಿಲ್ಲೆಯು ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲಿ 6 ಸ್ಥಾನ ಪಡೆದಿದೆ. ಈ ಬಾರಿ ಇನ್ನೂ ಉತ್ತಮ ಸ್ಥಾನ ಪಡೆಯಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಓದಿದ್ದನ್ನು ನೆನಪಿಟ್ಟುಕೊಳ್ಳಲು ಪುನರ್ ಮನನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು.
ಆ.1 ರಂದು ವ್ಯಸನ ಮುಕ್ತ ದಿನಾಚರಣೆ ಆಚರಿಸುತ್ತಿದ್ದು, ಮಕ್ಕಳು ಯಾವುದೇ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಡಿ. ತಮ್ಮ ಮನೆಗಳಲ್ಲಿ ಯಾರಾದರೂ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೆ ಬಿಡಿಸಲು ಪ್ರಯತ್ನಿಸಿ ಎಂದರು.
ಅಶಿಸ್ತು, ನಿದ್ದೆ, ಮನೋರಂಜನೆ, ಮದುವೆ ಸಮಾರಂಭ, ಸಿನಿಮಾ ಸಂತೋಷ ಕೂಟಗಳಲ್ಲಿ ಭಾಗಿಯುವುದನ್ನು ತ್ಯಜಿಸಬೇಕು. ಓದಿಗಷ್ಟೆ ಒತ್ತು ನೀಡಿ ಗುರಿ ಸಾಧಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಮಕ್ಕಳು ನೆನಪಿಟ್ಟುಕೊಳ್ಳಲು ಹೇಗೆ ಓದಬೇಕು ಎಂಬುವುದರ ಬಗ್ಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಮುಂದೆ ಯಾವ ವಿಷಯ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ನಡೆಸಿ ಯಾವ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಪ್ರೌಢ ಶಾಲೆಯ ಹಂತದಲ್ಲಿಯೇ ಮಕ್ಕಳಿಗೆ ಮಾಹಿತಿ ನೀಡಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.



