ಬಳ್ಳಾರಿ: ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಅವುಗಳ ಮಾಹಿತಿಯು ಬಹಳ ಉಪಯುಕ್ತವಾಗಿದ್ದು, ಮಕ್ಕಳು, ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ಎಲ್ಲಾ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ ಕರೆ ನೀಡಿದರು.
ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿನ ನಗರ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2023 ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರೂ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಸಾಹಿತಿಗಳಾದ ನಿಷ್ಟಿ ರುದ್ರಪ್ಪ ಮಾತನಾಡಿ, ಈಗಿನ ಸಂದರ್ಭದಲ್ಲಿ ಆಭರಣ ಮತ್ತು ಹಣ ಮುಖ್ಯವಾಗುವುದಿಲ್ಲ, ಇವುಗಳು ಕಳೆದರೆ ಮತ್ತೆ ಪಡೆದುಕೊಳ್ಳಬಹುದು. ಆದರೆ ಉತ್ತಮ ಪುಸ್ತಕ ಕಳೆದುಕೊಂಡರೆ ಪಡೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ ಅಂದರೆ ಪುಸ್ತಕಕ್ಕೆ ಅಷ್ಟೊಂದು ಮಹತ್ವವಿದೆ ಎಂದರು.
ವೀರಶೈವ ಕಾಲೇಜಿನ ನಿವೃತ್ತ ಗ್ರಂಥಪಾಲಕ ಡಾ.ಬಿ.ಆರ್. ಗದಗಿನ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿ, ಗ್ರಂಥಾಲಯಗಳು ಸಾರ್ವಜನಿಕರ ವಿಶ್ವವಿದ್ಯಾಲಯಗಳಾಗಿವೆ. ಗ್ರಂಥಾಲಯದಲ್ಲಿ ದೊರೆಯುವ ಪುಸ್ತಕಗಳನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು, ಯುವ ಸಮೂಹ ಗ್ರಂಥಾಲಯಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಕರೆನೀಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯ ಉಪನಿರ್ದೇಶಕಿ ಬಿ.ಕೆ. ಲಕ್ಷ್ಮಿಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯದಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಮೂಲಕ, ನಗರ ಕೇಂದ್ರ ಗ್ರಂಥಾಲಯದ ಸದುಪಯೋಗ ಪಡೆದುಕೊಂಡು, ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2023ರ ನಿಮಿತ್ತ, ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ “ಗ್ರಂಥಾಲಯ ಎಂದರೇನು?, ಗ್ರಂಥಾಲಯದ ವಿಧಗಳು ಹಾಗೂ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಉಪಯೋಗ” ಎಂಬ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೈಶಾಲಿ.ಯು.ವಾಗ್ಲೆ ಮತ್ತು ಲಕ್ಷ್ಮಣ.ಎಂ ಅವರು ಉತ್ತಮ ಓದುಗ ಪ್ರಶಸ್ತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಗ್ರಂಥಾಲಯ ಸದುಪಯೋಗ ಪಡೆದುಕೊಂಡು, ಸಾಧನೆ ಮಾಡಿದ ಇಬ್ಬರಿಗೆ ಉತ್ತಮ ಸಾಧಕ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ, ಗ್ರಂಥಪಾಲಕಿ ಆರ್. ಶಾರದ, ಸಹ ಗ್ರಂಥಪಾಲಕ ಎಸ್.ಟಿ.ಪ್ರಭಾಕರ್, ಗ್ರಂಥಾಲಯ ಸಹಾಯಕ ಸಿದ್ದಪ್ಪ.ಕೆ., ಸಂತೋಷ್ ಕುಮಾರ್.ಎಸ್., ದ್ವಿ.ದ.ಸ ಮಜ್ಜಿಗಿ ವೀರೇಶ, ವಾಹನ ಚಾಲಕ ಶ್ರೀನಿವಾಸ ಸೇರಿದಂತೆ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಸಿಬ್ಬಂದಿ ವರ್ಗದವರು ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




