ಜೂನ್ 21ರಿಂದ ದೇಶದ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ: ನರೇಂದ್ರ ಮೋದಿ

5 years ago

ದೆಹಲಿ: ಭಾರತ ಸರ್ಕಾರದಿಂದ ದೇಶದ ಎಲ್ಲರಿಗೂ ಉಚಿತ ಲಸಿಕಾ ಅಭಿಯಾನ ನಡೆಸಲಾಗುವುದು. ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದಿಂದ ಮೊದಲಿನಂತೆ ಲಸಿಕೆ ಪೂರೈಸಲಾಗುವುದು. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನದಿಂದ ರಾಷ್ಟ್ರೀಯ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಂಜೆ 5 ಗಂಟೆಗೆ ದೇಶದ ಜನರನ್ನುದ್ದೇಶಿಸಿ ಮಾತಾಡಿದ ಅವರು, ಲಸಿಕೆಗಾಗಿ ದೇಶದ ಯಾವುದೇ ರಾಜ್ಯ ಸರ್ಕಾರ ಇನ್ನು ಮುಂದೆ ಯಾವುದೇ ವೆಚ್ಚ ಮಾಡಬೇಕಿಲ್ಲ. ಈವರೆಗೆ ದೇಶದ ಕೋಟ್ಯಂತರ ಜನರಿಗೆ ಉಚಿತ ಲಸಿಕೆ ದೊರೆತಿದೆ. ಈಗ 18 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನ ಜನರಿಗೂ ಭಾರತ ಸರ್ಕಾರ ಉಚಿತ ಲಸಿಕೆ ಪೂರೈಸಲಿದೆ ಎಂದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡಜನರಿಗೆ ನೀಡಲಾಗುವ ಉಚಿತ ಆಹಾರಧಾನ್ಯಗಳ ಸೌಲಭ್ಯವನ್ನು ದೀಪಾವಳಿ, ನವೆಂಬರ್ ಮಾಸದವರೆಗೆ ವಿಸ್ತರಣೆ ಮಾಡುವುದಾಗಿ ಅವರು ಘೋಷಿಸಿದರು.

ಪ್ರಪಂಚದಾದ್ಯಂತ ಕೋವಿಡ್ ಲಸಿಕೆಗಳ ಬೇಡಿಕೆಗೆ ಹೋಲಿಸಿದರೆ, ಅದನ್ನು ಉತ್ಪಾದಿಸುವ ದೇಶಗಳು ಮತ್ತು ಲಸಿಕೆ ತಯಾರಿಸುವ ಕಂಪನಿಗಳು ಬಹಳ ಕಡಿಮೆ. ನಮ್ಮಲ್ಲಿ ಈಗ ಭಾರತದಲ್ಲೇ ಲಸಿಕೆ ತಯಾರಿಸುವ ವ್ಯವಸ್ಥೆ ಇಲ್ಲದಿದ್ದರೆ, ಇಂದು ಭಾರತದಂತಹ ದೊಡ್ಡ ದೇಶದಲ್ಲಿ ಏನಾಗುತ್ತಿತ್ತು ಎಂದು ಊಹಿಸಲೂ ಅಸಾಧ್ಯ ಎಂದರು.

ದೀರ್ಘಕಾಲದ ನಿರಂತರ ಶ್ರಮ ಮತ್ತು ಕಠಿಣ ಪರಿಶ್ರಮದಿಂದಾಗಿ, ಮುಂದಿನ ದಿನಗಳಲ್ಲಿ ಲಸಿಕೆ ಪೂರೈಕೆ ಇನ್ನೂ ಹೆಚ್ಚಾಗಲಿದೆ. ಇಂದು ದೇಶದಲ್ಲಿ 7 ಕಂಪನಿಗಳು ದೇಶದಲ್ಲಿ ವಿವಿಧ ರೀತಿಯ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಇನ್ನೂ ಮೂರು ಲಸಿಕೆಗಳ ಪ್ರಯೋಗವು ಮುಂದುವರಿದ ಹಂತದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ನೂರು ವರ್ಷಗಳಲ್ಲಿ ಇದು (ಕೊರೊನಾ) ಅತಿದೊಡ್ಡ ಸಾಂಕ್ರಾಮಿಕ. ಆಧುನಿಕ ಜಗತ್ತು ಇಂತಹ ಸಾಂಕ್ರಾಮಿಕ ರೋಗವನ್ನು ನೋಡಿಲ್ಲ ಅಥವಾ ಅನುಭವಿಸಿರಲಿಲ್ಲ. ನಮ್ಮ ದೇಶವು ಇಷ್ಟು ದೊಡ್ಡ ಜಾಗತಿಕ ಸಾಂಕ್ರಮಿಕ ರೋಗದೊಂದಿಗೆ ಅನೇಕ ರಂಗಗಳಲ್ಲಿ ಒಟ್ಟಾಗಿ ಹೋರಾಡಿದೆ ಎಂದರು.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ ಎರಡನೇ ಅಲೆಯ ವೇಳೆ ಭಾರತದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ಭಾರತದ ಇತಿಹಾಸದಲ್ಲಿ ಎಂದಿಗೂ ವೈದ್ಯಕೀಯ ಆಮ್ಲಜನಕದ ಅಗತ್ಯತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನುಭವಿಸಿಲ್ಲ. ಈ ಅಗತ್ಯವನ್ನು ಪೂರೈಸಲು, ಸಮರೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಿತು ಎಂದರು.

ಭಾರತ ಸರ್ಕಾರ ಲಸಿಕೆ ಉತ್ಪಾದಕರಿಂದ ಒಟ್ಟು ಉತ್ಪಾದನೆಯ ಶೇ.75 ರಷ್ಟು ಲಸಿಕೆಯನ್ನು ಖರೀದಿಸಿ ಅದನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಲಿದೆ. ಖಾಸಗಿ ವಲಯದ ಆಸ್ಪತ್ರೆಗಳು ಉತ್ಪಾದನೆಯ ಶೇ.25ರಷ್ಟನ್ನು ನೇರವಾಗಿ ಖರೀದಿಸಬಹುದು. ಲಸಿಕೆಯ ನಿಗದಿತ ಬೆಲೆಯ ಮೇಲೆ ಒಂದು ಡೋಸ್‌ಗೆ ಗರಿಷ್ಠ 150 ರೂ.ಗಳ ಸೇವಾ ಶುಲ್ಕ ವಿಧಿಸಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರಗಳು ಅದನ್ನು ಮೇಲ್ವಿಚಾರಣೆ ಮಾಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.

ಕೋವಿಡ್ ಲಸಿಕೆ ಕುರಿತು ಸುಳ್ಳು ಸುದ್ದಿ, ಆತಂಕಗಳನ್ನು ಸೃಷ್ಟಿಸುವವರು, ವದಂತಿಗಳನ್ನು ಹರಡುತ್ತಿರುವವರು, ಮುಗ್ಧ ಸಹೋದರ ಸಹೋದರಿಯರ ಜೀವನದೊಂದಿಗೆ ಆಟವಾಡುತ್ತಿದ್ದಾರೆ. ಇಂತಹ ವದಂತಿಗಳ ಬಗ್ಗೆ ಜಾಗರೂಕರಾಗಿರಬೇಕು. ಯುವಜನತೆ ಈ ವದಂತಿಗಳನ್ನು ದೂರ ಮಾಡಲು ಸಕ್ರಿಯವಾಗಬೇಕು ಎಂದು ಕರೆ ನೀಡಿದರು.

 ದೇಶಾದ್ಯಂತ ಲಸಿಕೆ ನೀಡಿಕೆ ವೇಗವಾಗಿ ನಡೆಯುತ್ತಿದೆ. ವ್ಯಾಕ್ಸಿನ್ ನೀಡಿಕೆ 70ರಿಂದ 90 ಶೇ. ಏರಿಕೆಯಾಗಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಲಸಿಕೆಯು ಕೊರೋನ ವಿರುದ್ಧ ಹೋರಾಟದಲ್ಲಿ ಏಕೈಕ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಲಸಿಕೆ ಉತ್ಪಾದನೆಗೆ ಮಿಷನ್ ಇಂದ್ರಧನುಷ್ ಯೋಜನೆ ರೂಪಿಸಲಾಗಿದೆ. ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಲಾಗುತ್ತಿದೆ. ಈ ಎಲ್ಲದರ ಮಧ್ಯೆ ಎರಡು ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಅದರಲ್ಲೂ ನಾಸಿಕ ಲಸಿಕೆ (ನೇಸಲ್ ವ್ಯಾಕ್ಸಿನ್​) ತರಲು ಪ್ರಯೋಗಗಳು ನಡೆಯುತ್ತಿದ್ದು, ಅದು ಬಂದರೆ ಲಸಿಕೆ ಮೂಲಕ ಕರೊನಾ ತಡೆಯುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ ಎಂದರು.

Leave a Reply